ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷಾ ದಿಕ್ಸೂಚಿ: ಸಂತಾನೋತ್ಪತ್ತಿ ವ್ಯೂಹ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 19:30 IST
Last Updated 26 ಜನವರಿ 2021, 19:30 IST
(ಚಿತ್ರ 8.11)
(ಚಿತ್ರ 8.11)   

ಜೀವಶಾಸ್ತ್ರ

ಈ ಪಾಠದಲ್ಲಿ ಸಂತಾನೋತ್ಪತ್ತಿ ವ್ಯೂಹದ ಬಗ್ಗೆ ವಿವರವಾಗಿ ತಿಳಿಯೋಣ.

ಪುರುಷ ಸಂತಾನೋತ್ಪತ್ತಿ ವ್ಯೂಹ
(ಚಿತ್ರ 8.10)

ADVERTISEMENT

ಈ ವ್ಯೂಹವು ಲಿಂಗಾಣುಗಳನ್ನು ಉತ್ಪತ್ತಿ ಮಾಡುವ ಭಾಗಗಳು ಮತ್ತು ಅವುಗಳನ್ನು ನಿಶೇಚನಗೊಳ್ಳುವ ಸ್ಥಳಕ್ಕೆ ತಲುಪಿಸುವ ಭಾಗಗಳನ್ನು ಹೊಂದಿದೆ. ಸಂತಾನೋತ್ಪತ್ತಿಯ ಭಾಗಗಳು ಹಾಗೂ ಅವುಗಳ ಕಾರ್ಯಗಳನ್ನು ಕೆಳಗಿನಂತೆ ಚರ್ಚಿಸಬಹುದು.

ವೃಷಣಗಳು: ಗಂಡು ಲಿಂಗಾಣು/ ವೀರ್ಯಾಣುಗಳನ್ನು ಉತ್ಪಾದಿಸುತ್ತವೆ. ಟೆಸ್ಟೋಸ್ಟೆರಾನ್ ಹಾರ್ಮೋನ್‌ನ ಸ್ರವಿಕೆ ಮಾಡುತ್ತವೆ.

ವೀರ್ಯನಾಳ: ವೃಷಣಗಳಲ್ಲಿ ಉತ್ಪತ್ತಿಯಾದ ವೀರ್ಯಾಣುಗಳನ್ನು ಸಾಗಿಸುತ್ತದೆ.

ಮೂತ್ರ ವಿಸರ್ಜನಾ ನಾಳ: ವೀರ್ಯಾಣು ಮತ್ತು ಮೂತ್ರಗಳೆರಡಕ್ಕೂ ಸಾಮಾನ್ಯವಾಗಿದೆ.

ಪ್ರೊಸ್ಟೇಟ್ ಮತ್ತು ವೀರ್ಯಕೋಶಿಕೆ ಗ್ರಂಥಿಗಳು: ತಮ್ಮ ಸ್ರವಿಸುವಿಕೆಯನ್ನು ವೀರ್ಯನಾಳಕ್ಕೆ ಸೇರಿಸಿ ವೀರ್ಯಾಣುಗಳನ್ನು ಸಾಗಿಸಲು ಹಾಗೂ ಪೋಷಣೆಯನ್ನು ಒದಗಿಸಲು ನೆರವಾಗುತ್ತವೆ.

ವೀರ್ಯಾಣು: ಅತ್ಯಂತ ಮಹತ್ವದ ರಚನೆಯಾಗಿದ್ದು ಮುಖ್ಯವಾಗಿ ಅನುವಂಶೀಯ ವಸ್ತುವನ್ನು ಹೊಂದಿದೆ. ಹೆಣ್ಣು ಲಿಂಗಾಣುವಿನ ಕಡೆ ಚಲಿಸಲು ಸಹಾಯ ಮಾಡುವ ಉದ್ದನೆಯ ಬಾಲವನ್ನು ಹೊಂದಿದೆ.

ಟೆಸ್ಟೋಸ್ಟೆರಾನ್ ಹಾರ್ಮೋನ್: ವೀರ್ಯಾಣುಗಳ ಉತ್ಪಾದನೆಯನ್ನು ನಿಯಂತ್ರಣದಲ್ಲಿ ಇಡುತ್ತದೆ ಮತ್ತು ಪ್ರೌಢಾವಸ್ಥೆಯಲ್ಲಿ ಕಂಡು ಬರುವ ದೈಹಿಕ ಬದಲಾವಣೆಗಳಿಗೆ ಕಾರಣವಾಗಿದೆ.

ಸ್ತ್ರೀ ಸಂತಾನೋತ್ಪತ್ತಿಯ ವ್ಯೂಹ
(ಚಿತ್ರ 8.11)

ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ವಿವಿಧ ಭಾಗಗಳು ಹಾಗೂ ಅವುಗಳ ಕಾರ್ಯಗಳನ್ನು ಕೆಳಗಿನಂತೆ ವಿವರಿಸಲಾಗಿದೆ.

