ADVERTISEMENT

ಕೆಎಎಸ್ ಪುತ್ರಿಗೆ ಅಂಗನವಾಡಿ ಶಿಕ್ಷಣ

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 21 ನವೆಂಬರ್ 2019, 19:45 IST
Last Updated 21 ನವೆಂಬರ್ 2019, 19:45 IST
ಅಂಗನವಾಡಿ ಶಿಕ್ಷಕಿಯೊಂದಿಗೆ ಕಲಿಕೆಯಲ್ಲಿರುವ ದಿಶಾನಿ ಪ್ರಸಾದ್
ಅಂಗನವಾಡಿ ಶಿಕ್ಷಕಿಯೊಂದಿಗೆ ಕಲಿಕೆಯಲ್ಲಿರುವ ದಿಶಾನಿ ಪ್ರಸಾದ್   

ಖಾಸಗಿ ಶಾಲೆಗಳಿಗೆ ಸಾಲ ಮಾಡಿಯಾದರೂ ಮಕ್ಕಳನ್ನು ದಾಖಲಿಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ಉನ್ನತ ಶ್ರೇಣಿಯಲ್ಲಿರುವ ಅಧಿಕಾರಿಯೊಬ್ಬರು ತಮ್ಮ ಪುತ್ರಿಯನ್ನು ಅಂಗನವಾಡಿ ಕೇಂದ್ರಕ್ಕೆ ಸೇರಿಸುವ ಮೂಲಕ ಮಾದರಿ ಹೆಜ್ಜೆಯನ್ನಿಟ್ಟಿದ್ದಾರೆ.

ರಾಜಾಜಿನಗರದ ಪಶ್ಚಿಮ ವಲಯದ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಉಪನಿರ್ದೆಶಕರಾದ ಸೌಮ್ಯ ಜಿ ಅವರು ತಮ್ಮ ಪುತ್ರಿ ದಿಶಾನಿ ಪ್ರಸಾದ್ ಅವರನ್ನು ಹೆಸರಘಟ್ಟ ಹೋಬಳಿ ಸೋಲದೇವನಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.

ದಿಶಾನಿ ಪ್ರಸಾದ್

2010ರಲ್ಲಿ ಕೆ.ಎ.ಎಸ್.ಪರೀಕ್ಷೆಯಲ್ಲಿ ತೇರ್ಗಡೆಯಾದ ಸೌಮ್ಯ ಅವರ ಹುಟ್ಟೂರು ಸೋಲದೇವನಹಳ್ಳಿ. ಗಂಗಾಧರ್ ಮತ್ತು ಶಕುಂತಲಾ ಅವರ ಹಿರಿಯ ಪುತ್ರಿ. ಸದಾ ಪುಸ್ತಕದೊಂದಿಗೆ ಒಡನಾಟ ಇರಿಸಿಕೊಂಡಿದ್ದ ಅವರು ಪರಿಶ್ರಮದಿಂದ ಕೆ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾದರು.

ADVERTISEMENT

‘ನನ್ನ ತಾಯಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಮಕ್ಕಳ ಬಗ್ಗೆ ತೋರಿಸುತ್ತಿದ್ದ ಮಮತೆ, ಪ್ರೀತಿ, ಕಾಳಜಿ ನನ್ನಲ್ಲಿಯೂ ಮೊಳಕೆಯೊಡೆದವು. ಶಿಕ್ಷಣಕ್ಕೆ ಬೇಕಾಗಿರುವುದು ಜಂಗಮದ ಮನಸ್ಸು ವಿನಃ ಸ್ಥಾವರದ ಕಟ್ಟಡವಲ್ಲ ಎನ್ನುವ ನಿಲುವು ಅಮ್ಮನದ್ದು. ಅಂಗನವಾಡಿಗೆ ಬರುವ ಪ್ರತಿ ಮಕ್ಕಳನ್ನು ಅವರು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಆ ನಿಲುವು ನನ್ನ ಬದುಕಿನ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿಯೇ ನನ್ನ ಮಗಳನ್ನು ಅಂಗನವಾಡಿಗೆ ಸೇರಿಸಿದೆ’ ಎನ್ನುತ್ತಾರೆ ಸೌಮ್ಯ ಅವರು.

ಕೆಎಎಸ್ ಅಧಿಕಾರಿ ಸೌಮ್ಯ

‘ಉಪನಿರ್ದೇಶಕರ ಮಗಳೊಬ್ಬಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಿರುವ ವಿಷಯ ಗ್ರಾಮದಲ್ಲಿ ಹಬ್ಬಿದ್ದರಿಂದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕರೆ ತರುತ್ತಿದ್ದಾರೆ? ಎಂದು ಅಂಗನವಾಡಿ ಶಿಕ್ಷಕಿ ಪ್ರತಿಭಾ ಸಂತಸ ವ್ಯಕ್ತಪಡಿಸುತ್ತಾರೆ.

ಸರ್ಕಾರಿ ಅಧಿಕಾರಿಗಳ ಇಂಥ ಸ್ಪಂದನೆಯಿಂದ ಸರ್ಕಾರಿ ಕೇಂದ್ರಗಳು ಉತ್ತಮಗೊಂಡು ಜನರಲ್ಲಿ ಅತ್ಮವಿಶ್ವಾಸ ಹೆಚ್ಚುತ್ತದೆ ಎನ್ನುವುದು ಗ್ರಾಮಸ್ಥರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.