ADVERTISEMENT

ಮೊದಲ ಬಾರಿಗೆ ಬ್ಯಾಂಕ್‌ ಪರೀಕ್ಷೆ ಬರೆಯುವರಿಗೆ ಪರೀಕ್ಷೆ ಪ್ರವೇಶ ಸಿದ್ಧತೆ ಹೀಗಿರಲಿ

ಮೊದಲ ಬಾರಿಗೆ ಬ್ಯಾಂಕ್‌ ಪರೀಕ್ಷೆ ಬರೆಯುವವರಿಗೆ..

ಆರ್.ಕೆ ಬಾಲಚಂದ್ರ
Published 13 ಜುಲೈ 2022, 22:30 IST
Last Updated 13 ಜುಲೈ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಬ್ಯಾಂ ಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್‌) ನಡೆಸುವ ಬ್ಯಾಂಕಿಂಗ್‌ ಪರೀಕ್ಷೆ ಪ್ರಕ್ರಿಯೆಯಲ್ಲಿ ಈ ಬಾರಿ ಸಣ್ಣಪುಟ್ಟ ಬದಲಾವಣೆಗಳಾಗಿವೆ. ಅಭ್ಯರ್ಥಿಗಳು ಇವೆಲ್ಲವನ್ನೂ ಅನುಸರಿಸುವ ಜೊತೆಗೆ, ಅರ್ಜಿ ಭರ್ತಿ ಮಾಡುವಾಗ, ಪ್ರವೇಶ ಪತ್ರ ಸಂಗ್ರಹಿಸುವಾಗ ಒಂದಷ್ಟು ಜಾಗ್ರತೆ ವಹಿಸಬೇಕು. ಈ ಹಂತಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ಪರೀಕ್ಷೆ ಪ್ರವೇಶಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ಏನೇನು ಬದಲಾವಣೆಗಳು?

ಮೊದಲನೆಯದಾಗಿ ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ಅಭ್ಯರ್ಥಿಗಳು ತರುವ ಗುರುತಿನ ಚೀಟಿ(ಐಡಿ ಪ್ರೂಫ್) ಸಂಖ್ಯೆ ನೀಡುವುದು ಕಡ್ಡಾಯ. ಅದು ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ಯಲ್ಲಿನ ಹೆಸರಿನೊಂದಿಗೆ ಹೊಂದಾಣಿಕೆಯಾಗಿರಬೇಕು. ಹಾಗೆಯೇ ಪೂರ್ವಭಾವಿ ಪರೀಕ್ಷೆಯ(ಪ್ರಿಲಿಮ್ಸ್‌) ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಅಗತ್ಯವಿದೆ.

ADVERTISEMENT

ಮುಖ್ಯ ಪರೀಕ್ಷೆಗೆ (ಮೇನ್ಸ್‌) ಅರ್ಹತೆ ಪಡೆದ ಅಭ್ಯರ್ಥಿಗಳು ಈ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣ ಗೊಂಡ ಪ್ರವೇಶ ಪತ್ರವನ್ನೂ ಸಲ್ಲಿಸಬೇಕಾಗುತ್ತದೆ. ಕನಿಷ್ಟ 8 ಭಾವಚಿತ್ರಗಳ ಜೊತೆಗೆ (ಅಭ್ಯರ್ಥಿಯು ಕಾಲ್-ಲೆಟರ್‌ನಲ್ಲಿ ಅಂಟಿಸಿದಂತೆಯೇ) ಪ್ರಿಲಿಮ್ಸ್ ಹಾಗೂ ಮೇನ್ಸ್‌ನ ಕರೆ (ಕಾಲ್‌ ಲೆಟರ್‌) ಪತ್ರದ ಝೆರಾಕ್ಸ್‌ ಪ್ರತಿ(ಹೆಚ್ಚುವರಿ ಪ್ರಿಂಟ್ ಇದ್ದರೂ ಆದೀತು) ಯನ್ನು ತೆಗೆದಿಟ್ಟುಕೊಳ್ಳಿ. ಕೊನೆಯಲ್ಲಿ ಬ್ಯಾಂಕ್‌ಗಳಿಗೆ ಸೇರುವಾಗ ಅದರ ಪ್ರತಿಯನ್ನು ನೀಡಬೇಕು. ಇದುನಂತರದ ದಿನಗಳಲ್ಲಿ ವೆಬ್‌ಸೈಟ್‌ನಲ್ಲಿ ಸಿಗುವುದಿಲ್ಲ.

ಅಭ್ಯರ್ಥಿಗಳು ಒಂದು ಹೆಚ್ಚುವರಿ ಛಾಯಾಚಿತ್ರ (ಅಭ್ಯರ್ಥಿಯು ಕಾಲ್ ಲೆಟರ್‌ನಲ್ಲಿ ಅಂಟಿಸಿದಂತೆಯೇ) ಜೊತೆಗೆ ‘ಮಾಹಿತಿ ಕೈಪಿಡಿ’ ಮತ್ತು ಕರೆ ಪತ್ರದಲ್ಲಿ ಸೂಚಿಸಿದಂತೆ ಕರೆ ಪತ್ರ ಮತ್ತು ಇತರ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.

