ADVERTISEMENT

ವೈದ್ಯಕೀಯ ಕಾಲೇಜುಗಳಲ್ಲಿ ಕೌಶಲ ಪ್ರಯೋಗಾಲಯ: ವಿದ್ಯಾರ್ಥಿಗಳಿಗೆ ಎಷ್ಟು ಉಪಯುಕ್ತ?

ಡಾ.ವಿನಯ ಶ್ರೀನಿವಾಸ್
Published 4 ಜುಲೈ 2021, 19:30 IST
Last Updated 4 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋವಿಡ್ ಆರಂಭವಾದಾಗಿನಿಂದ ಬಹುತೇಕ ಎಲ್ಲ ತರಗತಿಗಳೂ ಆನ್‌ಲೈನ್ ನಲ್ಲೇ ನಡೆಯುತ್ತಿವೆ. ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ಶಿಕ್ಷಣವೂ ಇದಕ್ಕೆ ಹೊರತಾಗಿಲ್ಲ. ಆದರೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಈ ವ್ಯಾಸಂಗದಲ್ಲಿ ಪ್ರಾಯೋಗಿಕ ಕಲಿಕೆಗೆ ಬಹಳ ಮಹತ್ವವಿದೆ. ಮೊದಲನೆಯ ವರ್ಷದ ತರಗತಿಗಳ ನಂತರ ಬಹತೇಕ ವಿಷಯಗಳನ್ನು ರೋಗಿಗಳನ್ನು ಪರೀಕ್ಷೆ ಮಾಡುತ್ತಲೇ ಕಲಿಯುವುದಿರುತ್ತದೆ. ಆದರೆ ಕೊರೊನಾ ಕಾರಣದಿಂದ ಇದು ಈ ದಿನಗಳಲ್ಲಿ ಕಷ್ಟ ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿರುವ ಕೌಶಲ ಪ್ರಯೋಗಾಲಯವು ನಿಜಕ್ಕೂ ವರದಾನವೆಂದೇ ಹೇಳಬಹುದು.

ಏನಿದು ಕೌಶಲ ಪ್ರಯೋಗಾಲಯ?

ಸುಮಾರು ಹತ್ತು ಸಾವಿರ ಚದರ ಮೀಟರ್ ಅಳತೆಯಷ್ಟು ವಿಶಾಲವಾಗಿರುವ ಜಾಗದಲ್ಲಿರುವ ಈ ಪ್ರಯೋಗಾಲಯದಲ್ಲಿ ಹತ್ತಕ್ಕೂ ಹೆಚ್ಚು ಪ್ರತ್ಯೇಕ ಕೊಠಡಿಗಳಿರುತ್ತವೆ. ಒಂದೊಂದು ಕೊಠಡಿಯೂ ಒಂದೊಂದು ವಿಶೇಷ ಉಪ ವಿಷಯಕ್ಕಾಗಿ ಮೀಸಲು. ಮಾನವ ದೇಹದೊಂದಿಗೆ ಅಭ್ಯಸಿಸಬೇಕಾದ ಎಲ್ಲ ಕಾರ್ಯ ವಿಧಾನಗಳಿಗೆ ಸಂಬಂಧಿಸಿದ ಪ್ರಮುಖ ಮಾದರಿಗಳು (ಮಾಡ್ಯೂಲ್) ಇಲ್ಲಿವೆ. ಈ ಮಾದರಿಗಳ ವಿಶೇಷತೆಯೆಂದರೆ ಇವು ಮೂರು ಆಯಾಮದ ಮಾದರಿಗಳಾಗಿದ್ದು, ಬಣ್ಣ, ಆಕೃತಿ, ಗಾತ್ರ ಹಾಗೂ ವಿನ್ಯಾಸದಲ್ಲಿ ಬಹುತೇಕ ಮಾನವ ದೇಹದ ಅಂಗಾಂಗಗಳಂತೆಯೇ ಇರುತ್ತವೆ. ಇವುಗಳೊಂದಿಗಿನ ಕಲಿಕೆ ಹಾಗೂ ತರಬೇತಿಯು ಬಹಳಷ್ಟು ನೈಜತೆಯಿಂದ ಕೂಡಿರುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಇಲ್ಲಿನ ತರಬೇತಿ ಬಹಳವೇ ಪರಿಣಾಮಕಾರಿಯಾಗಲಿದೆ.

ADVERTISEMENT

ಈ ನವೀನ ರೀತಿಯ ವೈದ್ಯಕೀಯ ಕೌಶಲ ಪ್ರಯೋಗಾಲಯಗಳನ್ನು ಕಡ್ಡಾಯವಾಗಿ ಕಾಲೇಜುಗಳಲ್ಲಿ ಸ್ಥಾಪಿಸಬೇಕೆಂದು ಭಾರತೀಯ ವೈದ್ಯಕೀಯ ಮಂಡಳಿಯು ಇತ್ತೀಚೆಗೆ ಸೂಚಿಸಿದೆ.