ಅಂಡಾಶಯ: ಅಂಡಗಳು/ ಹೆಣ್ಣು ಲಿಂಗಾಣುಗಳನ್ನು ಉತ್ಪಾದಿಸುತ್ತದೆ. ಕೆಲವು ಹಾರ್ಮೋನ್‌ಗಳನ್ನು ಸ್ರವಿಸುತ್ತವೆ.

ಅಂಡನಾಳ/ ಫೆಲೋಪಿಯನ್ ನಾಳ: ಅಂಡವನ್ನು ಅಂಡಾಶಯದಿಂದ ಗರ್ಭಕೋಶಕ್ಕೆ ಸಾಗಿಸುತ್ತದೆ. ವೀರ್ಯಾಣುವು ಅಂಡನಾಳವನ್ನು ಪ್ರವೇಶಿಸಿ ಅಂಡವನ್ನು ಫಲಿತಗೊಳಿಸುತ್ತದೆ.

ನಿಶೇಚನಗೊಂಡ ಅಂಡ/ ಯುಗ್ಮಜ ವಿಭಜಿಸಲು ಪ್ರಾರಂಭಿಸಿ ಭ್ರೂಣಾಂಕುರ (ಎಂಬ್ರಿಯೊ) ವನ್ನು ಉಂಟು ಮಾಡುತ್ತದೆ.

ಗರ್ಭಕೋಶ: ಭ್ರೂಣಾಂಕುರವು ಗರ್ಭಕೋಶದ ಒಳಸ್ತರಿಯ ಮೇಲೆ ಅಂಟಿಕೊಂಡು, ಅಂಗಗಳನ್ನು ಬೆಳೆಸಿಕೊಂಡು ಭ್ರೂಣ (ಫೆಟಸ್‌) ವಾಗುತ್ತದೆ.

ಗರ್ಭಕೋಶದ ಒಳಸ್ತರಿಯು ದಪ್ಪವಾಗುತ್ತದೆ ಮತ್ತು ಬೆಳೆಯುತ್ತಿರುವ ಭ್ರೂಣವನ್ನು ಪೋಷಿಸಲು ಸಾಕಷ್ಟು ರಕ್ತ ಪೂರೈಕೆಯನ್ನು ಹೊಂದಿರುತ್ತದೆ.

ಜರಾಯು (ಪ್ಲಾಸೆಂಟಾ)

ವಿಶೇಷ ಅಂಗಾಂಶವಾದ ಜರಾಯುವಿನ ಮೂಲಕ ಭ್ರೂಣವು ತಾಯಿಯ ರಕ್ತದಿಂದ ಪೋಷಣೆಯನ್ನು ಪಡೆಯುತ್ತದೆ. ಇದು ತಟ್ಟೆಯಂತಹ ರಚನೆಯಾಗಿದ್ದು ಗರ್ಭಕೋಶದ ಗೋಡೆಯೊಳಗೆ ಹುದುಗಿಕೊಂಡಿದೆ. ಇದು ಭ್ರೂಣದ ಅಂಗಾಂಶ ಭಾಗದಲ್ಲಿ ವಿಲ್ಲೈಗಳನ್ನು ಹೊಂದಿದೆ ಮತ್ತು ತಾಯಿಯ ಕಡೆಗಿನ ಭಾಗದಲ್ಲಿ ವಿಲ್ಲೈಗಳನ್ನು ಸುತ್ತುವರೆದಂತಿದೆ.

ತಾಯಿಯಿಂದ ಭ್ರೂಣಕ್ಕೆ ಪೋಷಕಾಂಶ ಮತ್ತು ಆಕ್ಸಿಜನ್ ಹಾದು ಹೋಗಲು ವಿಶಾಲವಾದ ಮೇಲ್ಮೈಯನ್ನು ಒದಗಿಸುತ್ತದೆ. ಭ್ರೂಣದ ತ್ಯಾಜ್ಯ ಪದಾರ್ಥಗಳು ತಾಯಿಯ ರಕ್ತಕ್ಕೆ ಪ್ಲಾಸೆಂಟಾದ ಮೂಲಕವೇ ಹೋಗುತ್ತವೆ.

(ಚಿತ್ರ 8.10)

ಅಂಡವು ಫಲಿತಗೊಳ್ಳದಿದ್ದರೆ ಏನಾಗುತ್ತದೆ?

ಅಂಡವು ಫಲಿತಗೊಳ್ಳದಿದ್ದರೆ ಗರ್ಭಾವಸ್ಥೆಯನ್ನು ತಾಳಲು ಸಜ್ಜಾಗಿದ್ದ ಗರ್ಭಕೋಶದ ಒಳಸ್ತರಿಯ ದಪ್ಪವಾದ ಸ್ಪಂಜಿನಂತಹ ಪದರದ ಅಗತ್ಯವಿಲ್ಲದ ಕಾರಣ, ಅದು ನಿಧಾನವಾಗಿ ಬಿರುಕು ಬಿಟ್ಟು ರಕ್ತ ಮತ್ತು ಲೋಳೆಯ ರೂಪದಲ್ಲಿ ಯೋನಿಯಿಂದ ಹೊರ ಬರುತ್ತದೆ. ಈ ಚಕ್ರವು ಸರಿ ಸುಮಾರು ಪ್ರತೀ ತಿಂಗಳೂ ನಡೆಯುತ್ತದೆ. ಮತ್ತು ಇದನ್ನು ಋತುಚಕ್ರ (ಮೆನ್‌ಸ್ಟ್ರುಯೇಶನ್‌) ಎನ್ನುವರು. ಸಾಮಾನ್ಯವಾಗಿ ಇದು ಎರಡರಿಂದ ಎಂಟು ದಿನಗಳವರೆಗೆ ಮುಂದುವರಿಯುತ್ತದೆ.

