ADVERTISEMENT

ಕೇಂದ್ರದ ನೀತಿಗಳಿಂದ ಸಂಕಷ್ಟದಲ್ಲಿ ಗೋಡಂಬಿ ಉದ್ಯಮ: ಪ್ರಮೋದ್ ಮಧ್ವರಾಜ್

ಕಾರ್ಕಳದಲ್ಲಿ ಗೋಡಂಬಿ ಕಾರ್ಖಾನೆಗಳಿಗೆ ಭೇಟಿನೀಡಿದ ಜೆಡಿಎಸ್ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 15:13 IST
Last Updated 13 ಏಪ್ರಿಲ್ 2019, 15:13 IST
ಕಾರ್ಕಳದಲ್ಲಿ ಪ್ರಮೋದ್ ಮಧ್ವರಾಜ್ ಪ್ರಚಾರ ನಡೆಸಿದರು.
ಕಾರ್ಕಳದಲ್ಲಿ ಪ್ರಮೋದ್ ಮಧ್ವರಾಜ್ ಪ್ರಚಾರ ನಡೆಸಿದರು.   

ಕಾರ್ಕಳ: ಕೇಂದ್ರದಲ್ಲಿ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಗೋಡಂಬಿ ಉದ್ಯಮ ಚೆನ್ನಾಗಿ ನಡೆಯುತ್ತಿತ್ತು. ಕೇಂದ್ರದ ತಪ್ಪು ಆರ್ಥಿಕ ನೀತಿಗಳಿಂದ ಹಾಗೂ ಜಿಎಸ್‌ಟಿ, ನೋಟ್ ಬ್ಯಾನ್ ನಂತರ ಶೇ 60ರಷ್ಟು ಗೋಡಂಬಿ ಕಾರ್ಖಾನೆಗಳು ತೊಂದರೆಯಲ್ಲಿವೆ ಎಂದು ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ಕಾರ್ಕಳದ ಗೋಡಂಬಿ ಕಾರ್ಖಾನೆಗಳಿಗೆ ಶನಿವಾರ ಭೇಟಿನೀಡಿ ಪ್ರಚಾರ ನಡೆಸಿದ ಅವರು, ಗೋಡಂಬಿ ಉದ್ಯಮ ಸಂಕಷ್ಟದಲ್ಲಿರುವ ಕಾರಣ ಉದ್ಯೋಗ ಸಿಗುತ್ತಿಲ್ಲ.ಕಾರ್ಕಳ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಗೋಡಂಬಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ. ಕೆಲಸ ಕಳೆದುಕೊಂಡರೆ ಬದುಕು ದುಸ್ಥರವಾಗಲಿದೆ ಎಂದರು.

ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ‘ನ್ಯಾಯ್’ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ಕುಟುಂಬದ ಮಹಿಳೆಯ ಖಾತೆಗೆ ತಿಂಗಳಿಗೆ 6000 ನಗದು ವರ್ಗಾವಣೆಯಾಗಲಿದೆ. ಈ ಕಾರ್ಯಕ್ರಮದಿಂದ ಆರ್ಥಿಕವಾಗಿ ಮಹಿಳೆ ಸಬಲರಾಗಬಹುದು ಎಂದರು.

ADVERTISEMENT

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷದ ಅಭ್ಯರ್ಥಿಯ ಚಿಹ್ನೆ ತೆನೆಹೊತ್ತ ಮಹಿಳೆಗೆ ಮತ ನೀಡಬೇಕು ಎಂದು ಮುಖಂಡ ಗೋಪಾಲ ಭಂಡಾರಿ ವಿನಂತಿಸಿದರು.

ಈ ಸಂದರ್ಭ ನೀರೆ ಕೃಷ್ಣಶೆಟ್ಟಿ, ಸುಧಾಕರ ಕೋಟ್ಯಾನ್, ಮಂಜುನಾಥ ಪೂಜಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶೇಖರ ಮಡಿವಾಳ, ಶಶಿಧರ ಶೆಟ್ಟಿ ಎಲ್ಲೂರು, ಆರಿಫ್ ಕಲ್ಲೊಟ್ಟೆ ಉಪಸ್ಥಿತರಿದ್ದರು.

‘ಅಖಾಡಕ್ಕಿಳಿದ ಪ್ರಮೋದ್ ಪುತ್ರಿ’

ಪ್ರಮೋದ್ ಮಧ್ವರಾಜ್ ಪರವಾಗಿ ಪುತ್ರಿ ಪ್ರತ್ಯಕ್ಷ ಅವರು ಕಾರ್ಕಳದ ಹಲವೆಡೆ ಮತಯಾಚನೆ ಮಾಡಿದರು. ಈ ಭಾಗದ ಹಲವು ಕಾರ್ಖಾನೆಗಳಿಗೆ ಭೇಟಿ ನೀಡಿದ ಪ್ರತ್ಯಕ್ಷ ಅಪ್ಪನಿಗೆ ಮತ ಹಾಕುವಂತೆ ಮನವಿ ಮಾಡಿದರು. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣದಲ್ಲಿ ಪ್ರಮೋದ್ ಅವರ ಪುತ್ರಿ ಕಾಣಿಸಿಕೊಂಡಿರುವುದು ವಿಶೇಷ.

ಈ ಸಂದರ್ಭ ಕಾಂಗ್ರಸ್‌ ನಾಯಕಿ ವೆರೋನಿಕಾ ಕರ್ನೇಲಿಯೋ, ಜಯಲಕ್ಷ್ಮಿ ಪುತ್ರನ್, ಜ್ಯೋತಿ ಹೆಬ್ಬಾರ್, ಮುಖಂಡರಾದ ರಮೇಶ್ ಕಾಂಚನ್, ಚಂದ್ರಿಕಾ ಶೆಟ್ಟಿ, ಪರ್ಕಳ ಅಬ್ದುಲ್ ಸಾಹೇಬ್, ಡಾ.ಸುನಿತಾ ಶೆಟ್ಟಿ, ಸುಕೇಶ್ ಕುಂದರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.