ADVERTISEMENT

ಚಿಂಚೋಳಿ, ಕುಂದಗೋಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 5:48 IST
Last Updated 25 ಏಪ್ರಿಲ್ 2019, 5:48 IST
ಸಾಂರ್ಧಬಿಕ ಚಿತ್ರ
ಸಾಂರ್ಧಬಿಕ ಚಿತ್ರ   

ಬೆಂಗಳೂರು: ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್–ಕಾಂಗ್ರೆಸ್‌ ಮೈತ್ರಿಕೂಟ ಹಾಗೂ ಬಿಜೆಪಿ ಸಿದ್ಧತೆ ಆರಂಭಿಸಿವೆ.

ಚಿಂಚೋಳಿಯ ಡಾ.ಉಮೇಶ ಜಾಧವ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಹಾಗೂ ಕುಂದಗೋಳ ಶಾಸಕರೂ ಆಗಿದ್ದ ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಹೃದಯಾಘಾತದಿಂದ ನಿಧನರಾಗಿದ್ದರಿಂದ ಎರಡೂ ಕ್ಷೇತ್ರಗಳಿಗೆ ಮೇ 19ರಂದು ಉಪಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಇದೇ 29 ಕೊನೆಯ ದಿನ.

ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ರಾಜ್ಯ ಪ್ರಮುಖರ ಸಭೆ ನಗರದಲ್ಲಿ ಗುರುವಾರ ನಡೆಯಲಿದೆ.‌ ‘ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಸಂಬಂಧಿಸಿದ ಜಿಲ್ಲೆಗಳ ಮುಖಂಡರ ಜತೆಗೆ ಚರ್ಚಿಸಲಾಗುವುದು. ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗುವುದು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು.

ADVERTISEMENT

ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಂಬಂಧ ಜೆಡಿಎಸ್‌ ನಾಯಕರ ಜತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಅವರು ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಕಲಬುರ್ಗಿ ಹಾಗೂ ಧಾರವಾಡ ಜಿಲ್ಲೆಯ ಮುಖಂಡರ ಜತೆಗೆ ದಿನೇಶ್‌ ಗುಂಡೂರಾವ್‌ ಗುರುವಾರ ಸಭೆ ಕರೆದಿದ್ದಾರೆ.

ಸಂಭಾವ್ಯ ಅಭ್ಯರ್ಥಿಗಳು: ಚಿಂಚೋಳಿಯಲ್ಲಿ ಉಮೇಶ ಜಾಧವ ವಿರುದ್ಧ ಸುನೀಲ್‌ ವಲ್ಯಾಪುರೆ ಅವರು 18 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈ ಸಲ ಟಿಕೆಟ್‌ ನೀಡುವಂತೆ ರಾಜ್ಯ ನಾಯಕರಲ್ಲಿ ವಲ್ಯಾಪುರೆ ಕೋರಿದ್ದಾರೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಹೆಸರು ಸಹ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆ.

ಸಹೋದರ ರಾಮಚಂದ್ರ ಜಾಧವ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಉಮೇಶ ಜಾಧವ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್‌ನಿಂದ ಬಾಬು ರಾವ್ ಚವ್ಹಾಣ್‌ ಹಾಗೂ ಸುಭಾಷ್‌ ರಾಠೋಡ್‌ ಹೆಸರುಗಳು ಚರ್ಚೆಯಲ್ಲಿವೆ.

ಕುಂದಗೋಳ ಕ್ಷೇತ್ರದಲ್ಲಿ ಬಿಜೆ‍ಪಿಯಿಂದ ಎಸ್‌.ಐ. ಚಿಕ್ಕನಗೌಡರ (ಯಡಿಯೂರಪ್ಪ ಹತ್ತಿರದ ಸಂಬಂಧಿ) ಹಾಗೂ ಎಂ.ಆರ್‌. ಪಾಟೀಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಸಿ.ಎಸ್‌.ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.