ADVERTISEMENT

ಕೂಲಿ ಮಾಡಿ ಫೀಸು ಕಟ್ಟಿದ ವಿದ್ಯಾರ್ಥಿಗೆ ಶೇ 96 ಅಂಕ

ಕಲಾ ವಿಭಾಗದಲ್ಲಿ ಕಣವಿ ಸಿದ್ದಗೇರಿ ಸಿದ್ದಪ್ಪನ ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:15 IST
Last Updated 16 ಏಪ್ರಿಲ್ 2019, 20:15 IST
ತಾಯಿ ಹಾಗೂ ಸಂಬಂಧಿಕರೊಂದಿಗೆ ಸಿದ್ದಪ್ಪ
ತಾಯಿ ಹಾಗೂ ಸಂಬಂಧಿಕರೊಂದಿಗೆ ಸಿದ್ದಪ್ಪ   

ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಕೂಲಿ ಕೆಲಸ ಮಾಡಿ ಓದಿದ, ತಾಲ್ಲೂಕಿನ ಕಣವಿ ಸಿದ್ದಗೇರಿ ಗ್ರಾಮದ ಸಿದ್ದಪ್ಪ ಬಸಪ್ಪ ಚೂರೇರ, ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಶೇ 96.6 ಅಂಕ ಪಡೆದಿದ್ದಾನೆ. ಇದರೊಂದಿಗೆ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶ್ರೇಯವನ್ನೂ ತನ್ನದಾಗಿಸಿಕೊಂಡಿದ್ದಾನೆ.

ಕಡುಬಡತನದಲ್ಲಿ ಬೆಳೆದ ಈತನಿಗೆ ತಂದೆ ಇಲ್ಲ. ತಾಯಿ ಗೀತಮ್ಮ ಕೂಲಿ ಕೆಲಸ ಮಾಡುತ್ತಾರೆ. ಸೋದರ ಭರಮಪ್ಪ ಈ ಸಲ 10ನೇ ತರಗತಿ ಓದುತ್ತಿದ್ದು ಇಬ್ಬರ ಓದಿನ ವೆಚ್ಚ, ಮನೆ ಖರ್ಚು ಎಲ್ಲವೂ ತಾಯಿಯ ಹೆಗಲಿಗೇ ಬೀಳುತ್ತದೆ. ಹೀಗಾಗಿ, ಬೇರೆಯವರ ಜಮೀನಿನಲ್ಲಿ ಅವರದು ನಿತ್ಯ ದಣಿವರಿಯದ ದುಡಿಮೆ. ತಾಯಿಯ ಈ ಶ್ರಮವನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕೆಂದುಕೊಂಡ ಸಿದ್ದಪ್ಪ, ರಜಾ ದಿನಗಳಲ್ಲಿ ತಾನೂ ಕೂಲಿ ಮಾಡುತ್ತಿದ್ದ. ಹೀಗೆ ಸಂಪಾದಿಸಿದ ಹಣದಿಂದಲೇ ಕಾಲೇಜಿನ ಶುಲ್ಕ ಭರಿಸಿದ ಮತ್ತು ಕಷ್ಟಪಟ್ಟು ಓದಿದ ಎನ್ನುತ್ತಾರೆ ಆತನ ಚಿಕ್ಕಪ್ಪ ರೇವಣೆಪ್ಪ.

‘ನಿತ್ಯ ನಾಲ್ಕು ತಾಸು ಓದುತ್ತಿದ್ದೆ. ಉಪನ್ಯಾಸಕರು ಹೇಳಿದ್ದನ್ನು ಮನೆಯಲ್ಲಿ ಮತ್ತೊಮ್ಮೆ ಮನದಟ್ಟು ಮಾಡಿಕೊಳ್ಳುತ್ತಿದ್ದೆ. ಹೀಗಾಗಿ ಸುಲಭವಾಯಿತು. ರಜಾ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ, ಸಂಜೆ ಓದುತ್ತಿದ್ದೆ. ಯಾವುದೇ ಸಮಸ್ಯೆ ಇದ್ದರೂ ಉಪನ್ಯಾಸಕರು ಉತ್ತಮ ರೀತಿಯಲ್ಲಿ ಪರಿಹರಿಸುತ್ತಿದ್ದರು. ಅವರ ಸಹಕಾರದಿಂದ ಉತ್ತಮ ಅಂಕ ಗಳಿಕೆ ಸಾಧ್ಯವಾಯಿತು’ ಎಂದು ಸಿದ್ದಪ್ಪ ಕೃತಜ್ಞತೆ ಸಲ್ಲಿಸಿದ.

ADVERTISEMENT

‘ನಾವು ಓದಿದವ್ರಲ್ಲ. ನನ್ನ ಮಗ ಚೆಂದಾಗಿ ಓತ್ತಾನ ಅಂತ ತಿಳಿದಿತ್ತು. ಜಿಲ್ಲಾಕ್ಕ ಫಸ್ಟ್‌ ಬಂದಾನಂತ ಊರ ಜನ ಮಾತಾಡೋ ಮುಂದ ನನಗ ಸಂತೋಷದಿಂದ ಕಣ್ಣೀರು ಬಂತು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ್ದು ಸಾರ್ಥಕ ಆತು’ ಎಂದು ಖುಷಿ ಹಂಚಿಕೊಂಡರು ಗೀತಮ್ಮ.

‘ಶ್ರಮ ಹಾಗೂ ಸತತ ಅಭ್ಯಾಸದಿಂದ ಸಿದ್ದಪ್ಪ ಉತ್ತಮ ಸಾಧನೆ ಮಾಡಿದ್ದಾನೆ. ಈತನ ಸಾಧನೆ ಉಳಿದವರಿಗೂ ಸ್ಫೂರ್ತಿಯಾಗಬೇಕು. ಜಿಲ್ಲೆಗೆ ಪ್ರಥಮ ಬಂದಿದ್ದು ನಮ್ಮ ಸಂಸ್ಥೆಗೆ ತುಂಬಾ ಹೆಮ್ಮೆಯ ವಿಷಯ’ ಎಂದು ರಟ್ಟೀಹಳ್ಳಿಯ ಕುಮಾರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್.ಎನ್.ಅಘನಾಶೀನಿಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.