ADVERTISEMENT

ಮೋದಿ ಅಲೆ, ವೈಯಕ್ತಿಕ ವರ್ಚಸ್ಸೇ ವರ: ಅಣ್ಣಾಸಾಹೇಬ ಜೊಲ್ಲೆ ವಿಶ್ವಾಸ

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ

ಎಂ.ಮಹೇಶ
Published 30 ಏಪ್ರಿಲ್ 2019, 14:22 IST
Last Updated 30 ಏಪ್ರಿಲ್ 2019, 14:22 IST
ಅಣ್ಣಾಸಾಹೇಬ ಜೊಲ್ಲೆ
ಅಣ್ಣಾಸಾಹೇಬ ಜೊಲ್ಲೆ   

ಬೆಳಗಾವಿ: ‘ಪ‍್ರಧಾನಿ ನರೇಂದ್ರ ಮೋದಿ ಅಲೆ ನನಗೂ ನೆರವಾಗಲಿದೆ. ಅಧಿಕಾರವಿಲ್ಲದಿದ್ದರೂ ನಾನು ಸಮಾಜಸೇವೆ ಮಾಡಿರುವುದು ಹಾಗೂ ವೈಯಕ್ತಿಕ ವರ್ಚಸ್ಸು ಕೂಡ ಕೈಹಿಡಿಯಲಿದೆ’ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು.

ಬಿಡುವಿಲ್ಲದ ಪ್ರಚಾರದ ನಡುವೆಯೇ ಮಂಗಳವಾರ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಅವರು ಮಾತನಾಡಿದರು.

* ಟಿಕೆಟ್‌ ಫೈಟ್‌ನಲ್ಲಿ ಗೆದ್ದು ಕಣಕ್ಕಿಳಿದಿದ್ದೀರಿ, ಕ್ಷೇತ್ರದಲ್ಲಿ ಪ್ರತಿಕ್ರಿಯೆ ಹೇಗಿದೆ?

ADVERTISEMENT

ಹಲವು ಕಡೆಗಳಲ್ಲಿ ಪ್ರಚಾರ ನಡೆಸಿದ್ದೇನೆ. ಒಳ್ಳೆಯ ವಾತಾವರಣ ಕಂಡುಬರುತ್ತಿದೆ. ಸಮಾಜಸೇವೆಯಲ್ಲಿ ತೊಡಗಿರುವ ನಿಮ್ಮಂಥವರು ಸಂಸದರಾಗಬೇಕು ಎಂದು ಜನರು ಬಯಸಿದ್ದಾರೆ. ನಮ್ಮೂರಲ್ಲಿ ಪ್ರಚಾರ ಮಾಡಿ ಎಂದು ಜನರೇ ಬಂದು ಕೋರುತ್ತಿದ್ದಾರೆ. ಹೀಗಾಗಿ, ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ದೇಶ ಉಳಿಯಬೇಕು ಎಂದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಜನರೇ ಹೇಳುತ್ತಿದ್ದಾರೆ.

* ಈ ವಿಶ್ವಾಸಕ್ಕೆ ಕಾರಣವೇನು?

ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿರುವ ಜನಪರ ಕಾರ್ಯಕ್ರಮಗಳು. ಭ್ರಷ್ಟಾಚಾರವಿಲ್ಲದ ಆಡಳಿತ. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿರುವುದು. ಕಾಂಗ್ರೆಸ್‌ನ ವೈಫಲ್ಯಗಳು. ಸಹಕಾರ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸ. ಜನರಿಗೆ ಸ್ಪಂದಿಸುತ್ತಾ ಬಂದಿರುವುದು. ಇದೆಲ್ಲದಕ್ಕೂ ಪೂರಕವಾಗಿ ಪಕ್ಷದ ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಇತರ ಜನಪ್ರತಿನಿಧಿಗಳು, ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರ ಮಾಡುತ್ತಿದ್ದಾರೆ.

