ADVERTISEMENT

ಹೊಸ ಗ್ರಾಹಕ ಕಾಯ್ದೆ ಬಿಟ್ಟು ಹಳೇ ಕಾಯ್ದೆಯ ಪಾಠ: ಎಸ್ಸೆಸ್ಸೆಲ್ಸಿ ಪಠ್ಯದ ಎಡವಟ್ಟು

* ವಿದ್ಯಾರ್ಥಿಗಳಿಗೆ ಅರಿವಾಗದ ಹೊಸ ನಿಯಮ

ಬಾಲಕೃಷ್ಣ ಪಿ.ಎಚ್‌
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST
ಪಿ.ಅಂಜನಪ್ಪ
ಪಿ.ಅಂಜನಪ್ಪ   

ದಾವಣಗೆರೆ: ಗ್ರಾಹಕ ಸಂರಕ್ಷಣಾ ಕಾಯ್ದೆ–2019 ಜಾರಿಯಲ್ಲಿದ್ದರೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆ–1986ರಲ್ಲಿ ಇರುವ ನಿಯಮಗಳನ್ನೇ ಈಗಲೂ ಕಲಿಸಲಾಗುತ್ತಿದೆ.

ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ ಭಾಗ–2ರ ಅಧ್ಯಾಯ 4ರಲ್ಲಿ ‘ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ’ ಎಂಬ ಶೀರ್ಷಿಕೆಯಲ್ಲಿ ಹಳೇ ನಿಯಮಗಳನ್ನೇ ನೀಡಲಾಗಿದೆ. ಕೇಂದ್ರ ಸರ್ಕಾರವು 1986ರ ಕಾಯ್ದೆಯನ್ನು ಪರಿಷ್ಕರಿಸಿ 2019ರ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ, ಶಿಕ್ಷಣ ಇಲಾಖೆ ಮಾತ್ರ ಇನ್ನೂ ಪಠ್ಯವನ್ನು ಬದಲಾಯಿಸಿಲ್ಲ.

‘2019ರ ಕಾಯ್ದೆಯಲ್ಲಿ ಬಹಳಷ್ಟು ಅಂಶಗಳನ್ನು ಸೇರಿಸಲಾಗಿದೆ. ಕೆಲವನ್ನು ಬದಲಾಯಿಸಲಾಗಿದೆ. 1986ರ ಕಾಯ್ದೆಗಿಂತ ಪೂರ್ತಿ ಭಿನ್ನವಾಗಿದೆ. ಹಾಗಾಗಿ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡಬೇಕಿತ್ತು. ಆದರೆ, ಹಳೇ ಪಠ್ಯವನ್ನೇ ಬೋಧಿಸಲಾಗಿದೆ. ಈಗ ಪರೀಕ್ಷೆ ಹತ್ತಿರ ಬಂದಿದೆ. ಪಠ್ಯ ಪರಿಷ್ಕರಣೆಯೂ ಕಷ್ಟ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕ ಪಿ.ಅಂಜನಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಅಧಿಕಾರಿಗಳಿಗೆ ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದರೆ ಹೀಗಾಗುತ್ತದೆ. 30ಕ್ಕೂ ಅಧಿಕ ಶಾಲೆಗಳಿಗೆ ಭೇಟಿ ನೀಡಿ ಈ ಬಗ್ಗೆ ಶಿಕ್ಷಕರಿಗೆ ತಿಳಿಸಿದ್ದೇವೆ. ಆದರೆ, ಶಿಕ್ಷಕರು ಏನೂ ಮಾಡುವಂತಿಲ್ಲ. ಪರೀಕ್ಷಾ ಮಂಡಳಿ, ಪಠ್ಯಪುಸ್ತಕ ಪರಿಷ್ಕರಣೆ ಮಂಡಳಿ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಈ ಅಧಿಕಾರಿಗಳಿಗೆ ಸರಿಯಾದ ಸೂಚನೆಯನ್ನು ಶಿಕ್ಷಣ ಸಚಿವರು ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಅಭಿಪ್ರಾಯ

ನಾಲ್ಕು ಪುಟಗಳ ಈ ಒಂದು ಅಧ್ಯಾಯವನ್ನಷ್ಟೇ ಬದಲಾಯಿಸಿ ಹೊಸ ನಿಯಮ ತಿಳಿಸಿದರೆ ವಿದ್ಯಾರ್ಥಿಗಳು ತಪ್ಪು ಕಲಿಯುವುದು ತಪ್ಪಲಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.

ಪಿ. ಅಂಜನಪ್ಪ, ಸಂಚಾಲಕ, ದಾವಣಗೆರೆ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ

****

ಮೇಲಧಿಕಾರಿಗಳು ಮತ್ತು ಪಠ್ಯಪುಸ್ತಕ ರಚನಾ ಸಮಿತಿಯ ಗಮನಕ್ಕೆ ಈ ವಿಚಾರವನ್ನು ತರಲಾಗುವುದು. ಮುಂದೇನು ಮಾಡಬೇಕು ಎಂದು ಅವರು ಸೂಚನೆ ನೀಡಲಿದ್ದಾರೆ.

ಸಿ.ಆರ್‌. ಪರಮೇಶ್ವರಪ್ಪ, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.