ADVERTISEMENT

ಕಾನ್ಫರೆನ್ಸ್ ಕಾಲ್ ಟೀಚಿಂಗ್...

ಶನಿವಾರಸಂತೆ ಮುಳ್ಳೂರು ಶಾಲೆಯಲ್ಲಿ ವಿಶಿಷ್ಟ ಕಲಿಕಾ ವಿಧಾನ ಅಳವಡಿಕೆ

ಶ.ಗ.ನಯನತಾರಾ
Published 15 ಮಾರ್ಚ್ 2019, 11:23 IST
Last Updated 15 ಮಾರ್ಚ್ 2019, 11:23 IST
ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಿ.ಎಸ್. ಸತೀಶ್ ತಂತ್ರಜ್ಞಾನ ಬಳಸಿ ವಿಶಿಷ್ಟ ಕಲಿಕಾ ಶೈಲಿಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾಡುತ್ತಿರುವ ‘ಕಾನ್ಫರೆನ್ಸ್ ಕಾಲ್ ಟೀಚಿಂಗ್’ 
ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಿ.ಎಸ್. ಸತೀಶ್ ತಂತ್ರಜ್ಞಾನ ಬಳಸಿ ವಿಶಿಷ್ಟ ಕಲಿಕಾ ಶೈಲಿಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾಡುತ್ತಿರುವ ‘ಕಾನ್ಫರೆನ್ಸ್ ಕಾಲ್ ಟೀಚಿಂಗ್’    

ತಂತ್ರಜ್ಞಾನಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ವಿನೂತನವಾಗಿ ಅತ್ಯಂತ ಸರಳವಾಗಿ ಬಳಸಿಕೊಳ್ಳುವುದರ ಮೂಲಕ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿಶಿಷ್ಟ ಕಲಿಕಾ ಶೈಲಿಯನ್ನು ಪರಿಚಯಿಸಿದೆ. ಅದುವೇ ‘ಕಾನ್ಫರೆನ್ಸ್ ಕಾಲ್ ಟೀಚಿಂಗ್’.

ಈ ಬಾರಿ ಶೈಕ್ಷಣಿಕ ವರ್ಷಾರಂಭದಲ್ಲಿ ಹಲವಾರು ಮುಷ್ಕರಗಳು, ವಿಪರೀತ ಮಳೆ, ಪ್ರಕೃತಿ ವಿಕೋಪ, ಗಣ್ಯ ವ್ಯಕ್ತಿಗಳ ನಿಧನ, ವಿವಿಧ ನೂತನ ಜಯಂತಿ... ಹೀಗೆ ಹಲವು ಕಾರಣಗಳಿಂದಾಗಿ ಶಾಲೆ-ಕಾಲೇಜುಗಳ ಪಠ್ಯ ಬೋಧನೆಯಲ್ಲಿ ವ್ಯತ್ಯಾಸ ಉಂಟಾಗಿತ್ತು.

ಕಡಿತಗೊಂಡ ಶಾಲಾ ಅವಧಿಗಳನ್ನು ಸರಿದೂಗಿಸಲು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹಲವೆಡೆ ಬೆಳಿಗ್ಗೆ ಮತ್ತು ಸಂಜೆಯ ವಿಶೇಷ ತರಗತಿಗಳು ಮತ್ತು ಶನಿವಾರದ ದಿನ ಪೂರ್ತಿ ತರಗತಿಗಳನ್ನು ನಡೆಸುವ ಮೂಲಕ ಹಿಂದೆ ಬಿದ್ದ ಕಲಿಕಾಂಶಗಳನ್ನು ಪೂರ್ಣಗೊಳಿಸುವ ಯತ್ನ ಮಾಡಲಾಗುತ್ತಿದೆ. ಆದರೆ, ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಿ.ಎಸ್.ಸತೀಶ್ ‘ಕಾನ್ಫರೆನ್ಸ್ ಕಾಲ್ ಟೀಚಿಂಗ್’ ಮೂಲಕ ವಿಶೇಷವಾಗಿ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿದ್ದಾರೆ.

