ADVERTISEMENT

ಸ್ಪರ್ಧಾ ವಾಣಿ | ‘ಪ್ಯಾರಿಸ್‌ ಒಪ್ಪಂದ’ ಜಾರಿಗೆ ಬೇಕಿದೆ ಜಾಗತಿಕ ಬದ್ಧತೆ

ಚನ್ನಬಸಪ್ಪ ರೊಟ್ಟಿ
Published 12 ಫೆಬ್ರುವರಿ 2025, 23:37 IST
Last Updated 12 ಫೆಬ್ರುವರಿ 2025, 23:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜಾಗತಿಕ ತಾಪಮಾನ ಹಾಗೂ ಹವಾಮಾನಗಳಲ್ಲಿನ ಬದಲಾವಣೆಯನ್ನು ತಡೆಗಟ್ಟಲು ಬದ್ಧತೆ ಪ್ರದರ್ಶಿಸುವ ಸಂಬಂಧ 197 ದೇಶಗಳು ಸಹಿ ಹಾಕಿರುವ ಐತಿಹಾಸಿಕ ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಅಮೆರಿಕ ನವೆಂಬರ್‌ 4, 2024ರಿಂದ ಅನ್ವಯವಾಗುವಂತೆ ಅಧಿಕೃತವಾಗಿ ನಿರ್ಗಮಿಸಿದೆ. ‘ಜಾಗತಿಕ ತಾಪಮಾನ ಏರಿಕೆ’ ಹಾಗೂ ‘ಹವಾಮಾನ ಬದಲಾವಣೆಗಳು’ ರಾಷ್ಟ್ರೀಯ ಗಡಿಗಳನ್ನು ಮೀರಿದ ಜಾಗತಿಕ ತುರ್ತು ಪರಿಸ್ಥಿತಿಯಾಗಿದೆ. ಅಂತರರಾಷ್ಟ್ರೀಯ ಸಹಕಾರ ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆ ಇದಾಗಿದೆ ಎಂದು ವಿಶ್ವಸಂಸ್ಥೆ ಉಲ್ಲೇಖಿಸಿದೆ. ಈ ನಿಟ್ಟಿನಲ್ಲಿ ಪ್ಯಾರಿಸ್‌ ಒಪ್ಪಂದದ ಮುಖ್ಯಾಂಶಗಳು, ಮಹತ್ವ ಹಾಗೂ ಪ್ರಸ್ತುತತೆಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಒಪ್ಪಂದದ ಅಂಗೀಕಾರ ಮತ್ತು ಜಾರಿ

2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವಸಂಸ್ಥೆಯ ಹವಾಮಾನ ಕುರಿತಾದ ಶೃಂಗಸಭೆಯಲ್ಲಿ (COP21) ಚರ್ಚಿಸಿದ ನಂತರ ಡಿಸೆಂಬರ್ 12, 2015 ರಂದು ಪ್ಯಾರೀಸ್‌ ಒಪ್ಪಂದವನ್ನು ಅಂಗೀಕರಿಸಲಾಗಿತ್ತು. ಈ ಸಮಾವೇಶದಲ್ಲಿ 196 ದೇಶಗಳು ಭಾಗವಹಿಸಿದ್ದವು. ಈ ಒಪ್ಪಂದವನ್ನು ಏಪ್ರಿಲ್ 22, 2016 ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅನುಮೋದನೆಗೆ ಪ್ರಸ್ತಾಪಿಸಲಾಯಿತು. ಇದಾದ 30 ದಿನಗಳ ನಂತರ, ನವೆಂಬರ್ 4, 2016 ರಂದು ಈ ಒಪ್ಪಂದ ಅಧಿಕೃತವಾಗಿ ಜಾರಿಗೆ ಬಂದಿತು.

ADVERTISEMENT

ವಿಶ್ವಸಂಸ್ಥೆಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಅಂಗಸಂಸ್ಥೆಗಳಾದ Ad Hoc Working Group on the Paris Agreement (APA), Subsidiary Body for Scientific and Technological Advice (SBSTA), Subsidiary Body for Implementation (SBI) ಹಾಗೂ Conference of the Parties serving as the meeting of the Parties to the Paris Agreement (CMA) ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನಗೊಳಿಸಲು ಸಂಘಟಿತವಾಗಿ ಕಾರ್ಯನಿರ್ವಹಿಸುತ್ತವೆ.

