ADVERTISEMENT

ಮೋದಿಗೆ ಶಕ್ತಿ ತುಂಬಲು ಮತ ನೀಡಿ: ಸಿ.ಪಿ. ಯೋಗೇಶ್ವರ್‌

ಬಿಜೆಪಿ: ಬೂತ್ ಮಟ್ಟದ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 14:05 IST
Last Updated 2 ಏಪ್ರಿಲ್ 2019, 14:05 IST
ಬಿಜೆಪಿ ಕಾರ್ಯಕರ್ತರ ಬೂತ್ ಮಟ್ಟದ ಸಭೆಯಲ್ಲಿ ಪಕ್ಷದ ಮುಖಂಡ ಸಿ.ಪಿ. ಯೋಗೇಶ್ವರ್ ಮಾತನಾಡಿದರು
ಬಿಜೆಪಿ ಕಾರ್ಯಕರ್ತರ ಬೂತ್ ಮಟ್ಟದ ಸಭೆಯಲ್ಲಿ ಪಕ್ಷದ ಮುಖಂಡ ಸಿ.ಪಿ. ಯೋಗೇಶ್ವರ್ ಮಾತನಾಡಿದರು   

ಚನ್ನಪಟ್ಟಣ: ‘ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಲ ತುಂಬಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಪಕ್ಷದ ಮುಖಂಡ ಸಿ.ಪಿ. ಯೋಗೇಶ್ವರ್‌ ಮನವಿ ಮಾಡಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಬೂತ್‌ ಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ ಐದು ವರ್ಷ ಆಡಳಿತ ಪೂರೈಸಿ ಜನಮೆಚ್ಚುಗೆ ಗಳಿಸಿದ ಪ್ರಧಾನಿ ಮೋದಿ ಅವರ ಕೊಡುಗೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆತಿವೆ. ಹೀಗಾಗಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಜನರು ತೀರ್ಮಾನಿಸಿದ್ದಾರೆ ಎಂದರು.

ಪಕ್ಷದ ಅಭ್ಯರ್ಥಿಯಾದ ಅಶ್ವತ್ಥ್ ನಾರಾಯಣ ಗೌಡರು ಜನಪರ ಕಾಳಜಿ, ಸಾರ್ವಜನಿಕರಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಈ ಬಾರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಅವರಿಗೆ ಅತಿ ಹೆಚ್ಚು ಮತಗಳು ಲಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಅಭ್ಯರ್ಥಿ ಅಶ್ವತ್ಥ್‌ ನಾರಾಯಣ ಮಾತನಾಡಿ, ಚನ್ನಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಹೇಳಿಕೊಂಡರು. ಇದನ್ನೆಲ್ಲ ನೋಡಿದರೆ ಹಾಲಿ ಸಂಸದರು ರೈಲ್ವೆ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯ ಒದಗಿಸದೇ ಇರುವುದು ಸ್ಪಷ್ಟವಾಗುತ್ತದೆ. ನಗರದ ಕೆ.ಎಸ್.ಆರ್.ಟಿ.ಸಿ. ನಿಲ್ದಾಣ, ರೇಷ್ಮೆಗೂಡಿನ ಮಾರುಕಟ್ಟೆ, ಎ.ಪಿ.ಎಂ.ಸಿ.ಮಾರುಕಟ್ಟೆ ಹಾಗೂ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ನಮಗೆ ಮತದಾರರು ಅಪಾರ ಒಲವು ತೋರಿದ್ದಾರೆ ಎಂದರು.

ಈ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಳೆಯನ್ನೇ ಹರಿಸಿರುವ ಯೋಗೇಶ್ವರ್‌ ನೇತೃತ್ವದಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ, ಮತದಾರರು ಅವರ ಮೇಲೆ ಇಟ್ಟಿರುವ ವಿಶ್ವಾಸವು ಮತಗಳಾಗಿ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಮುಖಂಡ ಕಟ್ಟಾಸುಬ್ರಮಣ್ಯನಾಯ್ಡು ಮಾತನಾಡಿ, ಅಭಿವೃದ್ದಿಗೆ ಮತ್ತೊಂದು ಹೆಸರೇ ಭಾರತೀಯ ಜನತಾ ಪಕ್ಷವಾಗಿದೆ. ಪ್ರಧಾನಿಯನ್ನು ಬೆಂಬಲಿಸಲು ದೇಶದ ಪ್ರಬುದ್ಧ ಮತದಾರರು ಮತ್ತೊಮ್ಮೆ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್, ಮುಖಂಡ ಹುಲುವಾಡಿ ದೇವರಾಜು ಇದ್ದರು.

* ಪಾರದರ್ಶಕ ಆಡಳಿತಕ್ಕೆ ಮತ್ತೊಂದು ಹೆಸರೇ ಬಿಜೆಪಿ. ದೇಶದಾದ್ಯಂತ ಜನರು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ
–ಅಶ್ವತ್ಥ್‌ ನಾರಾಯಣ
ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.