ADVERTISEMENT

ಬೆನ್ನಿಗೆ ಚೂರಿ ಹಾಕೋರು ಬೇಡ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:01 IST
Last Updated 21 ಮಾರ್ಚ್ 2019, 20:01 IST
   

ಬೆಂಗಳೂರು: ‘ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದ ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ಕೊಟ್ಟಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ನನ್ನ ಮಗನ ಬೆನ್ನಿಗೆ ಮೂಲ ಕಾಂಗ್ರೆಸಿಗರು ನಿಂತಿದ್ದಾರೆ. ಬೆನ್ನಿಗೆ ಚೂರಿ ಹಾಕುವವರು ಬೇಡ’ ಎಂದು ಕಟುವಾಗಿ ಹೇಳಿದ್ದಾರೆ.

ಕಾಂಗ್ರೆಸ್‌ನ ಚೆಲುವರಾಯಸ್ವಾಮಿ, ರಮೇಶ ಬಂಡಿಸಿದ್ಧೇಗೌಡ ಮೊದಲಾದವರು ಮಂಡ್ಯ ಜಿಲ್ಲೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡದೇ, ಸುಮಲತಾ ಅಂಬರೀಷ್‌ ಬೆಂಬಲಕ್ಕೆ ನಿಂತಿದ್ದಾರೆ ಎಂದು ಟೀಕೆ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ, ಈ ಪ್ರಮುಖರನ್ನು ಕರೆಸಿಕೊಂಡಿದ್ದ ಸಚಿವ ಡಿ.ಕೆ. ಶಿವಕುಮಾರ್, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಬೇಕು ಎಂದು ಕೋರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ನಾಯಕರು, ‘ಹಾಸನದಲ್ಲಿ ಪ್ರಜ್ವಲ್ ಹಾಗೂ ಅವರ ತಂದೆ ರೇವಣ್ಣ ಕಾಂಗ್ರೆಸ್‌ ನಾಯಕರ ಮನೆಗೆ ಭೇಟಿ ನೀಡಿ, ಬೆಂಬಲ ನೀಡುವಂತೆ ಕೋರುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಯಾವ ನಾಯಕರನ್ನೂ ಜೆಡಿಎಸ್‌ ಮುಖಂಡರು ಭೇಟಿ ಮಾಡಿಲ್ಲ, ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ’ ಎಂದು ಅತೃಪ್ತಿ ತೋರಿದ್ದರು.

ADVERTISEMENT

ಇದಕ್ಕೆ ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ,‘ಮಂಡ್ಯದಲ್ಲಿ ಕೆಲವೇ ಕೆಲವು ಕಾಂಗ್ರೆಸ್‌ ನಾಯಕರು ತುಂಬಾ ಮುಂದೆ ಹೋಗಿಬಿಟ್ಟಿದ್ದಾರೆ. ಸ್ವಾಭಿಮಾನ ಕಳೆದುಕೊಂಡು ಅವರ ಮುಂದೆ ಭಿಕ್ಷೆ ಬೇಡುವ ಅಗತ್ಯ ನನಗೆ ಬಂದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಸಮರ್ಥರಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿ ಇರುವ ಅನೇಕರು ನಿಖಿಲ್‌ಗೆ ಆಶೀರ್ವಾದ ಮಾಡಿದ್ದಾರೆ. ಜನರ ಬೆಂಬಲ ಇದ್ದೇ ಇದೆ’ ಎಂದು ಪ್ರತಿಪಾದಿಸಿದರು.

‘ದೇವೇಗೌಡರು ಹಾಸನದಿಂದ ಸ್ಪರ್ಧಿಸಬೇಕು ಎಂದು ರೇವಣ್ಣ ಮತ್ತು ಪ್ರಜ್ವಲ್ ಹೇಳಿದ್ದಾರೆ. ಆದರೆ, ಮೂರು ವರ್ಷದ ಹಿಂದೆ ಪ್ರಜ್ವಲ್‌ಗೆ ಹಾಸನ ಬಿಟ್ಟುಕೊಡುವ ಬಗ್ಗೆ ದೇವೇಗೌಡರು ಹೇಳಿದ್ದರು. ವಾಪಸು ಪಡೆಯುವುದು ಸರಿಯಲ್ಲ ಎಂಬ ಕಾರಣಕ್ಕೆ ಬಿಟ್ಟಿದ್ದಾರೆ. ಯಾವ ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡಬೇಕು ಎಂಬುದನ್ನು ಅವರ ನಿರ್ಧಾರಕ್ಕೆ ಬಿಟ್ಟಿದ್ದೇವೆ. ಸದ್ಯಕ್ಕೆ ಯಾವುದೇ ಸ್ಪಷ್ಟತೆ ಇಲ್ಲ’ ಎಂದರು.

25ರಂದು ಎಲ್ಲ ಅಭ್ಯರ್ಥಿಗಳ ನಾಮಪತ್ರ

ಮಾ.25ರಂದು ಒಂದೇ ಬಾರಿ ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳು ಎಲ್ಲರೂ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಜೆಡಿಎಸ್ ಪಟ್ಟಿ ಶೀಘ್ರವೇ ಬಿಡುಗಡೆ ಆಗಲಿದೆ. ಜ್ಯೋತಿಷಿಗಳ ಸಲಹೆ ಮೇರೆಗೆ ಗುರುವಾರವೇ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದೆವು. ಆದರೆ, ಕಾರ್ಯಕರ್ತರಲ್ಲಿ ಗೊಂದಲ ಆಗುತ್ತದೆ ಎಂಬ ಕಾರಣಕ್ಕೆ ಸಲ್ಲಿಕೆ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.