ಒಪ್ಪಂದದ ಮುಖ್ಯಾಂಶಗಳು
  • ಜೀವ ಸಂಕುಲಕ್ಕೆ ಸಂಕಷ್ಟ ತಂದೊಡ್ಡುವ ಅಪಾಯಕಾರಿ ಹಸಿರುಮನೆ ಅನಿಲಗಳ (GHG) ಹೊರಸೂಸುವಿಕೆ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವುದೇ ಈ ಒಪ್ಪಂದದ ಮುಖ್ಯ ಗುರಿಯಾಗಿದೆ.

  • 21ನೇ ಶತಮಾನದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಿಸುವುದು ಮತ್ತು ಕೈಗಾರಿಕಾ ಪೂರ್ವ ಅವಧಿಯಲ್ಲಿ ಇದ್ದಂತೆ 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವುದು ಈ ಒಪ್ಪಂದದ ಮುಖ್ಯ ಧ್ಯೇಯಗಳಾಗಿವೆ.

  • ಹವಾಮಾನ ಸ್ಥಿತಿಸ್ಥಾಪಕತ್ವ ಸಾಧಿಸುವ ನಿಟ್ಟಿನಲ್ಲಿ ಹಣಕಾಸಿನ ಸಂಪನ್ಮೂಲಗಳ ಸೂಕ್ತ ಕ್ರೋಢೀಕರಣ, ಪೂರೈಕೆ, ಹೊಸ ತಂತ್ರಜ್ಞಾನಗಳ ಅನುಷ್ಠಾನ ಮತ್ತು ವರ್ಧಿತ ಸಾಮರ್ಥ್ಯ ಸಾಧಿಸುವ ನಿಟ್ಟಿನಲ್ಲಿ ಅಭಿವೃದ್ಧಿಶೀಲ ಮತ್ತು ಬಡ ದೇಶಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಬೆಂಬಲಿಸಬೇಕೆಂದು ಈ ಒಪ್ಪಂದ ಉಲ್ಲೇಖಿಸಿದೆ.

  • ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ಎಲ್ಲಾ ರಾಷ್ಟ್ರಗಳು ಹವಾಮಾನ ಕೊಡುಗೆಗಳಿಗೆ ಸಂಬಂಧಿಸಿ ತಮ್ಮದೇ ಆದ ‘ರಾಷ್ಟ್ರೀಯ ಗುರಿಗಳನ್ನು’ (NDC) ನಿರ್ಧರಿಸಿಕೊಂಡು ಆ ಗುರಿಗಳ ಈಡೇರಿಕೆಗೆ ಬದ್ಧತೆಯಿಂದ ಪ್ರಯತ್ನಿಸಬೇಕು. ಎಲ್ಲಾ ರಾಷ್ಟ್ರಗಳು ತಮ್ಮ ‘GHG’ ಹೊರಸೂಸುವಿಕೆ ಮತ್ತು ಅವುಗಳನ್ನು ತಗ್ಗಿಸುವ ಪ್ರಯತ್ನಗಳ ಕುರಿತು ಪ್ರತಿ ವರ್ಷ ವರದಿ ಸಲ್ಲಿಸಬೇಕು. ಪ್ರತಿ 5 ವರ್ಷಗಳಿಗೊಮ್ಮೆ ಈ ವರದಿಗಳನ್ನು ಕ್ರೋಡೀಕರಿಸಿ,  ಜಾಗತಿಕ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ನಿಬಂಧನೆಯನ್ನು ಒಪ್ಪಂದ ವಿಧಿಸಿದೆ.

  • ಪ್ಯಾರಿಸ್ ಒಪ್ಪಂದ ಅರಣ್ಯಗಳು, ಕೆರೆ, ಸರೋವರ ಹಾಗೂ ಜಲಾಶಯಗಳನ್ನು ಸೂಕ್ತವಾಗಿ ಸಂರಕ್ಷಿಸಬೇಕು ಹಾಗೂ ನಿರ್ವಹಿಸಬೇಕು ಎಂಬ ಕಟ್ಟಳೆಯನ್ನು ವಿಧಿಸಿದೆ.

  • ಹವಾಮಾನ ಬದಲಾವಣೆಗೆ ಸಂಬಂಧಿಸಿದ ಶಿಕ್ಷಣ, ತರಬೇತಿ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಹಾಗೂ ಪರಿಸರ ಮತ್ತು ಹವಾಮಾನ ಸಂರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು ಎಂದು ಒಪ್ಪಂದ ಹೇಳಿದೆ.