ADVERTISEMENT

ಏನಿದು ’ಕಾನ್ಫರೆನ್ಸ್ ಕಾಲ್ ಟೀಚಿಂಗ್’?:

ಇದು ತಂತ್ರಜ್ಞಾನ ಆಧಾರಿತ ಸಂವಹನ ಯುಗ. ಸಾಮಾನ್ಯವಾಗಿ ಎಲ್ಲರೂ ವಾಟ್ಸ್‌ಆ್ಯಪ್‌ ಮೂಲಕ ಪಠ್ಯ ಸಂಬಂಧಿ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಲವಾರು ಖಾಸಗಿ ಶಾಲೆಗಳು ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡು ಪೋಷಕರಿಗೆ, ವಿದ್ಯಾರ್ಥಿಗಳಿಗೆ ಶಾಲಾ ಮಾಹಿತಿಗಳನ್ನು ತಿಳಿಸುವ ಕೆಲಸ ಮಾಡುತ್ತಿವೆ.

ಆದರೆ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಇದು ಕಷ್ಟ ಸಾಧ್ಯ. ಹೆಚ್ಚಿನ ಪೋಷಕರು ಅನಕ್ಷರಸ್ಥರು ಹಾಗೂ ವಾಟ್ಸ್‌ಆ್ಯಪ್‌ ಬಳಕೆ ವಿರಳವಾಗಿದೆ. ಆದರೆ, ಪ್ರತಿ ಮನೆಯಲ್ಲೂ ಮೊಬೈಲ್ ಅಂತೂ ಇದ್ದೇ ಇದೆ. ಅದನ್ನೇ ಬಳಸಿಕೊಂಡು ಶಿಕ್ಷಕರು ಮಕ್ಕಳು ಮನೆಗೆ ಹೋದ ನಂತರ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ತರಗತಿಯ ವಿದ್ಯಾರ್ಥಿಗಳಿಗೆ ಕಾನ್ಫರೆನ್ಸ್ ಕಾಲ್ ಸೌಲಭ್ಯದ ಮೂಲಕ ಏಕಕಾಲದಲ್ಲಿ ಒಂದೊಂದು ತರಗತಿಯ ಏಳರಿಂದ ಎಂಟು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾರೆ.

‘ಎಲ್ಲರ ಮೊಬೈಲ್‌ಗಳಲ್ಲೂ ಈ ಸೌಲಭ್ಯವಿರುತ್ತದೆ. ಒಬ್ಬರಿಗೆ ಕರೆ ಮಾಡಿ, ಮತ್ತೆ ಹೊಸ ಕರೆ ಆಯ್ಕೆ ಮೂಲಕ ಇನ್ನೊಬ್ಬರಿಗೆ ಕರೆ ಮಾಡಿ, ಆ ಕರೆಗಳನ್ನು ಮರ್ಜ್‌ ಮಾಡುತ್ತ ಬರಬೇಕು. ಏಕಕಾಲದಲ್ಲಿ ಎಂಟರಿಂದ ಹತ್ತು ವಿದ್ಯಾರ್ಥಿಗಳನ್ನು ಕರೆಯಲ್ಲಿ ನಿರತರಾಗುವಂತೆ ಮಾಡಿ ಬೋಧನೆ ಮಾಡಬಹುದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಪ್ರತಿನಿತ್ಯ ಈ ಮೂಲಕ ಗಮನಿಸಬಹುದಲ್ಲದೇ ಕೆಲ ಮನೆಗಳಲ್ಲಿ ಪೋಷಕರು ಹಲವು ಕಾರಣಗಳಿಂದ ತಮ್ಮ ಮಕ್ಕಳ ಕಲಿಕೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಅಂತಹ ಮಕ್ಕಳ ಬಗ್ಗೆ ಕೂಡ ನಿಗಾ ವಹಿಸಲು ಇದು ನೆರವಾಗುತ್ತದೆ’ ಎನ್ನುತ್ತಾರೆ ಶಿಕ್ಷಕ ಸತೀಶ್.

