ADVERTISEMENT

‘ವಾಯು ಮಾಲಿನ್ಯ ನಿಯಂತ್ರಣ’ಕ್ಕೆ ಆನ್‌ಲೈನ್ ಕೋರ್ಸ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 4:08 IST
Last Updated 24 ಜನವರಿ 2022, 4:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೈಗಾರಿಕಾ ಕ್ರಾಂತಿ, ಆಧುನಿಕ ತಂತ್ರಜ್ಞಾನ ಮತ್ತು ಮಾನವ ಲಾಲಸೆಗಳ ಅಪಾಯಕಾರಿ ಕೊಡುಗೆಯೆಂದೇ ಗುರುತಿಸಲಾಗುವ ವಾಯುಮಾಲಿನ್ಯ, ಮಾರಣಾಂತಿಕ ಕಾಯಿಲೆಗಳಿಗಿಂತ ಹೆಚ್ಚು ಮಾನವ ಪ್ರಾಣ ಹರಣ ಮಾಡುತ್ತಿದೆ. ಹಿಮಖಂಡಗಳು ಕರಗಿ, ಭೂಮಿ ಬಿಸಿ ಏರಿ, ಮಳೆ ಚಕ್ರಗಳು ತಿರುಗು ಮುರುಗಾಗಲು ವಾಯು ಮಾಲಿನ್ಯವೇ ಕಾರಣ ಎಂದು ನಿರ್ಧಾರವಾಗಿದೆ.

ಓಝೋನ್ ಪದಗಳನ್ನು ಛಿದ್ರಮಾಡಿ, ‘ಜೀವ ಸಂಕುಲ‘ಕ್ಕೆ ಮಾರಕವಾಗಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಸ್ಥಳೀಯ ಹಾಗೂ ವಿಶ್ವ ಮಟ್ಟದಲ್ಲಿ ಚರ್ಚೆ, ಸಂವಾದಗಳು ನಡೆಯುತ್ತಿವೆ.

ಈ ಚರ್ಚೆ–ಸಂವಾದಗಳಿಗೆ ಪೂರಕವಾದ ಪಠ್ಯಕ್ರಮದ ಅಧ್ಯಯನ ಅಗತ್ಯ ಎಂಬುದನ್ನು ಮನಗಂಡ ರೂರ್ಕಿ ಐಐಟಿ (IIT ROORKEE) ಕೇಂದ್ರ ಸರ್ಕಾರದ SWAYAM (Study Webs of Active – Learning for Young Aspiring Minds) ಸಹಯೋಗದಲ್ಲಿ ಆನ್‌ಲೈನ್ ಕೋರ್ಸ್ ಪ್ರಾರಂಭಿಸಿದೆ. ಕಡಿಮೆ ಅವಧಿಯ ಹಾಗೂ ಕಡಿಮೆ ವೆಚ್ಚದ ಈ ಕೋರ್ಸ್‌ಗಾಗಿ ವಿಶೇಷ ಪಠ್ಯಗಳನ್ನು ಸಿದ್ಧಪಡಿಸಿದೆ.

ADVERTISEMENT

ಇಂದಿನಿಂದ (ಜನವರಿ 24) ಕೋರ್ಸ್ ಪ್ರಾರಂಭವಾದರೂ, ಕೋರ್ಸ್ ದಾಖಲಾತಿಗೆ ಜನವರಿ 31ರವರೆಗೆ ಅವಕಾಶವಿದೆ.

ಮೂರು ತಿಂಗಳಿನ ಈ ಕೋರ್ಸ್‌ನಲ್ಲಿ ಒಟ್ಟು 12 ಮಾಡ್ಯೂಲ್‌ಗಳಿರುತ್ತವೆ. ವಾಯುಮಾಲಿನ್ಯಕ್ಕೆ ಕಾರಣ, ವಿಧಗಳು, ನಿಯಂತ್ರಣಕ್ಕೆ ಬೇಕಾದ ತಂತ್ರಜ್ಞಾನ, ಅವುಗಳ ಬಳಕೆ, ನಿರ್ಮಾಣ, ಒಳಾಂಗಣ ಮಾಲಿನ್ಯ, ಅಂತರರಾಷ್ಷ್ರೀಯ ಒಪ್ಪಂದಗಳು, ಓಝೋನ್ ಪದರಕ್ಕೆ ಹಾನಿ, ಉಪಗ್ರಹ ಮಾಹಿತಿ ವಿಶ್ಲೇಷಣೆಗಳ ಕುರಿತು ವಿಸ್ತೃತವಾಗಿ ಕಲಿಸಲಾಗುತ್ತದೆ. ಕೊನೆಯ ಎರಡು ಮಾಡ್ಯೂಲ್‌ಗಳಲ್ಲಿ ಪ್ರಾಯೋಗಿಕ ಸಲಹೆಗಳಿರುತ್ತವೆ. ಸಿವಿಲ್ ಎಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ನಿಂದ ಹೆಚ್ಚು ಅನುಕೂಲ.

ಶುಲ್ಕ ವಿವರ: ₹1ಸಾವಿರ ಪರೀಕ್ಷಾ ಶುಲ್ಕ ಪಾವತಿಸಿ, ಮೂರು ಗಂಟೆಗಳ ಪರೀಕ್ಷೆಯನ್ನು ಯಾವುದಾದರೂ ಆಯ್ದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬರೆಯಬೇಕು. ಪ್ರಮಾಣ ಪತ್ರವನ್ನು ಐಐಟಿ ರೂರ್ಕಿ ಮತ್ತು NPTEL(National Program on Technology Enhanced Learning) ಗಳು ಜಂಟಿಯಾಗಿ ನೀಡುತ್ತವೆ.

ಕೋರ್ಸ್ ಕುರಿತ ವಿವರಕ್ಕಾಗಿ ಈ ಲಿಂಕ್ ನೋಡಿ: https://onlinecourses.nptel.ac.in

***

ವಿದ್ಯಾರ್ಹತೆ: ವಿಜ್ಞಾನ / ಎಂಜಿನಿಯರಿಂಗ್ ಪದವಿ ಅಥವ ಸ್ನಾತಕೋತ್ತರ ಪದವಿ.

ಅವಧಿ: 12 ವಾರಗಳು

ಕೋರ್ಸ್ ಪ್ರಾರಂಭದ ದಿನಾಂಕ: 24 ಜನವರಿ 2022

ಮುಕ್ತಾಯದ ದಿನಾಂಕ: 15 ಏಪ್ರಿಲ್ 2022

ದಾಖಲಾತಿಗೆ ಕೊನೆಯ ದಿನಾಂಕ : 31 ಜನವರಿ 2022

ಪರೀಕ್ಷೆ : 24 ಏಪ್ರಿಲ್ 2022

ಪರೀಕ್ಷಾ ಶುಲ್ಕ : ₹1000

ಕ್ರೆಡಿಟ್ ಪಾಯಿಂಟ್‌ಗಳು : 03

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.