ಒಪ್ಪಂದದ ಪ್ರಸ್ತುತತೆ

ಜಾಗತಿಕ ತಾಪಮಾನ ಏರಿಕೆ 1.5 ಡಿಗ್ರಿ ಸೆಲ್ಸಿಯಸ್‌ ಮಿತಿಯನ್ನು ಮೀರಿದರೆ ಧ್ರುವಗಳಲ್ಲಿ ಹಿಮ, ನೀರ್ಗಲ್ಲುಗಳು ಕರಗಿ ಸಮುದ್ರದ ಮಟ್ಟ ಏರಿಕೆಯಾಗುವುದು, ತೀವ್ರ ಬರಗಾಲಗಳು, ಅತಿವೃಷ್ಟಿ ಜೀವ ವೈವಿಧ್ಯದ ಅವನತಿ, ಮೇಘಸ್ಫೋಟ, ದಿಢೀರ್‌ ಪ್ರವಾಹ, ಶಾಖದ ಅಲೆಗಳು, ಕಾಳ್ಗಿಚ್ಚು ಹಾಗೂ ಆಹಾರ ಉತ್ಪಾದನೆಯಲ್ಲಿ ಕುಸಿತ ಸೇರಿದಂತೆ ಹೆಚ್ಚು ತೀವ್ರವಾದ ಹವಾಮಾನ ಬದಲಾವಣೆಯ ಪರಿಣಾಮಗಳು ಉಂಟಾಗಲಿವೆ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತಾದ ಅಂತರಸರ್ಕಾರಿ ಸಮಿತಿ ಎಚ್ಚರಿಸಿದೆ. ಪ್ಯಾರಿಸ್‌ ಒಪ್ಪಂದದ ಗುರಿಯನ್ವಯ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು, ಹಸಿರುಮನೆ ಅನಿಲ ಹೊರಸೂಸುವಿಕೆಯು 2025 ರ ಮೊದಲು ತನ್ನ ಗರಿಷ್ಠ ಮಟ್ಟ ತಲುಪಬೇಕು ಮತ್ತು 2030 ರ ವೇಳೆಗೆ ಅದನ್ನು ಶೇ 43 ರಷ್ಟು ಕಡಿತಗೊಳಿಸಲೇಬೇಕಿದೆ.

ಜಾಗತಿಕ ಸಹಕಾರದ ಕೊರತೆ; UN ಉಪಕ್ರಮಗಳಿಗೆ ಹಿನ್ನಡೆ!

ವಿಶ್ವಸಂಸ್ಥೆಯು 2024 ರಲ್ಲಿ ತನ್ನ ಪರಿಸರ ಉಪಕ್ರಮಗಳಲ್ಲಿ ಹಿನ್ನಡೆ ಎದುರಿಸಿದೆ. ಕೊಲಂಬಿಯಾ, ಅಜೆರ್ಬೈಜಾನ್, ಸೌದಿ ಅರೇಬಿಯಾ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆದ ನಿರ್ಣಾಯಕ ಶೃಂಗಸಭೆಗಳು ಅರ್ಥಪೂರ್ಣ ಫಲಿತಾಂಶಗಳನ್ನು ನೀಡುವಲ್ಲಿ ವಿಫಲವಾಗಿವೆ.

ಅಜೆರ್ಬೈಜಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿತದ ಹೊಣೆಗಾರಿಕೆ ಹೊರಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವಿರೋಧಿಸಿವೆ. ಅಭಿವೃದ್ಧಿಶೀಲ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ದೇಶಗಳಿಂದ ವಾರ್ಷಿಕ 1.3 ಟ್ರಿಲಿಯನ್‌ ಡಾಲರ್‌ ನೆರವನ್ನು ಬಯಸಿದ್ದವು. ಆದರೆ, ಈ ಕುರಿತಾದ ಯಾವುದೇ ಬದ್ಧತೆಗಳಿಲ್ಲದೆ ಶೃಂಗಸಭೆ ಕೊನೆಗೊಂಡಿದೆ.