* ಟಿಕೆಟ್‌ ಸಿಗದಿದ್ದುದಕ್ಕೆ ರಮೇಶ ಕತ್ತಿ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲವಲ್ಲ?

ಅವರಿಗೆ ಬೇಸರವೇನಿಲ್ಲ. ಹೋದ ಚುನಾವಣೆಯಲ್ಲಿ ನಾನು ಟಿಕೆಟ್‌ ಬಯಸಿದ್ದೆ. ಆದರೆ, ಸಿಕ್ಕಿರಲಿಲ್ಲ. ಈ ಬಾರಿ ಪಕ್ಷ ನನ್ನನ್ನು ಆಯ್ಕೆ ಮಾಡಿದೆ. ಪಕ್ಷಕ್ಕಾಗಿ ಎಲ್ಲರೂ ಕೆಲಸ ಮಾಡುತ್ತಾರೆ. ಯಾರಲ್ಲೂ ಭಿನ್ನಾಭಿಪ‍್ರಾಯವಿಲ್ಲ. ಶಾಸಕ ಉಮೇಶ ಕತ್ತಿ ನಾಮಪತ್ರ ಸಲ್ಲಿಸುವಾಗಲೂ ಜೊತೆಯಲ್ಲಿದ್ದರು. ನಂತರ ಪ್ರಚಾರವನ್ನೂ ನಡೆಸುತ್ತಿದ್ದಾರೆ. ಒಂದು ಮನೆಯಲ್ಲಿ ಒಬ್ಬರು ಬಂದರೆ ಎಲ್ಲರೂ ಬಂದಂತೆಯೇ ಅರ್ಥವಲ್ಲವೇ?

* ನಿಮಗೇ ಮತ ಹಾಕಬೇಕೇಕೆ?

ಅಭಿವೃದ್ಧಿ ಎಂದರೇನು ಎನ್ನುವುದನ್ನು 30 ವರ್ಷಗಳಿಂದಲೂ ನಿಪ್ಪಾಣಿ ಭಾಗದಲ್ಲಿ ಮಾಡಿ ತೋರಿಸಿದ್ದೇವೆ. ಇದನ್ನು ಇಡೀ ಲೋಕಸಭಾ ಕ್ಷೇತ್ರದಾದ್ಯಂತ ಮಾಡಬೇಕಾಗಿದೆ. ನೀರಾವರಿ ಸೌಲಭ್ಯ ಒದಗಿಸಬೇಕಾಗಿದೆ. ನೀರಿದ್ದಲ್ಲಿ ಸವಳು–ಜವಳು ಸಮಸ್ಯೆಯಿಂದ ರೈತರನ್ನು ಮುಕ್ತಗೊಳಿಸಬೇಕಾಗಿದೆ. ಚಿಕ್ಕೋಡಿ ಜಿಲ್ಲೆಯಾಗಬೇಕು ಎನ್ನುವ ಬೇಡಿಕೆ ಈಡೇರಿಸಲು ಹೋರಾಡುತ್ತೇನೆ. ಮಹಾಲಕ್ಷ್ಮಿ, ಕರಗಾಂವ ಏತ ನೀರಾವರಿ ಅನುಷ್ಠಾನಗೊಳಿಸಲು. ಕೈಗಾರಿಕೆಗಳನ್ನು ತಂದು ಯುವಜನರಿಗೆ ಉದ್ಯೋಗ ಒದಗಿಸುವ ಮಹತ್ವಾಕಾಂಕ್ಷೆ ಇದೆ. ಈಗಾಗಲೇ ಜೊಲ್ಲೆ ಉದ್ಯೋಗ ಸಮೂಹದಿಂದ 2ಸಾವಿರಕ್ಕೂ ಹೆಚ್ಚಿನ ಮಂದಿಗೆ ಕೆಲಸ ಕೊಟ್ಟಿದ್ದೇವೆ. ಅಧಿಕಾರ ಸಿಕ್ಕರೆ ದೊಡ್ಡ ಮಟ್ಟದಲ್ಲಿ ನೆರವಾಗಬಹುದು.

