ADVERTISEMENT

ತುಮಕೂರು: ಅಭ್ಯರ್ಥಿ ಜಿ.ಎಸ್.ಬಸವರಾಜ್, ಹಿರಿತನಕ್ಕೆ ಮಣೆ ಹಾಕಿದ ಬಿಜೆಪಿ ವರಿಷ್ಠರು

ಲೋಕಸಭಾ ಕ್ಷೇತ್ರ; ಬಿಜೆಪಿ ಅಧಿಕೃತ ಅಭ್ಯರ್ಥಿ ಘೋಷಣೆ

ರಾಮರಡ್ಡಿ ಅಳವಂಡಿ
Published 21 ಮಾರ್ಚ್ 2019, 20:25 IST
Last Updated 21 ಮಾರ್ಚ್ 2019, 20:25 IST
ಜಿ.ಎಸ್.ಬಸವರಾಜ್
ಜಿ.ಎಸ್.ಬಸವರಾಜ್   

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರಿಗೆ ಅವರ ನಿರೀಕ್ಷೆಯಂತೆ ಟಿಕೆಟ್ ಲಭಿಸಿದೆ. ಪಕ್ಷದ ವರಿಷ್ಠರು ಗುರುವಾರ ಸಂಜೆ ಅಧಿಕೃತವಾಗಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಜಿ.ಎಸ್.ಬಸವರಾಜ್ ಹೆಸರು ಘೋಷಣೆಯಾಗಿದೆ.

ಜಿ.ಎಸ್.ಬಸವರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಬಸವರಾಜ್ ಅವರ ಅನುಭವ, ಹಿರಿತನ, ಜಾತಿ ಬಲ, ಸಂಪನ್ಮೂಲವನ್ನು ಪಕ್ಷ ಗುರುತಿಸಿ ಮಣೆ ಹಾಕಿದೆ.

ಜಿ.ಎಸ್.ಬಸವರಾಜ್ ಅವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಹಳೆಯ ಹುಲಿ. ನಾಲ್ಕು ಬಾರಿ ಸಂಸದರಾದವರು. ಅವರ ಸುಧೀರ್ಘ ರಾಜಕೀಯ ಅನುಭವ ಮತ್ತು ಜಾತಿ ಬಲ ಗುರುತಿಸಿ ಟಿಕೆಟ್‌ ನೀಡಲು ಪ್ರಮುಖ ಕಾರಣವಾಗಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

ADVERTISEMENT

ಕಳೆದ ಬಾರಿಗಿಂತ ಈ ಬಾರಿ ಈ ಕ್ಷೇತ್ರಕ್ಕೆ ಕಣಕ್ಕಿಳಿಯಲು ಪಕ್ಷದಲ್ಲಿಯೇ ಹಲವರು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರು. ಲೋಕಸಭಾ ಚುನಾವಣೆ ಘೋಷಣೆ ಆದ ಬಳಿಕ ಈ ಹೊಸ ಆಕಾಂಕ್ಷಿಗಳ ಚಟುವಟಿಕೆಗಳು ಗರಿಗೆದರಿದ್ದವು. ಪಕ್ಷದ ವರಿಷ್ಠರ ಮಟ್ಟದಲ್ಲಿ ತಮ್ಮದೇ ಆದ ರೀತಿಯ ರಾಜಕೀಯ ತಂತ್ರಗಾರಿಕೆ ಹೆಣೆದರು.

ಚುನಾವಣೆ ಘೋಷಣೆಗೂ ಮುನ್ನವೇ ಅಂದರೆ ನಾಲ್ಕೈದು ತಿಂಗಳು ಮೊದಲೇ ತಾವೂ ಒಬ್ಬ ಆಕಾಂಕ್ಷಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಘೋಷಣೆ ಮಾಡಿಕೊಂಡಿದ್ದರು. ಆದರೆ, ಘೋಷಣೆ ಆದ ಬಳಿಕ ಪಕ್ಷದ ಮುಖಂಡರ ಮನವೊಲಿಕೆಗೆ ಕಣಕ್ಕಿಳಿಯುವ ಪ್ರಯತ್ನ ಕಾಣಲಿಲ್ಲ.

ಕ್ಷೇತ್ರಕ್ಕೆ ಕಣಕ್ಕಿಳಿಯಲು ಸಜ್ಜಾದ ಮತ್ತೊಬ್ಬರು ಮಾಜಿ ಶಾಸಕ ಬಿ.ಸುರೇಶ್‌ಗೌಡ. ಕ್ಷೇತ್ರದಲ್ಲಿ ಪಕ್ಷಕ್ಕೆ ಬಲ ಇದೆ. ಜಾತಿ ಬಲವಿದೆ. ಸಂಘಟನೆ ಶಕ್ತಿ ಇದೆ ಎಂಬ ಕಾರಣ ನೀಡಿ ಟಿಕೆಟ್ ಕೇಳಿದ್ದರು. ಉದ್ಯಮಿ ಚಂದ್ರಶೇಖರ್ ಕೂಡಾ ಆಕಾಂಕ್ಷಿಯಾಗಿದ್ದರು.