ಏನೆಲ್ಲ ಕಲಿಯಬಹುದು?

ಇಲ್ಲಿ ಮುಖ್ಯವಾಗಿ ಎರಡು ಬಗೆಯ ಮಾದರಿಗಳು ಲಭ್ಯ. ಒಂದು ಕೌಶಲಗಳ ಕಲಿಕೆಗಾಗಿ ಇರುವ ಸ್ಥಿರ ಮಾದರಿಗಳಾದರೆ, ಮತ್ತೊಂದು ಕಂಪ್ಯೂಟರ್ ಮತ್ತು ಬ್ಯಾಟರಿಗಳ ನೆರವಿನಿಂದ ಮಾನವ ದೇಹದಂತೆಯೇ ಚಲನವಲನಗಳನ್ನು ತೋರುವ ಮಾದರಿಗಳು. ಇಲ್ಲಿ ಅಭ್ಯಾಸ ಮಾಡಬಹುದಾದ ಕೆಲವು ಕೌಶಲಗಳು ಮತ್ತು ವಿಧಾನಗಳೆಂದರೆ,

• ಚರ್ಮದ ಗಾಯಗಳಿಗೆ ಹೊಲಿಗೆ ಹಾಕುವುದು.

• ವಿವಿಧ ವಿಧಾನಗಳಲ್ಲಿ ಚುಚ್ಚುಮದ್ದುಗಳನ್ನು ನೀಡುವುದು. ಸ್ನಾಯುಗಳ ಮೂಲಕ, ಚರ್ಮದ ಪದರಗಳಲ್ಲಿ, ರಕ್ತನಾಳಗಳ ಮೂಲಕ ಚುಚುಮದ್ದುಗಳನ್ನು ಕೊಡುವ ವಿಧಾನಗಳನ್ನು ಈ ಮಾದರಿಗಳಲ್ಲಿ ಅಭ್ಯಾಸ ಮಾಡಿ ಕಲಿಯಬಹುದು. ರಕ್ತನಾಳಗಳಲ್ಲಿ ಕೆಂಪು ಬಣ್ಣದ ದ್ರಾವಣವನ್ನು ತುಂಬಿರುವುದರಿಂದ ಅದನ್ನು ಚುಚ್ಚಿದಾಗ ರಕ್ತವೇ ಹರಿದು ಬಂದಂತೆ ಭಾಸವಾಗಿ ವಿದ್ಯಾರ್ಥಿಗಳಿಗೆ ಕಲಿಕೆ ಪರಿಣಾಮಕಾರಿಯಾಗಿರುತ್ತದೆ.

• ರೋಗಿಗಳ ಆರೈಕೆಯಲ್ಲಿ ನೆರವಾಗುವ ವಿಧಾನಗಳು. ಉದಾ : ಮೂತ್ರ ಕೋಶದೊಳಗೆ ನಾಳವನ್ನು ತೂರಿಸುವುದು ಮೊದಲಾದುವು.

• ತುರ್ತುಪರಿಸ್ಥಿತಿಗಳಲ್ಲಿ ಅತ್ಯಂತ ಅವಶ್ಯವೆನಿಸುವ ಜೀವ ರಕ್ಷಣೆ ತರಬೇತಿಯನ್ನು ಇಲ್ಲಿ ಪಡೆಬಹುದು. ಅಪಘಾತಗಳಲ್ಲಿ ರೋಗಿಗೆ ಹೃದಯ ಸ್ತಂಭನವಾದರೆ ಮಾಡಬೇಕಾದ ಆತನ ಹೃದಯ ಮತ್ತು ಶ್ವಾಸಕೋಶಗಳನ್ನು ಪುನರುಜ್ಜೀವನಗೊಳಿಸುವ ವಿಧಾನ.

• ಮಕ್ಕಳ ವಿಭಾಗದಲ್ಲಿ ಅವಶ್ಯವೆನಿಸುವಂತಹ ವಿಧಾನಗಳಿಗೆ ಚಿಕ್ಕ ಗಾತ್ರದ ಮಾದರಿಗಳೂ ಇಲ್ಲಿ ಸಾಕಷ್ಟು ಇವೆ.