* ಹಾಗಾದರೆ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಏನೂ ಮಾಡಿಲ್ಲವೇ?

ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಚಿಕ್ಕೋಡಿ–ಸದಲಗಾ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದಾರೆ. ಅಧಿವೇಶದಲ್ಲೂ ಸರಿಯಾಗಿ ಭಾಗವಹಿಸಿಲ್ಲ. ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಓಡಾಡಿಲ್ಲ. ರಸ್ತೆ, ಚರಂಡಿ ನಿರ್ಮಾಣ ಸಂಸದರ ಕೆಲಸವೇ? ನೀರಾವರಿಗೆ ಆದ್ಯತೆ ನೀಡಿಲ್ಲ. ಅನುದಾನ ಬಳಕೆ ಕಾಗದದಲ್ಲಷ್ಟೇ ಉಳಿದಿದೆ. ಕೇಂದ್ರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿಲ್ಲ. ‘ಉಜ್ವಲ’ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್‌ಗಳನ್ನಷ್ಟೇ ವಿತರಿಸಿದ್ದಾರೆ. ಆ ಯೋಜನೆಯನ್ನು ನಮ್ಮ ಕಾರ್ಯಕರ್ತರೇ ಹೆಚ್ಚು ಅನುಷ್ಠಾನಗೊಳಿಸಿದ್ದಾರೆ. ಇದೆಲ್ಲವನ್ನೂ ಜನರು ಗಮನಿಸಿದ್ದಾರೆ; ಪ್ರಶ್ನಿಸುತ್ತಿದ್ದಾರೆ. ಇದು ನನಗೆ ನೆರವಾಗಲಿದೆ. ಪತ್ನಿ, ಶಾಸಕಿ ಶಶಿಕಲಾ ಜೊಲ್ಲೆ ಕೆಲಸಗಳೂ ಕೈಹಿಡಿಯಲಿವೆ. ಅದರ ಕೆಲಸದಲ್ಲಿ ನನ್ನ ಯೋಗದಾನವೂ ಇದ್ದೇ ಇದೆ.

* ವಿಧಾನಸಭೆ ಚುನಾವಣೆಯಲ್ಲಿ ನನ್ನ ಹಾಗೂ ಪುತ್ರ ಗಣೇಶ ಹುಕ್ಕೇರಿ ವಿರುದ್ಧ ಸೋತಿದ್ದವರು ಗೆಲ್ಲುತ್ತಾರೆಯೇ ಎಂದು ಪ್ರಕಾಶ ಹುಕ್ಕೇರಿ ಕೇಳುತ್ತಿದ್ದಾರಲ್ಲಾ?

ಸೋತವರು ಗೆಲ್ಲಬಾರದು ಎಂದೇನಿಲ್ಲ. ಹಾಗೆ ನೋಡಿದರೆ ಅವರು (ಪ್ರಕಾಶ ಹುಕ್ಕೇರಿ) ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ನನ್ನ ವಿರುದ್ಧ ಎರಡು ಬಾರಿ ಸೋತಿದ್ದಾರೆ. ಎಪಿಎಂಸಿ ಚುನಾವಣೆಯಲ್ಲೂ ಸೋತಿದ್ದರು. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ರಮೇಶ ಕತ್ತಿ ವಿರುದ್ಧ ಸೋತಿರಲಿಲ್ಲವೇ!? ಸೋತಿದ್ದು ಬಿಟ್ಟು ಗೆದ್ದಿದ್ದಷ್ಟನ್ನೇ ಹೇಳಿಕೊಳ್ಳುತ್ತಿದ್ದಾರೆ! ಈ ಬಾರಿ ಜನ ಕೈಹಿಡಿಯುವ ವಿಶ್ವಾಸ ನನಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.