ಆದರೆ, ಹೊಸ ಮುಖಗಳ ಟಿಕೆಟ್‌ ಆಕಾಂಕ್ಷೆಯ ಕಸರತ್ತಿಗೆ ತೆರೆ ಎಳೆದ ಬಿಜೆಪಿ ವರಿಷ್ಠರು ಕ್ಷೇತ್ರದ ಹಳೆಯ ಮುಖ, ಎಚ್‌.ಡಿ.ದೇವೇಗೌಡರ ಸಮಕಾಲೀನ ಮುತ್ಸದ್ಧಿ ನಾಯಕರೆಂದೇ ಪಕ್ಷದ ವಲಯದಲ್ಲಿ ಗುರುತಿಸಿಕೊಂಡ ಜಿ.ಎಸ್. ಬಸವರಾಜ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಕ್ಷೇತ್ರದಲ್ಲಿ ಅಧಿಕೃತವಾಗಿ ಕ್ಷೇತ್ರದಲ್ಲಿ ಸೆಣಸಲು ಚಾಲನೆ ನೀಡಿದೆ.

ಬೆಳಿಗ್ಗೆ ನಾಮಪತ್ರ ... ಸಂಜೆ ಟಿಕೆಟ್...

ಬಿಜೆಪಿಯು ರಾಜ್ಯದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಸಂಜೆಯವರೆಗೂ ಅಧಿಕೃತವಾಗಿ ಪ್ರಕಟಿಸಿರಲಿಲ್ಲ. ಆದರೆ, ಟಿಕೆಟ್ ತಮಗೇ ಖಚಿತ ಎಂಬ ಆತ್ಮವಿಶ್ವಾಸದಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಜಿ.ಎಸ್. ಬಸವರಾಜ್ ನಾಮಪತ್ರ ಸಲ್ಲಿಸಿದ್ದರು!

ಸಂಜೆ ಅವರ ನಿರೀಕ್ಷೆಯಂತೆಯೇ ಪಕ್ಷದ ವರಿಷ್ಠರು ಟಿಕೆಟ್ ಘೋಷಣೆ ಮಾಡಿದ್ದು, ಅವರ ಪಕ್ಷದಲ್ಲಿಯೇ ಟಿಕೆಟ್ ಆಕಾಂಕ್ಷಿಯಾಗಿದ್ದವರನ್ನು ಹುಬ್ಬೇರಿಸುವಂತೆ ಮಾಡಿತು.

ಜಿಲ್ಲೆಯಲ್ಲಿ ಶಾಸಕರ ಆನೆ ಬಲ

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಒಬ್ಬರೇ ಒಬ್ಬರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದಿದ್ದ ಬಿ.ಸುರೇಶ್‌ಗೌಡ ಒಬ್ಬರೇ. ಆಗ ತ್ರಿಕೋನ ಸ್ಪರ್ಧೆ ಇತ್ತು. ಆದರೆ, ಈಗ ಜಿಲ್ಲೆಯಲ್ಲಿ 4 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಶಾಸಕರೇ ಇದ್ದಾರೆ.

ವಿಶೇಷವಾಗಿ ಜಿಲ್ಲಾ ಕೇಂದ್ರವಾದ ತುಮಕೂರುನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜಿ.ಎಸ್. ಬಸವರಾಜ್ ಅವರ ಮಗ ಜಿ.ಬಿ.ಜ್ಯೋತಿಗಣೇಶ್ ಅವರೇ ಶಾಸಕರು!. ಹೀಗಾಗಿ, ಬಸವರಾಜ್ ಅವರಿಗೆ ಇನ್ನಷ್ಟು ಬಲ ತಂದುಕೊಡಲಿದೆ ಎಂಬುದು ಕಾರ್ಯಕರ್ತರ ವಿಶ್ಲೇಷಣೆ.

ಅಲ್ಲದೇ, ಈ ಬಾರಿ ಮೈತ್ರಿ ಪಕ್ಷಗಳಲ್ಲಿ ಟಿಕೆಟ್ ಜೆಡಿಎಸ್ ಪಾಲಾಗಿದ್ದು, ಕಾಂಗ್ರೆಸ್ ಪಕ್ಷದವರನ್ನು ಕೆರಳಿಸಿದೆ. ಮೂಲತಃ ಬಸವರಾಜ್ ಅವರು ಕಾಂಗ್ರೆಸ್ ಪಕ್ಷದವರೇ ಆಗಿದ್ದರಿಂದ ಆ ಪಕ್ಷದಲ್ಲಿನ ಹಳೆಯ ಸ್ನೇಹಿತರು, ಉಳಿಸಿಕೊಂಡು ಸಂಬಂಧ ಕೈ ಹಿಡಿಯಲಿದೆ. ಇವೆಲ್ಲವನ್ನೂ ಗಮನಿಸಿಯೇ ಜಿಎಸ್‌ಬಿಯವರಿಗೆ ಟಿಕೆಟ್‌ ಲಭಿಸಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.