• ಸಹಜ ಹೆರಿಗೆಯನ್ನು ಗರ್ಭಿಣಿಯಂತೆಯೇ ಇರುವ ಮಾದರಿಯಲ್ಲಿ ಅಭ್ಯಾಸ ಮಾಡಬಹುದು. ಕುಟುಂಬ ಯೋಜನೆಗೆಂದು ಬಳಸುವ ಕಾಪರ್ ಟಿಯನ್ನು ಗರ್ಭಾಶಯದಲ್ಲಿ ತೂರಿಸುವ ವಿಧಾನ, ಗರ್ಭಾಶಯದ ಪರೀಕ್ಷೆ, ಮೊದಲಾದುವು.

• ತೀವ್ರನಿಗಾ ಘಟಕದಲ್ಲಿ ರೋಗಿಗೆ ಉಸಿರಾಟದ ಸಮಸ್ಯೆಯಾದಾಗ ಶ್ವಾಸನಾಳದ ಮೂಲಕ ಕೃತಕ ಉಸಿರಾಟದ ಪರಿಕರವನ್ನು ಅಳವಡಿಸುವುದು.

• ತೀವ್ರ ನಿಗಾ ಘಟಕದಲ್ಲಿ ರೋಗಿಯ ಮುಖ್ಯ ಸೂಚಕಗಳಾದ ಹೃದಯದ ಬಡಿತ, ಉಸಿರಾಟ, ಆಮ್ಲಜನಕದ ಮಟ್ಟ, ರಕ್ತದೊತ್ತಡ ಮೊದಲಾದುವುಗಳನ್ನು ಬಿಂಬಿಸುವ ಪರದೆ (ಮಾನಿಟರ್) ಉಪಯೋಗಿಸುವುದು.

• ಇಸಿಜಿ ತೆಗೆಯುವ ವಿಧಾನ. ತಂತ್ರಜ್ಞಾನ ಅಳವಡಿಕೆಯಿಂದಾಗಿ ನಿಜವಾದ ಇಸಿಜಿಯಲ್ಲಿನ ಅಲೆಗಳಂತೆಯೇ ವರದಿಯಲ್ಲಿ ಬರುವುದು ವಿಶೇಷ.

• ಗಾಯಗಳ ಆರೈಕೆಯ ವಿಧಾನ

• ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಮುಖ್ಯವೆನಿಸುವ ಸ್ತನಗಳ ಪರೀಕ್ಷೆ, ಗಡ್ಡೆಗಳನ್ನು ಪತ್ತೆ ಹಚ್ಚುವ ಬಗೆ, ಗುದದ್ವಾರದ ಪರೀಕ್ಷೆ ಮೊದಲಾದುವುದನ್ನು ಗಾತ್ರ ಹಾಗೂ ವಿನ್ಯಾಸದಲ್ಲಿ ಮನುಷ್ಯನ ದೇಹದ ಅಂಗಾಂಗಳಂತೆಯೇ ಇರುವ ಮಾದರಿಗಳಲ್ಲಿ ಅಭ್ಯಾಸ ಮಾಡಬಹುದು.

• ಮಾದರಿಗಳಲ್ಲಿ ಅಳವಡಿಸಿದ ಸಾಫ್ಟ್‌ವೇರ್ ಸಹಾಯದಿಂದ ಆಯ್ದ ಹೃದಯದ ಸಮಸ್ಯೆಯಲ್ಲಿ ಮೂಡಿಬರುವ ಹೃದಯದ ಅಸಹಜ ಶಬ್ದಗಳನ್ನು ಕೇಳಬಹುದು.

• ಆಯ್ದ ಆರೋಗ್ಯ ಸಮಸ್ಯೆಗಳಲ್ಲಿ ಕಂಡು ಬರುವ ಸ್ಕಾನಿಂಗ್ ಚಿತ್ರಣವನ್ನು ನೋಡುತ್ತಾ ಇಲ್ಲಿ ಸ್ಕ್ಯಾನಿಂಗ್ ಅಭ್ಯಾಸ ಮಾಡಬಹುದು.

ಯಾವ ಕಾಲೇಜುಗಳಲ್ಲಿ ಇವೆ?

ಬಹುತೇಕ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿಯೂ ಇದೆಯಾದರೂ, ಅನೇಕ ವರ್ಷಗಳ ಹಿಂದೆಯೇ ಸ್ಥಾಪಿತವಾದ ಸುಸಜ್ಜಿತವಾದ ಕೌಶಲ ಪ್ರಯೋಗಾಲಯವು ಕೆಎಂಸಿ ಮಣಿಪಾಲ, ಎ.ಜೆ. ಶೆಟ್ಟಿ, ಕೆ.ಎಸ್. ಹೆಗ್ಡೆ, ಎನೆಪೋಯ, ಫಾದರ್ ಮುಲ್ಲರ್, ಎಂ.ಎಸ್. ರಾಮಯ್ಯ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮೊದಲಾದ ಕಡೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.