ಸಂತಾನೋತ್ಪತ್ತಿಯ ಆರೋಗ್ಯ

ಲೈಂಗಿಕ ಸಂಪರ್ಕದಿಂದ ಉಂಟಾಗಬಹುದಾದ ಸಂಭಾವ್ಯ ರೋಗಗಳು: ಗೊನೋರಿಯಾ ಮತ್ತು ಸಿಫಿಲಿಸ್‌ಗಳಂತಹ ಬ್ಯಾಕ್ಟೀರಿಯಾ ಸೋಂಕುಗಳು ಹಾಗೂ ಪ್ರಜನನಾಂಗದ ಮೇಲಿನ ಗುಳ್ಳೆಗಳು ಮತ್ತು ಎಚ್‌ಐವಿ ಏಡ್ಸ್‌ಗಳಂಥ ವೈರಸ್ ಸೋಂಕುಗಳು.

ಗರ್ಭ ನಿರೋಧಕ ವಿಧಾನಗಳಲ್ಲಿ ಅನೇಕ ವಿಧಗಳಿವೆ.

ವೀರ್ಯಾಣುವು ಅಂಡಾಣುವನ್ನು ತಲುಪದಂತೆ ಯಾಂತ್ರಿಕ ತಡೆಯನ್ನು ಉಂಟು ಮಾಡಬಹುದು. ಶಿಶ್ನದ ಮೇಲೆ ಕಾಂಡೋಮ್ ಧರಿಸುವುದು ಅಥವಾ ಯೋನಿಯೊಳಗೆ ಚೀಲವನ್ನು ಅಳವಡಿಸಿಕೊಳ್ಳುವುದೂ ಈ ಉದ್ದೇಶವನ್ನು ಈಡೇರಿಸುತ್ತದೆ.

ಔಷಧಗಳನ್ನು ಸಾಮಾನ್ಯವಾಗಿ ಮಾತ್ರೆಗಳ ರೂಪದಲ್ಲಿ ಬಾಯಿಯ ಮೂಲಕ ತೆಗೆದುಕೊಳ್ಳುವುದರಿಂದ ಅವುಗಳು ಹಾರ್ಮೋನ್‌ಗಳ ಸಮತೋಲವನ್ನು ಬದಲಾಯಿಸಿ ಅಂಡಗಳು ಬಿಡುಗಡೆಯಾಗದಂತೆ ತಡೆದು ನಿಶೇಚನವು ನಡೆಯುವುದಿಲ್ಲ.

ಗರ್ಭ ನಿರೋಧಕ ಸಾಧನಗಳಾದ ವಂಕಿ ಅಥವಾ ಕಾಪರ್-ಟಿಯನ್ನು ಗರ್ಭಧಾರಣೆಯನ್ನು ತಡೆಯಲು ಅಳವಡಿಸಲಾಗುತ್ತದೆ.

ಶಸ್ತ್ರಕ್ರಿಯಾ ವಿಧಾನಗಳಿಂದ ಪುರುಷರ ವೀರ್ಯನಾಳಕ್ಕೆ ತಡೆಯೊಡ್ಡಿದರೆ ವೀರ್ಯಾಣುವಿನ ವರ್ಗಾವಣೆಯನ್ನು ತಡೆಗಟ್ಟಬಹುದು. ಹಾಗೆಯೇ, ಮಹಿಳೆಯರ ಅಂಡನಾಳಕ್ಕೆ ತಡೆಯೊಡ್ಡಿದರೆ ಅಂಡವು ಗರ್ಭಕೋಶವನ್ನು ತಲುಪಲು ವಿಫಲವಾಗುತ್ತದೆ. ಈ ಎರಡೂ ಪ್ರಕರಣಗಳಲ್ಲಿ ನಿಶೇಚನ ನಡೆಯುವುದಿಲ್ಲ.

ಜನನಪೂರ್ವ ಲಿಂಗ ನಿರ್ಧರಿಸುವಿಕೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಗಿದೆ. ಆರೋಗ್ಯವಂತ ಸಮಾಜಕ್ಕಾಗಿ ಹೆಣ್ಣು-ಗಂಡುಗಳ ಲಿಂಗಾನುಪಾತ ಸಮನಾಗಿರುವಂತೆ ನೋಡಿಕೊಳ್ಳಬೇಕು.

(ಪಾಠ ಸಂಯೋಜನೆ: ಜೀವಶಾಸ್ತ್ರ ವಿಭಾಗ,ಆಕಾಶ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.