ಪರೀಕ್ಷಾ ಕೇಂದ್ರದಲ್ಲಿ..

ಎ. ಪೋಟೊ ಕ್ಯಾಪ್ಚರ್ ಮೂಲಕ ಅಭ್ಯರ್ಥಿಗಳ ನೋಂದಣಿ ಮಾಡಲಾಗುತ್ತದೆ.

ಬಿ. ಅಭ್ಯರ್ಥಿಗಳಿಗೆ ಸೀಟ್ ನಂಬರ್ ನೀಡಲಾಗುತ್ತದೆ.

ಸಿ. ಪ್ರತಿ ಅಭ್ಯರ್ಥಿ ಕೂರುವ ಸ್ಥಳದಲ್ಲಿ ಹಾಳೆಗಳನ್ನು ಇರಿಸಲಾಗಿರುತ್ತದೆ. ಪರೀಕ್ಷೆಯ ಕೊನೆಯಲ್ಲಿ ಅಭ್ಯರ್ಥಿಗಳಿಗೆ ಸೂಚಿಸಿದಂತೆ ನಿಗದಿತ ಡ್ರಾಪ್ ಬಾಕ್ಸ್‌ನಲ್ಲಿ ಆ ಹಾಳೆಗಳನ್ನು ಹಾಕಬೇಕು.

ಡಿ. ಮುಖ್ಯ ಪರೀಕ್ಷೆಗೆ ಸ್ಟ್ಯಾಂಪ್ ಮಾಡಿದ ಫೋಟೊ ಕಾಪಿ ತರದಿರುವ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.

ಪೂರ್ವಭಾವಿ ಪರೀಕ್ಷೆ ಹೇಗೆ ?

ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ.ಬೆಳಗಾವಿ, ಬೆಂಗಳೂರು, ಬೀದರ್,ದಾವಣಗೆರೆ, ಧಾರವಾಡ ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ ಪರೀಕ್ಷೆ ಪರೀಕ್ಷಾ ಕೇಂದ್ರಗಳಿರುತ್ತವೆ.

ಪೂರ್ವಭಾವಿ ಪರೀಕ್ಷೆ ಒಂದು ಗಂಟೆ ಅವಧಿಯದ್ದು. 100 ಅಂಕಗಳಿಗೆ ನಡೆಯುತ್ತದೆ. ಪ್ರತಿ ಪತ್ರಿಕೆಗೆ 20 ನಿಮಿಷಗಳಂತೆ ಮೂರು ಪತ್ರಿಕೆಗಳಿಗೆ ಸಮಯ ಹಂಚಿಕೆ ಮಾಡಿರುತ್ತಾರೆ.

ಪ್ರತಿ ಪತ್ರಿಕೆ(ವಿಷಯ)ಯಲ್ಲೂ ಕನಿಷ್ಟ ಅಂಕಗಳಿಸಬೇಕೆಂಬ ನಿಯಮವಿದೆ. ಆದರೆ ಒಟ್ಟಾರೆ ಹೆಚ್ಚು ಅಂಕಗಳಿಸುವುದು ಮುಖ್ಯ.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಯುತ್ತದೆ. ಈ ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿವೆ. ನಿಗದಿತ ದಿನದಂದು ಎರಡೂ ಲಿಖಿತ ಪರೀಕ್ಷೆಗಳು ಆನ್‌ಲೈನ್‌ಲ್ಲಿಯೇ ನಡೆಯಲಿವೆ. ಮುಖ್ಯ ಪರೀಕ್ಷೆಯ ಅವಧಿ 2 ಗಂಟೆ 40 ನಿಮಿಷ (160 ನಿಮಿಷ). 190 ಪ್ರಶ್ನೆಗಳನ್ನು 200 ಅಂಕಗಳಿಗೆ ಕೇಳಲಾಗುತ್ತದೆ.

ಇಂಗ್ಲಿಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆ ಎಲ್ಲ ಪ್ರಶ್ನೆಗಳು ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಇರುತ್ತದೆ(ಅಭ್ಯರ್ಥಿಗಳು ಯಾವ ಭಾಷೆ ಆಯ್ಕೆ ಮಾಡಿಕೊಂಡಿರುತ್ತಾರೋ ಆ ಭಾಷೆಯಲ್ಲಿ). ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯದ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ(ನೆಗೆಟಿವ್‌ ಕರೆಕ್ಷನ್‌) ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.