ದಕ್ಷಿಣ ಕೊರಿಯಾ ಶೃಂಗಸಭೆಯಲ್ಲಿ ಪಳೆಯುಳಿಕೆ ಇಂಧನಗಳು ಹಾಗೂ ಪ್ಲಾಸ್ಟಿಕ್‌ ಬಳಕೆಗಳ ಮೇಲೆ ನಿರ್ಬಂಧಕ್ಕೆ ಸಂಬಂಧಿಸಿ ಕಾನೂನುಬದ್ಧ ಒಪ್ಪಂಗಳ ಜಾರಿಯನ್ನು ಅಭಿವೃದ್ಧಿಶೀಲ ಹಾಗೂ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳೂ ಸೇರಿ ಹಲವು ದೇಶಗಳು ವಿರೋಧಿಸಿವೆ.

ಸೌದಿ ಅರೇಬಿಯಾದಲ್ಲಿ ನಡೆದ ಶೃಂಗಸಭೆಯಲ್ಲಿ ಕೈಗಾರಿಕೀಕರಣ ನಿಯಂತ್ರಣಕ್ಕೆ ಸಂಬಂಧಿಸಿದ ನಿರ್ಣಯಕ್ಕೆ ಆಫ್ರಿಕನ್ ದೇಶಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಅಭಿವೃದ್ಧಿಶೀಲ ಹಾಗೂ ಬಡ ರಾಷ್ಟ್ರಗಳು ಹವಾಮಾನ ಸವಾಲುಗಳನ್ನು ಎದುರಿಸಲು ಶ್ರೀಮಂತ ರಾಷ್ಟ್ರಗಳಿಂದ ಗಣನೀಯ ಹಣಕಾಸಿನ ನೆರವನ್ನು ಬಯಸುತ್ತಿವೆ. ಇದಕ್ಕೆ ವಿರುದ್ಧವಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೆಚ್ಚುವರಿ ಸಂಪನ್ಮೂಲ ಒದಗಿಸುವುದನ್ನು ವಿರೋಧಿಸುತ್ತಿವೆ. ಇದಲ್ಲದೇ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪಳೆಯುಳಿಕೆ ಇಂಧನದ ಬಳಕೆಯನ್ನು ನಿಷೇಧವನ್ನೂ ಒಪ್ಪಿಲ್ಲ.

ಈ ರೀತಿಯಾದ ಜಾಗತಿಕ ಮಟ್ಟದಲ್ಲಿನ ರಾಷ್ಟ್ರಗಳ ಒಮ್ಮತದ ಕೊರತೆಯು ಹವಾಮಾನ ಬದಲಾವಣೆಯನ್ನು ಎದುರಿಸುವ ಜಾಗತಿಕ ಪ್ರಯತ್ನಗಳಿಗೆ ತೀವ್ರ ಹಿನ್ನಡೆಯನ್ನು ಉಂಟುಮಾಡಿದೆ. ಪರಿಸರ ಹಾಗೂ ಹವಾಮಾನ ಸಂಬಂಧಿತ ಒಪ್ಪಂದಗಳ ಜಾರಿಯಲ್ಲಿನ ವೈಫಲ್ಯಗಳು ಜೀವವೈವಿಧ್ಯತೆಯ ನಷ್ಟ ತಡೆಯುವಲ್ಲಿ ಮತ್ತು ಹವಾಮಾನ ಬದಲಾವಣೆ ಎದುರಿಸುವಲ್ಲಿ ಅಗತ್ಯವಾದ ನಿರ್ಣಾಯಕ ಕ್ರಮಗಳ ಅನುಷ್ಠಾನವನ್ನು ವಿಳಂಬಗೊಳಿಸುತ್ತಿವೆ. ಈ ವಿಳಂಬದಿಂದ ಹವಾಮಾನ ಹಾಗೂ ಪರಿಸರ ಸಂಬಂಧಿತ ಅಪಾಯಗಳು, ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿವೆ. ಇದರಿಂದ ಜಾಗತಿಕ ಸಮುದಾಯದ ಆರ್ಥಿಕತೆ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.

ಅದರಲ್ಲೂ ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಅಮೆರಿಕದಂಥ ನಿರ್ಣಾಯಕ ದೇಶ ನಿರ್ಗಮಿಸಿರುವುದರಿಂದ ವಿಶ್ವಸಂಸ್ಥೆಯ ಪರಿಸರ ಉಪಕ್ರಮಗಳಿಗೆ ಮತ್ತಷ್ಟು ಹಿನ್ನಡೆಯಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.