ADVERTISEMENT

ಕಾಂಗ್ರೆಸ್‌ಗೆ ‘ಪ್ರತಿಷ್ಠೆ’ ಪಣಕ್ಕಿಡುವ ಸವಾಲು

ಶಾಸಕ ಶಾಮನೂರು ಶಿವಶಂಕರಪ್ಪಗೆ ಲೋಕಸಭಾ ಟಿಕೆಟ್‌ ಘೋಷಣೆ

ವಿನಾಯಕ ಭಟ್ಟ‌
Published 26 ಮಾರ್ಚ್ 2019, 10:44 IST
Last Updated 26 ಮಾರ್ಚ್ 2019, 10:44 IST
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೇ ಲೋಕಸಭಾ ಟಿಕೆಟ್‌ ಅನ್ನು ಪಕ್ಷದ ಹೈಕಮಾಂಡ್‌ ಘೋಷಿಸುವುದು ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರನ್ನು ನಿದ್ದೆಯಿಂದ ಬಡಿದೆಬ್ಬಿಸಿದಂತಾಗಿದೆ. ಕಳೆದ ಮೂರು ಚುನಾವಣೆಯಲ್ಲಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸೋತಿದ್ದರಿಂದ ಈಗ ‘ಪ್ರತಿಷ್ಠೆ’ಯನ್ನು ಪಣಕ್ಕೆ ಒಡ್ಡಿ ‘ದೊಡ್ಡವರ’ನ್ನು ಗೆಲ್ಲಿಸಲೇಬೇಕಾದ ಸಂದಿಗ್ಧ ಪರಿಸ್ಥಿತಿ ನಾಯಕರು ಹಾಗೂ ಕಾರ್ಯಕರ್ತರಿಗೆ ಎದುರಾಗಿದೆ.

ಚುನಾವಣೆಯಲ್ಲಿ ಯಾರು ನಾಮಪತ್ರ ಸಲ್ಲಿಸಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರ ಜೊತೆಗೆ ಚರ್ಚಿಸಲು ಶಾಮನೂರು ಶಿವಶಂಕರಪ್ಪ ಬೆಂಗಳೂರಿಗೆ ತೆರಳಿದ್ದಾರೆ. ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ ಸಹ ಮೂರ್ನಾಲ್ಕು ದಿನಗಳಿಂದ ರಾಜಧಾನಿಯಲ್ಲೇ ಠಿಕಾಣಿ ಹೂಡಿದ್ದಾರೆ. ‘ಅಪ್ಪ–ಮಗ’ ಜೊತೆಗೂಡಿ ‘ರಾಜಕೀಯ ಭವಿಷ್ಯ’ದ ಲೆಕ್ಕಾಚಾರ ಹಾಕಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. ಮಂಗಳವಾರ ನಗರಕ್ಕೆ ವಾಪಸ್ಸಾಗಿ ಜಿಲ್ಲೆಯ ನಾಯಕರ ಜೊತೆಗೆ ಈ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಅಜ್ಜವ್ರಿಗೆ (ಶಾಮನೂರು) ಟಿಕೆಟ್‌ ನೀಡಿರುವುದು ಪಕ್ಷದ ಹಿರಿಯ ಕಾರ್ಯಕರ್ತರಲ್ಲೂ ಸಂಚಲನ ಮೂಡಿಸಿದೆ. ಅವರೇ ಚುನಾವಣೆಗೆ ನಿಂತುಕೊಂಡರೆ ಅವರ ಕುಟುಂಬದ ಎಲ್ಲಾ ಸದಸ್ಯರೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಮಕ್ಕಳೆಲ್ಲ ಒಂದೊಂದು ಜವಾಬ್ದಾರಿ ತೆಗೆದುಕೊಳ್ಳುವುದುರಿಂದ ಪ್ರಚಾರ ಮಾಡುವುದು ಹೆಚ್ಚು ಸುಲಭವಾಗಲಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಡುತ್ತಾರೆ.

ADVERTISEMENT

ಅನುಕಂಪದ ಅಲೆ: ‘ಹಿರಿಯರಾದ ಶಾಮನೂರು ಅವರಿಗೆ ಈ ಲೋಕಸಭಾ ಚುನಾವಣೆಯೇ ಕೊನೆಯ ಚುನಾವಣೆ ಆಗಬಹುದು. ಕೊನೆಯ ಚುನಾವಣೆಯಲ್ಲಿ ಸೋಲಿಸುವುದು ಬೇಡ ಎಂಬ ‘ಅನುಕಂಪ’ವೂ ಶಾಮನೂರು ಅವರ ಕೈ ಹಿಡಿಯಲಿದೆ. ಕೊನೆಯ ಚುನಾವಣೆಯಲ್ಲಿ ಸೋಲಿಸಿಸಬಾರದು ಎಂಬ ಕಾರಣಕ್ಕೆ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಲಿಂಗಾಯತರು ಸಮಾಜದ ಹಿರಿಯರಾದ ಶಾಮನೂರು ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಶಾಮನೂರು ಶಿವಶಂಕರಪ್ಪ ಹೆಸರು ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲೂ ತಳಮಳ ಶುರುವಾಗಿದೆ’ ಎನ್ನುತ್ತಾರೆ ಶಾಮನೂರು ಕುಟುಂಬದ ಆಪ್ತ ನಾಯಕರೊಬ್ಬರು.

‘ದಾವಣಗೆರೆ ನಗರದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಅಧಿಕಾರದಲ್ಲಿ ಇರಬೇಕು ಎಂಬ ಅರಿವು ಜನರಿಗೆ ಈಗ ಆಗಿದೆ. ಹೀಗಾಗಿ ಶಾಮನೂರು ಅವರನ್ನು ಆಯ್ಕೆ ಮಾಡಿದರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಲು ಅವಕಾಶ ಸಿಗಲಿದೆ ಎಂಬ ಮಾತುಗಳೂ ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಈ ಬಾರಿ ಕಾರ್ಯಕರ್ತರು ಮಾಡುವುದಿಲ್ಲ’ ಎಂದೂ ಅವರು ಧ್ವನಿಗೂಡಿಸಿದರು.

ಶಾಮನೂರು ಅಥವಾ ಮಲ್ಲಿಕಾರ್ಜುನ ಪೈಕಿ ಒಬ್ಬರು ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಯಾರು ಎಂಬ ಕುತೂಹಲಕ್ಕೆ ಒಂದೆರಡು ದಿನಗಳಲ್ಲೇ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.