ಪ್ರಸ್ತುತ ಶಿಕ್ಷಕರು 3, 4, 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೊಂದು ವಿಷಯದಂತೆ ಆಕರ್ಷಣೀಯವಾಗಿ ಕಾನ್ಫರೆನ್ಸ್ ಕಾಲ್ ಮೂಲಕ ಬೋಧಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಕಲಿಯುತ್ತಿದ್ದು ಸಂಜೆ ತಮ್ಮ ಬರವಣಿಗೆಗಳನ್ನು ಬೇಗ ಬೇಗ ಮುಗಿಸಿಕೊಂಡು ಶಿಕ್ಷಕರ ಕರೆಗಾಗಿ ಕಾಯುತ್ತಿರುವುದಾಗಿ ತಿಳಿಸುತ್ತಾರೆ. ಪೋಷಕರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅಲ್ಲದೇ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಅತಿ ಉಪಯುಕ್ತ ತರಗತಿಗಳನ್ನು ಶಿಕ್ಷಕರು ಇತರ ಕೆಲಸದಲ್ಲಿ ನಿರತರಾದಾಗ ಮಕ್ಕಳಿಗೆ ಕೇಳಿಸುತ್ತಾರೆ.

ಸರ್ಕಾರಿ ಶಾಲಾ ಶಿಕ್ಷಕರಿಗೆ ತರಬೇತಿಗಳು, ಮಾಹಿತಿ ರವಾನೆ... ಹೀಗೆ ಹಲವಾರು ಕಾರಣಗಳಿಂದ ಹಲವು ದಿನಗಳವರೆಗೆ ವಿದ್ಯಾರ್ಥಿಗಳಿಂದ ದೂರವಾಗಿ ಇರಬೇಕಾದ ಸಂದರ್ಭಗಳು ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಕಾನ್ಫರೆನ್ಸ್ ಕಾಲ್ ಟೀಚಿಂಗ್ ಮೂಲಕ ವಿದ್ಯಾರ್ಥಿಗಳೊಂದಿಗೆ ದಿನ ತಪ್ಪದಂತೆ ಸಂವಹನದಲ್ಲಿರಬಹುದು ಮತ್ತು ಸುಲಭವಾಗಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆಯನ್ನು ಮಾಡಬಹುದು.

ಮಲೆನಾಡು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ವಿಪರೀತ ಮಳೆಯ ಕಾರಣ ಹಲವಾರು ದಿನಗಳ ಕಾಲ ರಜೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಕಾನ್ಫರೆನ್ಸ್ ಕಾಲ್ ಟೀಚಿಂಗ್ ಮೂಲಕ ವಿದ್ಯಾರ್ಥಿಗಳಿಗೆ ಕೊರತೆಯಾಗುವ ಶಾಲಾ ಅವಧಿಗಳನ್ನು ಸರಿದೂಗಿಸಬಹುದು. ಹೈಸ್ಕೂಲ್ ಹಂತದಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿರುವಾಗಲೂ ಕಾನ್ಫರೆನ್ಸ್ ಕಾಲ್ ಮೂಲಕ ಗಮನಿಸುವುದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಇದು ವರದಾನವಾಗಬಹುದು. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವಂತೆ ಕಲಿಸಲೇಬೇಕು ಎಂಬ ಛಲವಿರುವ ಶಿಕ್ಷಕರು 24 ಗಂಟೆಗಳ ವೃತ್ತಿಪರತೆಯನ್ನು ಕಾಯ್ದುಕೊಳ್ಳಬೇಕೆಂಬ ಸಂದೇಶ ಸಾರುತ್ತಿದ್ದಾರೆ. ಇಂತಹ ಶಿಕ್ಷಕರ ಕಾರ್ಯತತ್ಪರತೆ ಇತರರಿಗೂ ಅನುಕರಣೀಯವಾಗಿರಲಿ ಎಂದು ಶಿಕ್ಷಕ ಸತೀಶ್ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.