ADVERTISEMENT

ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ: ಬಿ.ಎಸ್‌. ಯಡಿಯೂರಪ್ಪ ಪುನರುಚ್ಚಾರ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 3:49 IST
Last Updated 31 ಮಾರ್ಚ್ 2019, 3:49 IST
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ರೋಡ್‌ ಶೋನಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಮತದಾರರತ್ತ ಕೈಬೀಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಶಾಸಕರಾದ ಪೂರ್ಣಿಮಾ ಶ್ರೀನಿವಾಸ್‌, ಎಂ. ಚಂದ್ರಪ್ಪ ಇದ್ದಾರೆ
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ರೋಡ್‌ ಶೋನಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಮತದಾರರತ್ತ ಕೈಬೀಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಶಾಸಕರಾದ ಪೂರ್ಣಿಮಾ ಶ್ರೀನಿವಾಸ್‌, ಎಂ. ಚಂದ್ರಪ್ಪ ಇದ್ದಾರೆ   

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿರುವ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪಥನವಾಗುವುದು ಖಚಿತ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪುನರುಚ್ಚರಿಸಿದರು.

ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಅವರು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಮಂಗಳವಾರ ನಡೆದ ಬೃಹತ್‌ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಸಮ್ಮಿಶ್ರ ಸರ್ಕಾರದ ಬಗ್ಗೆ ಮಿತ್ರ ಪಕ್ಷದಲ್ಲೇ ಅಪಸ್ವರಗಳು ಎದ್ದಿವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಕಾಂಗ್ರೆಸ್‌ ಶಾಸಕರಿಗೆ ಇಷ್ಟವಿಲ್ಲ. ಅವರೇ ಸರ್ಕಾರವನ್ನು ಬೀಳಿಸಲಿದ್ದಾರೆ’ ಎಂದು ಭವಿಷ್ಯ ನುಡಿದರು.

ADVERTISEMENT

‘ಅಪ್ಪ (ದೇವೇಗೌಡ) – ಮಗ (ಕುಮಾರಸ್ವಾಮಿ) ವಚನ ಭ್ರಷ್ಟರು. ನಂಬಿಕೆಗೆ ದ್ರೋಹ ಎಸಗುವುದೇ ಇವರ ಧರ್ಮ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೂ ಹಿಂದೆ ದ್ರೋಹ ಎಸಗಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದೆ. ರಾಜ್ಯ ಸರ್ಕಾರ ಮೋಜು ಮಾಡುವಲ್ಲಿ ತಲ್ಲೀನವಾಗಿದೆ. ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಈವರೆಗೂ ಕಾರ್ಯಗತಗೊಳಿಸಿಲ್ಲ. ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ’ ಎಂದು ಆರೋಪಿಸಿದರು.

‘ಪ್ರಧಾನಿ ಮೋದಿ ಅವರು ಐದು ವರ್ಷ ಅತ್ಯುತ್ತಮ ಆಡಳಿತ ನಡೆಸಿದ್ದಾರೆ. ಸಣ್ಣ ಹಿಡುವಳಿ ಹೊಂದಿದ ರೈತರಿಗೆ ₹ 6 ಸಾವಿರ ಸಹಾಯಧನ ನೀಡಲಿದ್ದಾರೆ. ಆದಾಯ ತೆರಿಗೆ ಮಿತಿಯನ್ನು ಸಡಿಲಗೊಳಿಸಿದ್ದಾರೆ. ₹ 44 ಲಕ್ಷದವರೆಗೆ ವಹಿವಾಟು ನಡೆಸುವ ಸಣ್ಣ ವ್ಯಾ‍‍ಪಾರಸ್ಥರಿಗೆ ತೆರಿಗೆ ವಿನಾಯಿತಿ ನೀಡಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣವಿದೆ. ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ. ದೇಶದಲ್ಲಿ 300ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ’ ಎಂದು ಹೇಳಿದರು.

ಗೆಲುವು ನಿಶ್ಚಿತ:ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ, ‘ನಾನು ಆರ್‌ಎಸ್‌ಎಸ್ ನಿಷ್ಠಾವಂತ ಕಾರ್ಯಕರ್ತ. ಬಿಜೆಪಿಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ಪಕ್ಷದ ವರಿಷ್ಠರು ಕಣಕ್ಕೆ ಇಳಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಅವರು ದೇಶದ ಚೌಕೀದಾರ್‌ ಆಗಿ ರಾಷ್ಟ್ರದ ಖ್ಯಾತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಹೀಗಾಗಿ, ಪಕ್ಷದ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.