ADVERTISEMENT

ಧ್ರುವನಾರಾಯಣ ಪ್ರಚಾರಕ್ಕೆ ಉಮ್ಮತ್ತೂರಿನಲ್ಲಿ ಗ್ರಾಮಸ್ಥರ ಅಡ್ಡಿ

ಶ್ರೀನಿವಾಸ ಪ್ರಸಾದ್‌ ಬಗ್ಗೆ ಕಾಗಲವಾಡಿ ಶಿವಣ್ಣ ಹಗುರ ಮಾತು–ಉಮ್ಮತ್ತೂರಿನಲ್ಲಿ ಭಾನುವಾರ ರಾತ್ರಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 15:07 IST
Last Updated 1 ಏಪ್ರಿಲ್ 2019, 15:07 IST
ಕಾಗಲವಾಡಿ ಶಿವಣ್ಣ
ಕಾಗಲವಾಡಿ ಶಿವಣ್ಣ   

ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರಿನಲ್ಲಿ ಭಾನುವಾರ ರಾತ್ರಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರ ಪ್ರಚಾರಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿದರು.

ಗ್ರಾಮ ಪಂಚಾಯಿತಿಯ ಕೇಂದ್ರ ಶಾನಭೋಗರ ಚೌಕದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದ ಕಾಗಲಗಾಡಿ ಶಿವಣ್ಣ ಮಾತನಾಡುವಾಗ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್‌ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು, ಕಾಂಗ್ರೆಸ್‌ ಮುಖಂಡರ ವಿರುದ್ಧ ತಿರುಗಿಬಿದ್ದರು. ಅವರ ಭಾಷಣದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀನಿವಾಸ ಪ್ರಸಾದ್‌ ಪರ ಘೋಷಣೆಗಳನ್ನು ಕೂಗಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರು ಮಾತನಾಡುವಾಗ ಜನರು ಘೋಷಣೆ ಕೂಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

ಕಾಗಲವಾಡಿ ಶಿವಣ್ಣ ಅವರು ಮಾತನಾಡುವ ಸಂದರ್ಭದಲ್ಲಿ, ‘ಕಿವಿ ಕೇಳಿಸದ, ನಡೆದಾಡಲೂ ಸಾಧ್ಯವಾಗದ ಹಾಗೂ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಸಮರ್ಥವಾಗಿ ಕಂದಾಯ ಖಾತೆಯನ್ನು ನಿಭಾಯಿಸಲು ಸಾಧ್ಯವಾಗದೆ ಇದ್ದುದಕ್ಕೆ ಸಿದ್ದರಾಮಯ್ಯ ಅವರು ಸಂಪುಟದಿಂದ ಕಿತ್ತು ಹಾಕಿದರು. ಇಂಥವರು ಸಂಸದರಾಗಬೇಕೇ’ ಎಂದು ಶ್ರೀನಿವಾಸ ಪ್ರಸಾದ್‌ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ‘ನೀವು ಸಂಸದರಾಗಲು ಪ್ರಸಾದ್ ಕಾರಣ. ಹಿರಿಯ ರಾಜಕಾರಣಿ ಬಗ್ಗೆ ಇಂಥ ಮಾತುಗಳನ್ನಾಡಬಾರದು. ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ದಾರಿಯಲ್ಲಿ ಬಿಜೆಪಿ ಸೇರಿದ್ದ ನೀವು, ಈಗ ಬಿಜೆಪಿ ಟಿಕೆಟ್‌ ನಿಮಗೆ ಕೊಡಿಸಲಿಲ್ಲಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೀರಿ. ಐದು ವರ್ಷ ಸಂಸದರಾಗಿ ಗ್ರಾಮಕ್ಕೆ ನಿಮ್ಮ ಕೊಡುಗೆ ಏನು? ನಿಮ್ಮ ಮಾತುಗಳಲ್ಲಿ ನಿಗಾ ಇರಲಿ’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

‘ಗ್ರಾಮಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ?’

ಪರಿಸ್ಥಿತಿ ಕೈ ಮೀರುವುದನ್ನು ಅರಿತ ಆರ್‌.ಧ್ರುವನಾರಾಯಣ ಅವರು ಮಾತನಾಡಲು ಮುಂದಾದಾಗ, ‘ಬಿ. ರಾಚಯ್ಯ ಅವರ ಮಗ ಎ.ಆರ್. ಕೃಷ್ಣಮೂರ್ತಿ ಅವರನ್ನು ಸಂತೇಮರಹಳ್ಳಿ ಕ್ಷೇತ್ರದಲ್ಲಿ 2004ರಲ್ಲಿ ಒಂದು ಮತದಿಂದ ಸೋಲಿಸಿದ ಬಳಿಕ ನಡೆದ ಮೂರೂ ಚುನಾವಣೆಗಳಲ್ಲಿಯೂ ಅವರ ವಿರುದ್ಧವೇ ನಿಂತಿದ್ದೀರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೃಷ್ಣಮೂರ್ತಿ ಅವರ ಗೆಲುವಿಗೆ ಪಕ್ಷದ ಮುಖಂಡರು ಪ್ರಯತ್ನಿಸಲಿಲ್ಲ. ಆಗ ಯಾವುದೇ ಜಾತಿವಾರು ಸಭೆಗಳನ್ನು ಮಾಡಲಿಲ್ಲ. ಈಗ ನಿಮ್ಮ ಚುನಾವಣೆಗೆ ಎಲ್ಲರೂ ಒಂದಾಗಿ ದುಡಿಯಬೇಕಾ?, ಈಗ ಕೃಷ್ಣಮೂರ್ತಿ ಅವರನ್ನೇ ನಿಮ್ಮ ಪರವಾಗಿ ಮತ ಕೇಳಲು ಕರೆದುಕೊಂಡು ಬಂದಿರುವುದು ಸರಿಯೇ’ ಎಂದು ಗ್ರಾಮಸ್ಥರು ನೇರವಾಗಿ ಪ್ರಶ್ನಿಸಿದರು ಎಂದು ಗೊತ್ತಾಗಿದೆ.

‘ಗೆದ್ದು ಹೋದ ನೀವು ಈಗ ಗ್ರಾಮಕ್ಕೆ ಬಂದಿದ್ದೀರಿ. ಗ್ರಾಮಕ್ಕೆ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಓಡಾಡುತ್ತೀರಿ. ಆದರೆ ಒಮ್ಮೆಯೂ ಇತ್ತ ಬಂದಿಲ್ಲ.ಗ್ರಾಮಕ್ಕೆ ನಿಮ್ಮ ಕೊಡುಗೆ ಏನು’ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಆ ಬಳಿಕ ಧ್ರುವನಾರಾಯಣ ಅವರು ಪ್ರಚಾರ ಸಭೆಯನ್ನು ಮೊಟಕುಗೊಳಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.