ನೇಮಕಾತಿ ಪ್ರಕ್ರಿಯೆ

ಮುಖ್ಯ ಪರೀಕ್ಷೆಯ ಪ್ರತಿ ಪತ್ರಿಕೆಯಲ್ಲಿ ಪಡೆದ ಕನಿಷ್ಠ ಅಂಕಗಳನ್ನು ಪಡೆದ ಅಭ್ಯರ್ಥಿಯನ್ನು ನೌಕರಿಗೆ ಆಯ್ಕೆ ಮಾಡಲಾಗುತ್ತದೆ. ನೆನಪಿರಲಿ, ಅರ್ಹತಾ ಪರೀಕ್ಷೆಯ ಅಂಕ ಪರಿಗಣಿಸಲಾಗುವುದಿಲ್ಲ.

ಪೂರ್ವಭಾವಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಅರ್ಹತಾ ಪಟ್ಟಿಗೆ ಮಾತ್ರ ಮೀಸಲಾಗಿದ್ದು ಅದರಲ್ಲಿ ಪಡೆದ ಅಂಕಗಳನ್ನು ಮುಂದೆ ಪರಿಗಣಿಸಲಾಗುವುದಿಲ್ಲ. ಆದರೆ, ಎರಡೂ ಪರೀಕ್ಷೆಗಳಿಗೂ ಅಷ್ಟೇ ಮಹತ್ವ ನೀಡಬೇಕು ಎಂಬುದನ್ನು ಖಂಡಿತಾ ಮರೆಯದಿರಿ.

ಆಯ್ಕೆಯಾದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ ಅಡಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆ ಪದರ ಹೊರತಾದ’('Non-Creamy layer') ಷರತ್ತು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. ಆರ್ಥಿಕ ದುರ್ಬಲ ವರ್ಗದ(EWS) ಅಡಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಆಯಾ ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

–––

ಗಮನಿಸಬೇಕಾದ ಅಂಶಗಳು

ಪೂರ್ವಭಾವಿ ಪರೀಕ್ಷೆಯ ನ್ಯೂಮರಿಕಲ್ ಎಬಿಲಿಟಿ(ಸಂಖ್ಯಾತ್ಮಕ ಸಾಮರ್ಥ್ಯವು) ಹಾಗೂ ಮುಖ್ಯ ಪರೀಕ್ಷೆಯ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ (ಪರಿಮಾಣಾತ್ಮಕ ಯೋಗ್ಯತೆಯ) ಎರಡೂ ಗಣಿತದ ವಿಷಯವೇ ಆಗಿದ್ದರೂ ನ್ಯೂಮರಿಕಲ್ ಎಬಿಲಿಟಿಯಲ್ಲಿ ಅಭ್ಯರ್ಥಿಗೆ ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯ ಪರೀಕ್ಷಿಸಲಾಗುತ್ತದೆ. ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ನಲ್ಲಿ, ತಾರ್ಕಿಕವಾಗಿ ಆಲೋಚಿಸುವ ಶಕ್ತಿ ಮತ್ತು ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

ಹಾಗೆಯೇ ಈ ಎರಡೂ ವಿಷಯಗಳಲ್ಲಿರುವ ಪ್ರಶ್ನೆಗಳ ಮಾದರಿಯಲ್ಲೂ ವ್ಯತ್ಯಾಸವಿರುತ್ತದೆ. ‘ನ್ಯೂಮರಿಕಲ್ ಎಬಿಲಿಟಿ‘ಯಲ್ಲಿ, ಸರಳೀಕರಣ(Simplification), ಸಂಖ್ಯಾ ಸರಣಿ,(Series) ಅಂಕಗಣಿತ, ಬೀಜಗಣಿತದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದರೆ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ಲ್ಲಿ, ಸಂಭವನೀಯತೆ, ಕ್ರಮಪಲ್ಲಟನೆ ಮತ್ತು ಸಂಯೋಜನೆ, ಡೇಟಾ ಸಮರ್ಪಕತೆ( Data Interpretation) ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸ ಬೇಕಾಗುತ್ತದೆ. ನಿಮ್ಮ ಸುತ್ತಲಿನ ವಿಷಯಗಳಿಗೆ ನಿಮ್ಮ ಜ್ಞಾನವನ್ನು ಅನ್ವಯಿಸುವ ಸಾಮರ್ಥ್ಯವನ್ನು ಇಲ್ಲಿ ಪರೀಕ್ಷಿಸುತ್ತಾರೆ.

‌( ಮುಂದಿನವಾರ : ಹೊಸದಾಗಿ ಬ್ಯಾಂಕ್‌ ಪರೀಕ್ಷೆ ಬರೆಯುವವರಿಗಾಗಿ ಅರ್ಜಿ ಸಲ್ಲಿಕೆಯಿಂದ ಪರೀಕ್ಷೆಗೆ ತಯಾರಿಯಾಗುವವರೆಗೆ ಅಗತ್ಯವಿರುವ ವಿವರಣಾತ್ಮಕ ಮಾಹಿತಿ)

ಲೇಖಕರು: ಬ್ಯಾಂಕಿಂಗ್ ಪರೀಕ್ಷೆ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು→→⇒ಹಾಗೂ ವೃತ್ತಿ ಮಾರ್ಗದರ್ಶಕರು. ಮಡಿಕೇರಿ

–––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.