ADVERTISEMENT

ದ್ವಿತೀಯ ಪಿಯು: ಹಾಸನಕ್ಕೆ ಆರನೇ ಸ್ಥಾನ, ನಿಕೇತನ್‌ಗೌಡ ರಾಜ್ಯಕ್ಕೆ ತೃತೀಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 15:19 IST
Last Updated 15 ಏಪ್ರಿಲ್ 2019, 15:19 IST
ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಹಾಸನದ ಮಾಸ್ಟರ್‌ ಪಿಯು ಕಾಲೇಜಿನ ವಿದ್ಯಾರ್ಥಿ ನಿಕೇತನ್‌ಗೌಡಗೆ ಅವರ ತಾಯಿ ರೂಪ ಸಿಹಿ ತಿನಿಸಿದರು
ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಹಾಸನದ ಮಾಸ್ಟರ್‌ ಪಿಯು ಕಾಲೇಜಿನ ವಿದ್ಯಾರ್ಥಿ ನಿಕೇತನ್‌ಗೌಡಗೆ ಅವರ ತಾಯಿ ರೂಪ ಸಿಹಿ ತಿನಿಸಿದರು   

ಹಾಸನ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 75.19 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆ ಆರನೇ ಸ್ಥಾನ ಪಡೆದಿದೆ. ಕಳೆದ ಬಾರಿ ಎಂಟನೇ ಸ್ಥಾನವನ್ನು ಜಿಲ್ಲೆ ಪಡೆದಿತ್ತು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಮಾಸ್ಟರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಡಿ.ನಿಕೇತನ್‍ಗೌಡ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿ ನಿಕೇತನ್ 600 ಕ್ಕೆ 592 (ಶೇಕಡಾ 98.66) ಅಂಕಗಳನ್ನು ಪಡೆದಿದ್ದು, ರಾಜ್ಯದ ಇನ್ನಿಬ್ಬರು ವಿದ್ಯಾರ್ಥಿಗಳೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ADVERTISEMENT

ಕನ್ನಡದಲ್ಲಿ 98, ಇಂಗ್ಲಿಷ್ 94 ಅಂಕ ಪಡೆದಿರುವ ನಿಕೇತನ್, ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಹಾಗೂ ಜೀವವಿಜ್ಞಾನ ವಿಷಯಗಳಲ್ಲಿ ಶೇಕಡಾ 100 ಅಂಕ ಗಳಿಸಿದ್ದಾರೆ. ಅವರು ನಗರದ ವಕೀಲ ದೇವರಾಜೇಗೌಡ ಹಾಗೂ ರೂಪಾ ದಂಪತಿಯ ಪುತ್ರ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತನ್ನ ತಾಯಿ ರೂಪಾ ಅವರೊಂದಿಗೆ ಕಾಲೇಜಿಗೆ ಬಂದ ನಿಕೇತನ್ ಅವರನ್ನು ಕಿರಿಯ ವಿದ್ಯಾರ್ಥಿಗಳು ಸಂಭ್ರಮದಿಂದ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಅಭಿನಂದಿಸಿ ಸಿಹಿ ತಿನ್ನಿಸಿದರು.

ಬಾಲಕಿಯರು ಶೇಕಡಾ 74.14 ಹಾಗೂ ಬಾಲಕರು ಶೇಕಡಾ 63.17 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ಪರೀಕ್ಷೆ ಬರೆದ 13,980 ವಿದ್ಯಾರ್ಥಿಗಳ ಪೈಕಿ 10,511 ಜನರು ತೇರ್ಗಡೆ ಹೊಂದಿದ್ದಾರೆ.
ಕಲಾ ವಿಭಾಗದಲ್ಲಿ 3,951 ವಿದ್ಯಾರ್ಥಿಗಳ ಪೈಕಿ 2,797 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5,639 ವಿದ್ಯಾರ್ಥಿಗಳ ಪೈಕಿ 4,386 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 4,390 ವಿದ್ಯಾರ್ಥಿಗಳ ಪೈಕಿ 3,331 ಜನರು ಪಾಸಾಗಿದ್ದಾರೆ.ಆಂಗ್ಲ ಮಾಧ್ಯಮದಲ್ಲಿ ಶೇಕಡಾ 72.36 ರಷ್ಟು ಮತ್ತು ಕನ್ನಡ ಮಾಧ್ಯಮದಲ್ಲಿ ಶೇಕಡಾ 66.89ರಷ್ಟು ಫಲಿತಾಂಶ ಸಿಕ್ಕಿದೆ.

ಶೇಕಡಾ 100 ಫಲಿತಾಂಶ: ಹಾಸನದ ಮಾಸ್ಟರ್ಸ್ ಪಿಯು ಕಾಲೇಜು, ಸೆಂಟ್ರಲ್ ಪಿಯು ಕಾಲೇಜು, ವಿದ್ಯಾನಿಕೇತನ ಪಿಯು ಕಾಲೇಜು, ಬೂವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಬೈಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಚನ್ನರಾಯಪಟ್ಟಣ ತಾಲ್ಲೂಕಿನ ಕ್ರೈಸ್ತ ಕಿಂಗ್ ಪಿಯು ಕಾಲೇಜು, ಸಕಲೇಶಪುರ ತಾಲ್ಲೂಕಿನ ಯಸಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಶೇಕಡಾ 100ರಷ್ಟು ಫಲಿತಾಂಶ ಪಡೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.