ADVERTISEMENT

ಬಿಜೆಪಿ ದೊಡ್ಡ ನಾಟಕ ಕಂಪನಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 12:16 IST
Last Updated 12 ಏಪ್ರಿಲ್ 2019, 12:16 IST

ಕೋಲಾರ: ‘ದೇಶದಲ್ಲಿ ಬಿಜೆಪಿ ಎಂಬ ದೊಡ್ಡ ನಾಟಕದ ಕಂಪನಿಗೆ ನರೇಂದ್ರ ಮೋದಿ ಪಾತ್ರಧಾರಿಯಾಗಿದ್ದು, ಬಿಜೆಪಿ ಮುಕ್ತ ಸರ್ಕಾರದಿಂದ ಮಾತ್ರ ದೇಶ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಮತದಾರರು ಚುನಾವಣೆಯಲ್ಲಿ ಜಾತ್ಯತೀತ ಶಕ್ತಿ ಬೆಂಬಲಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೋದಿ 2014ರ ಲೋಕಸಭಾ ಚುನಾವಣೆಗೂ ಮುನ್ನ ಹೇಳಿದಂತೆ ದೇಶದಲ್ಲಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ವಿದೇಶದಿಂದ ಕಪ್ಪು ಹಣ ತರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸಲಿಲ್ಲ, ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಬದಲಿಗೆ ನಯಾಪೈಸೆ ಸಹ ಹಾಕಲಿಲ್ಲ’ ಎಂದು ಟೀಕಿಸಿದರು.

‘ಸ್ವಾಭಿಮಾನದ ವಿದ್ಯಾವಂತನೊಬ್ಬ ಉದ್ಯೋಗ ಕೇಳಿದರೆ ಪಕೋಡ ಮಾರುವಂತೆ ಹೇಳಿ ಕಳುಹಿಸಿದ್ದಾರೆ. ಇಂತಹ ಮೋಸಗಾರರಿಗೆ ಮತ್ತೊಮ್ಮೆ ಅವಕಾಶ ನೀಡಬಾರದೆಂದು ಜನ ಈಗಾಗಲೇ ತೀರ್ಮಾನಿಸಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ, ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡುತ್ತೇವೆ ಎಂದು ಹೇಳುವ ಬಿಜೆಪಿ ನಾಯಕರ ವ್ಯಕ್ತಿತ್ವ ಹಿಟ್ಲರ್ ಸಂಸ್ಕೃತಿಯನ್ನು ಹೋಲುತ್ತದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಮೋದಿ ತಮ್ಮ ರಾಜಕೀಯ ಗುರು ಅಡ್ವಾಣಿ ಅವರನ್ನೇ ಮೂಲೆ ಗುಂಪು ಮಾಡಿದ್ದಾರೆ. ಸ್ವಂತ ತಾಯಿ, ಪತ್ನಿಯನ್ನೂ ದೂರವಿರಿಸಿದ್ದಾರೆ. ಇಂತಹವರಿಗೆ ಮತ್ತೆ 5 ವರ್ಷ ಅಧಿಕಾರ ನೀಡಿದರೆ ದೇಶವು ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಹೋಗುವುದರಲ್ಲಿ ಅನುಮಾನವಿಲ್ಲ’ ಎಂದು ಲೇವಡಿ ಮಾಡಿದರು.

‘ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಮೈತ್ರಿ ಸರ್ಕಾರ ಸವಿತಾ ಮಹರ್ಷಿ, ಹಡಪದ ಅಪ್ಪಣ್ಣ ಜಯಂತಿ ಆರಂಭಿಸಿದ್ದು, ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಿ ಸ್ವಾಭಿಮಾನದ ಬದುಕಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಸವಿತಾ ಸಮಾಜದ ಪ್ರತಿಯೊಬ್ಬರೂ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ’ ಎಂದು ತಿಳಿಸಿದರು.

ಸವಿತಾ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಶಂಕರ್, ಚಂದ್ರಶೇಖರ್, ರಾಮಕೃಷ್ಣಪ್ಪ, ರಾಜಣ್ಣ, ಸುಂದರ್, ಗಂಗಾಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.