ADVERTISEMENT

ರಾಜಕೀಯ ಜೀವನ ತೃಪ್ತಿ ನೀಡಿದೆ: ರಮ್ಯಾ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 6:27 IST
Last Updated 24 ಮಾರ್ಚ್ 2014, 6:27 IST
ಕಿಕ್ಕೇರಿ ಹೋಬಳಿಯ ಮಾದಾಪುರದಲ್ಲಿ ಶನಿವಾರ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು.
ಕಿಕ್ಕೇರಿ ಹೋಬಳಿಯ ಮಾದಾಪುರದಲ್ಲಿ ಶನಿವಾರ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು.   

ಕಿಕ್ಕೇರಿ: ರಾಜಕೀಯ ಜೀವನ ತೃಪ್ತಿ ನೀಡುತ್ತಿದ್ದು ಜಿಲ್ಲೆಯನ್ನು ರಾಜ್ಯದಲ್ಲಿ ಮಾದರಿ ಮಾಡುವ ಆಸೆಗೆ ಆಸರೆಯಾಗಿ ಎಂದು ಮತದಾರರಲ್ಲಿ ಸಂಸದೆ ಹಾಗೂ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿನಂತಿ ಮಾಡಿಕೊಂಡರು.

ಶನಿವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಹೋಬಳಿಯ ಗಡಿ ಗ್ರಾಮಗಳಾದ ಮಾದಾಪುರ, ದಬ್ಬೇಘಟ್ಟ, ಆನೆಗೂಳ, ಐಕನಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡುತ್ತ ಅವರು ಮಾತನಾಡಿದರು.  ಅತ್ಯಲ್ಪ ಅವಧಿಯಲ್ಲಿ ಜಿಲ್ಲೆಯ ಹಳ್ಳಿ ಗಲ್ಲಿಗಳನ್ನು ಸುತ್ತಿ ವಾಸ್ತವತೆ ಅರಿತಿರುವೆ. ಸುಮಾರು ₨ ೬೦ಲಕ್ಷ  ಅನುದಾನ ತಂದು ಗ್ರಾಮಾಭಿವೃದ್ಧಿಗೆ ಶ್ರಮಿಸಿರುವೆ. ಮುಂದೆ ದೀರ್ಘಾವಧಿ ಸಂಸದೆಯಾಗಿ ಜಿಲ್ಲೆಗೆ ಪುಡ್ ಪಾರ್ಕ್, ವಿವಿಧ ಕಾರ್ಖಾನೆ, ರೈತರ ಕಲ್ಯಾಣಾಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡಲು ಹೋರಾಟ ನಡೆಸುವೆ. ಕಡಿಮೆ ಅವಧಿಯಲ್ಲಿ ಜಿಲ್ಲೆಗೆ ಕೇಂದ್ರಿಯ ವಿದ್ಯಾಲಯ, ಕ್ಯಾನ್ಸರ್ ಆಸ್ಪತ್ರೆಗೆ ಮಂಜೂರಾತಿ ಮಾಡಿಸಿರುವ ತನಗೆ ಜನತೆ ಆಶೀರ್ವದಿಸಬೇಕೆಂದು ಬೇಡಿದರು.

ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ತಾ.ಪಂ. ಸದಸ್ಯ ವಿನೋದಮ್ಮ, ಕೋಡಿಮಾರನಹಳ್ಳಿ ದೇವರಾಜು, ಜಿ.ಪಂ. ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಬೇಲದಕರೆ ಪಾಪೇಗೌಡ, ತಾ.ಪಂ. ವಿಪಕ್ಷ ನಾಯಕ ಕೆ.ಆರ್. ರವೀಂದ್ರಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರಕುಮಾರ್, ಕೆ. ಶ್ರೀನಿವಾಸ್, ಡಾ.ರಾಮಕೃಷ್ಣೇಗೌಡ, ಜವರಾಯಿ, ಚನ್ನಿಂಗೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕ್ಮಾಂಗದ, ಎಂ.ಡಿ. ಕೃಷ್ಣಮೂರ್ತಿ, ಕೆ.ಆರ್. ಪೇಟೆ. ಪುರಸಭಾ ಅಧ್ಯಕ್ಷ ಗೌಸ್‌ಖಾನ್, ಸೊಳ್ಳೇಪುರ ಮಂಜಪ್ಪ, ಚೇತನಾ ಮಹೇಶ್, ನ್ಯಾಯಬೆಲೆ ಮಂಜೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ್, ಚೇತನ್‌ಕುಮಾರ್, ಕಾಳೇಗೌಡ ಇದ್ದರು.

‘ಸಮಗ್ರ ಅಭಿವೃದ್ಧಿ ನನ್ನ ಗುರಿ’
ಕೃಷ್ಣರಾಜಪೇಟೆ: ಬಹಳ ಕಡಿಮೆ ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಜನರ ನೋವು ನಲಿವುಗಳು ನನ್ನ ಅರಿವಿಗೆ ಬಂದಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಮುಂದಿರುವ ಗುರಿ ಎಂದು ಸಂಸದೆ ರಮ್ಯಾ ತಿಳಿಸಿದರು. ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿರುವ ರಮ್ಯಾ ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಮತ್ತು ಕಿಕ್ಕೇರಿ ಹೋಬಳಿಗಳ ವಿವಿಧ ಗ್ರಾಮಪಂಚಾಯಿತಿ ಕೇಂದ್ರಗಳಲ್ಲಿ ಶನಿವಾರ ಏರ್ಪಡಿಸಿದ್ದ  ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.

  ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ ಆರಂಭವಾಗಲು ಪ್ರಯತ್ನ ಪಟ್ಟಿದ್ದೇನೆ. ಸಂಸತ್ ಸದಸ್ಯರ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿದ್ದೇನೆ. ಬಡ ಮಕ್ಕಳಿಗೆ ನನ್ನ ಸ್ವಂತ ಹಣದಿಂದ ಉಚಿತ ಶೂ, ಕಂಪ್ಯೂಟರ್‌ ನೀಡಿದ್ದೇನೆ. ಜಿಲ್ಲಾ ಪ್ರವಾಸ ಮಾಡಿ ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದ್ದೇನೆ.  ಕಡಿಮೆ ಅವಧಿಯಲ್ಲಿ ಸಂಸದೆಯಾಗಿ ಸಮರ್ಥ ಕಾರ್ಯ ನಿರ್ವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಕೆಲಸ ಮಾಡಲು,  ಮತದಾರರು ಬೆಂಬಲಿಸಬೇಕು ಎಂದರು. ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್‌, ವಿವಿಧ ಹಂತದ ಜನಪ್ರತಿನಿಧಿಗಳು ಬೆಂಬಲಿಗರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.