ADVERTISEMENT

ಬೆಂಗಳೂರು ಗ್ರಾಮಾಂತರ; ಮತದಾನ ಭದ್ರತೆಗೆ 3 ಸಾವಿರ ಸಿಬ್ಬಂದಿ 

ಜಿಲ್ಲೆಯಲ್ಲಿ 1,130 ಮತಗಟ್ಟೆಗಳು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 14:58 IST
Last Updated 15 ಏಪ್ರಿಲ್ 2019, 14:58 IST

ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಏ.18 ರಂದು ನಡೆಯಲಿದ್ದು ಗ್ರಾಮಾಂತರ ಜಿಲ್ಲೆಯಲ್ಲಿ ಮೂರು ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್‌ನಿವಾಸ್ ಸೆಪಟ್ ಹೇಳಿದರು.

ಚುನಾವಣೆ ಭದ್ರತೆ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ 1,130 ಮತಗಟ್ಟೆ ಪೈಕಿ 380 ಮತಗಟ್ಟೆ ಅತಿಸೂಕ್ಷ್ಮ, 133 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದ್ದು ಉಳಿಕೆ ಮತಗಟ್ಟೆಯನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ, ಜಿಲ್ಲೆಯಲ್ಲಿ 24 ಮತಗಟ್ಟೆಗಳನ್ನು ಸಖಿ ಎಂದು ಗುರುತಿಸಲಾಗಿದೆ ಸಖಿ ಎಂದರೆ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವವರೆಲ್ಲರು ಮಹಿಳಾ ಅಧಿಕಾರಿಗಳು ಎಂದು ಹೇಳಿದರು .

ಪ್ರತಿ ಮತಗಟ್ಟೆಯಲ್ಲಿ ಒಬ್ಬ ಪೊಲೀಸ್, ಒಬ್ಬರು ಗೃಹರಕ್ಷಕದಳದ ಸಿಬ್ಬಂದಿ ಇರಲಿದ್ದಾರೆ. ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಇಬ್ಬರು ಪೊಲೀಸ್ ಮತ್ತು ಒಬ್ಬರು ಹೋಂಗಾರ್ಡ್ ಇರಲಿದ್ದಾರೆ. ಪ್ರತಿಯೊಂದು ಮತಗಟ್ಟೆಯಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ADVERTISEMENT

3 ಸಾವಿರ ಭದ್ರತಾ ಸಿಬ್ಬಂದಿಯನ್ನು ಹೊರತು ಪಡಿಸಿ ಮೂರು ಕೇಂದ್ರ ಮೀಸಲು ಪಡೆ ತುಕಡಿ ಮತ್ತು ರಾಜ್ಯದ ಮೀಸಲು ಪಡೆ 25ತುಕಡಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಕರೀಗೌಡ ಮಾಹಿತಿ ನೀಡಿ, ಹೊಸಕೋಟೆ 286 ಮತಗಟ್ಟೆ 2,12,748 ಮತದಾರರು, ದೇವನಹಳ್ಳಿ 292 ಮತಗಟ್ಟೆ 1,99,556 ಮತದಾರರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ 276 ಮತಗಟ್ಟೆಗಳು 2,01,679 ಮತದಾರರು ಇದ್ದಾರೆರ. ನೆಲಮಂಗಲ 276 ಮತಗಟ್ಟೆಗಳು 2,03,603 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 8,17,586 ಮತದಾರರಿದ್ದಾರೆ. ಈ ಬಾರಿ ನೂತನವಾಗಿ ನೊಂದಾಯಿಸಿಕೊಂಡಿರುವ ಯುವ ಮತದಾರರ ಸಂಖ್ಯೆ 9,680 ಇದೆ ಎಂದು ಹೇಳಿದರು ಎಂದರು.

ಈ ಬಾರಿ ಆನೇಕ ರೀತಿಯಲ್ಲಿ ವಿಭಿನ್ನವಾಗಿ ಮತದಾನದ ಜಾಗೃತಿ ನಡೆಸಲಾಗಿದೆ, ಬೀದಿ ನಾಟಕ, ರಂಗೋಲಿ, ಛಾಯಚಿತ್ರ ಪ್ರದರ್ಶನ, ಬಲೂನ್ ಹಾರಾಟ, ಕರಪತ್ರಗಳ ವಿತರಣೆ, ಧ್ವನಿವರ್ಧಕಗಳ ಮೂಲಕ ಅರಿವು ಮೂಡಿಸಲಾಗಿದೆ. ಮಾನವ ಸರಪಳಿ, ಕಾಲ್ನಡಿಗೆ ಜಾಥಾ, ಬೈಕ್ ಜಾಥಾ ನಡೆಸಲಾಗಿದೆ. ಶೇ 100 ರಷ್ಟು ಮತದಾನ ಅಗಬೇಕು ಎಂಬ ನಿಟ್ಟಿನಲ್ಲಿ ಹೆಚ್ಚಿನ ರೀತಿಯಲ್ಲಿ ಮತದಾನದ ಪ್ರಚಾರ ಮಾಡಲಾಗಿದೆ. ಪ್ರಜ್ಞಾವಂತ ಮತದಾರರು ಇತರರಿಗೆ ಮತದಾನ ಮಾಡುವಂತೆ ಹೇಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.