ADVERTISEMENT

ಸೀನಿಯರ್ಸ್‌ ಎಂಬ ಗೆಳತಿಯರು

ಅಶ್ವಿನಿ ಕ.ದುರ್ಗಣ್ಣವರ
Published 26 ಫೆಬ್ರುವರಿ 2019, 19:30 IST
Last Updated 26 ಫೆಬ್ರುವರಿ 2019, 19:30 IST
ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ   

ಕಾಲೇಜು ಜೀವನ ಎಂದರೆ ನೆನಪುಗಳ ಹಂದರ. ನನ್ನ ಕಾಲೇಜು ಜೀವನ‌ದಲ್ಲೂ ಅನೇಕ ಅಂಶಗಳು ಮನಸ್ಸಿನ ಮೂಲೆಯಲ್ಲಿ ಸದಾ ಹಸಿರಾಗಿವೆ. ನನಗೆ ಕಾಲೇಜುಎಂದಾಕ್ಷಣ ಥಟ್ಟನೆ ನೆನಪಿಗೆ ಬರುವವರು ನನ್ನ ಸೀನಿಯರ್ಸ್‌ಗಳು. ಸೀನಿಯರ್ಸ್‌ ಎಂದರೆ ರ‍್ಯಾಗಿಂಗ್ ಮಾಡುವವರು, ಕಾಡಿಸುವವರು ಎಂದು ಯೋಚಿಸುವವರೇ ಹೆಚ್ಚು. ಆದರೆ ನನ್ನ ಕಾಲೇಜು ಜೀವನದಲ್ಲಿ ಇದು ತುಂಬಾ ವಿರುದ್ಧವಾಗಿತ್ತು.

ಡಿಗ್ರಿಯ ಮೂರು ವರ್ಷದ ಅವಧಿಯಲ್ಲಿ ನಾನು ಎರಡು ವರ್ಷ ಕಾಲ ಕಳೆದಿದ್ದು ಹೆಚ್ಚಾಗಿ ನನ್ನ ಸೀನಿಯರ್ಸ್‌ಗಳ ಜೊತೆಯಲ್ಲಿಯೇ. ಅದು ಎಷ್ಟರ ಮಟ್ಟಿಗೆ ಎಂದರೆ ಕಾಲೇಜಿನಲ್ಲಿ ಲೆಕ್ಚರರ್‌ಗಳು ಕೂಡ ನನ್ನದು ಯಾವ ಕ್ಲಾಸ್ ಎಂದು ಕನ್ಫ್ಯೂಸ್ ಆಗಿದ್ದು ಉಂಟು. ಅಷ್ಟೊಂದು ನಾನು ಅವರನ್ನು ಹಚ್ಚಿಕೊಂಡಿದ್ದೆ. ಅವರು ಸಹ ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು.

ಜ್ಯೂನಿಯರ್ ಎಂದು ಯಾವತ್ತೂ ಭಾವಿಸಿರಲಿಲ್ಲ. ಸ್ವಂತ ತಂಗಿಯ ರೀತಿಯೇ ಮುದ್ದಿಸುತ್ತಿದ್ದರು, ಕೈ ತುತ್ತು ತಿನ್ನಿಸುತ್ತಿದ್ದರು, ಪುಟ್ಟ ಮಗುವಿನ ರೀತಿ ಕಾಳಜಿ ಮಾಡುತ್ತಿದ್ದರು. ಅವರೊಂದಿಗೆ ಸೇರಿ ಕಾಲೇಜ್ ಕಾರಿಡಾರ್‌ನಲ್ಲಿ ಚೇಷ್ಟೆ ಮಾಡಿದ್ದು, ಲೈಬ್ರರಿಯನ್ನು ಮಾತಿನ ಅಡ್ಡೆ ಮಾಡಿಕೊಂಡಿದ್ದು, ಅಜ್ಜನ ಕ್ಯಾಂಟೀನ್‌ಗೆ ಹೋಗಿ ತಿಂಡಿಗಳನ್ನು ತಂದು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದದ್ದು, ಕ್ಲಾಸ್‌ಗೆ ಬಂಕ್ ಮಾಡಿ ಅವರೊಂದಿಗೆ ಸುತ್ತಾಡಲು ಹೋಗುತ್ತಿದ್ದದ್ದು, ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ತಬ್ಬಿ ಅತ್ತಿದ್ದು ಇವೆಲ್ಲವೂ ಇಂದಿಗೂ ನನ್ನ ಮನಸ್ಸಿನಲ್ಲಿ ಅಳಿಸಲಾಗದ ನೆನಪಾಗಿ ಉಳಿದಿದೆ.

ADVERTISEMENT

ಅವರೆಲ್ಲರೂ ಎಲ್ಲಿಗೆ ಹೋದರು ಕೂಡ ನನ್ನನ್ನು ಬಿಟ್ಟು ಹೋಗದೆ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು. ಹಾಗಂತ ನಾವೆಲ್ಲರೂ ಕೇವಲ ಮಸ್ತಿ ಅಷ್ಟೇ ಮಾಡುತ್ತಿರಲಿಲ್ಲ. ಅದಕ್ಕೆ ತಕ್ಕ ಹಾಗೇ ಓದಿನಲ್ಲೂ ಕೂಡ ಮುಂದಿದ್ದೆವು. ಈಗ ನಾನು ಡಿಗ್ರಿ ಅಂತಿಮ ವರ್ಷದಲ್ಲಿದ್ದೇನೆ. ಆದರೆ ಇದೀಗ ಕಾಲೇಜಿನಲ್ಲಿ ನನ್ನನ್ನು ಒಬ್ಬಂಟಿಯಾಗಿ ಮಾಡಿ ಹೋಗಿದ್ದಾರೆ. ನನ್ನ ನೆಚ್ಚಿನ ಸೀನಿಯರ್ಸ್‌ಗಳಿಲ್ಲದೇ ಕಾಲೇಜು ಬಿಕೋ ಎನ್ನುತ್ತಿದೆ, ಅವರೆಲ್ಲರೊಟ್ಟಿಗೆ ಕಳೆದ ದಿನಗಳನ್ನು ಕಾಲೇಜಿಗೆ ಹೋದಾಗ ನೆನೆದು ಕಣ್ಣಂಚಲ್ಲಿ ಕಣ್ಣೀರು ತುಂಬಿಕೊಳ್ಳುವುದಂತೂ ಸುಳ್ಳಲ್ಲ.

ಮಿಸ್ ಯು ಮೈ ಡಿಯರ್ ಸೀನಿಯರ್ಸ್‌

ಅಶ್ವಿನಿ ಕ. ದುರ್ಗಣ್ಣವರ, ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.