ADVERTISEMENT

ಕಾಂಗ್ರೆಸ್‌ಗೆ ಮತ: ಲಾಲು ಬೆಂಬಲಿಗರ ಹಿಂದೇಟು

ಹಾಜಿಪುರ: ತ್ರಿಕೋನ ಸ್ಪರ್ಧೆಯಲ್ಲಿ ಪಾಸ್ವಾನ್‌ ಅವರಿಗೆ ಅಲ್ಪ ಮುನ್ನಡೆ

ಅಭಯ್ ಕುಮಾರ್
Published 12 ಏಪ್ರಿಲ್ 2014, 19:30 IST
Last Updated 12 ಏಪ್ರಿಲ್ 2014, 19:30 IST

ಹಾಜಿಪುರ, ಬಿಹಾರ: ಹಾಜಿಪುರದಿಂದ ಸುಮಾರು 40 ಕಿ.ಮೀ ಪೂರ್ವಕ್ಕಿರುವ ಮನ್‌ಹರ್‌ನ ಶಿವಾಜಿ ಪಾಸ್ವಾನ್‌ಗೆ ಯಾರಿಗೆ ಮತ ಹಾಕಬೇಕು ಎಂಬ ದ್ವಂದ್ವ. ಎಲ್‌ಜೆಪಿ ಮುಖ್ಯಸ್ಥ ರಾಮ್‌ ವಿಲಾಸ್‌ ಪಾಸ್ವಾನ್‌ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಗೆದ್ದಿದ್ದಾರೆ. ಹಾಲಿ ಸಂಸದ ಜೆಡಿಯು ಅಭ್ಯರ್ಥಿ ರಾಮ್‌ ಸುಂದರ್‌ ದಾಸ್‌ 2009ರಲ್ಲಿ ಪಾಸ್ವಾನ್‌ ಅವರನ್ನು ಸೋಲಿಸಿದ್ದಾರೆ.

ಮನ್‌ಹರ್‌ನ ಹಾಗೆಯೇ ರಾಘೋಪುರ್‌, ಹಾಜಿಪುರ್‌, ಲಾಲ್‌ಗಂಜ್‌, ರಾಜಾ ಪಕರ್‌ ಮತ್ತು ಮಹುವಾ ವಿಧಾನಸಭೆ ಕ್ಷೇತ್ರಗಳ ಹಲವು ಮತ­ದಾರರೂ ತಮಗೆ ಆಯ್ಕೆಯೇ ಇಲ್ಲ ಎನ್ನುತ್ತಿದ್ದಾರೆ. ‘2009ರ ಚುನಾವಣೆಯಲ್ಲಿ ನಾವು ಪಾಸ್ವಾನ್‌ ಅವರಿಗೆ ಮತ ಹಾಕಲಿಲ್ಲ. ಯಾಕೆಂದರೆ ಅವರು ರಾಬ್ರೀದೇವಿ ಅವರಿಗೆ ಸಹಾಯ ಮಾಡಲು ನಿರಾ­ಕರಿಸಿದ್ದರು. ಆಗ ರಾಬ್ರೀ ಅವರು ರಾಘೋಪುರ ಶಾಸಕ­ರಾಗಿದ್ದರು. 2009ರಲ್ಲಿ ಲೋಕಸಭೆ ಚುನಾವಣೆ ಸೋತ ಪಾಸ್ವಾನ್‌ ಅವರು ರಾಜ್ಯಸಭೆ ಸದಸ್ಯರಾಗಲು ಆರ್‌ಜೆಡಿ ನೆರವು ನೀಡಿತ್ತು. ಆದರೆ ಮತ್ತೆ ಪಾಸ್ವಾನ್‌ ಅವರು ಲಾಲು ಅವರಿಗೆ ಕೈಕೊಟ್ಟು ಮೋದಿ ಅವರೊಂದಿಗೆ ಸೇರಿಕೊಂಡಿ­ದ್ದಾರೆ’ ಎಂದು ಬಿದ್ದೂಪುರದ ರೈತ ರಾಮ್‌ ಪ್ರವಶ್‌ ರಾಯ್‌ ಹೇಳುತ್ತಾರೆ.

ಆಗಾಗ ನಿಷ್ಠೆ ಬದಲಾಯಿಸುತ್ತಿರುವುದಕ್ಕೆ ಪಾಸ್ವಾನ್‌ ಬಗ್ಗೆ ರಾಯ್‌ ಅವರಿಗೆ ಸಿಟ್ಟಿದೆ. ಆದರೆ ಅವರಿಗೆ ಆಯ್ಕೆಗಳೇ ಇಲ್ಲ. ‘ನಾನು ನಿತೀಶ್‌ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದಕ್ಕೆ ಸಾಧ್ಯವಿಲ್ಲ. ಬಿಜೆಪಿಗೂ ಮತ ಹಾಕುವುದಿಲ್ಲ. ಲಾಲು ಅವರು ಜೈಲಿಗೆ ಹೋಗುವುದಕ್ಕೆ ಮತ್ತು ಚುನಾವಣೆಗೆ ಸ್ಪರ್ಧಿಸಲು ಅಸಾಧ್ಯವಾಗುವಂತೆ ಮಾಡಿರುವ ರಾಹುಲ್ ಗಾಂಧಿ ಅವರ ಪಕ್ಷಕ್ಕೆ ಮತ ಹಾಕಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ’ ಎನ್ನುತ್ತಾರೆ ಲಾಲು ಪರ ಅಚಲ ನಿಷ್ಠೆ ಹೊಂದಿರುವ ರಾಯ್‌.

‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿಬಿಡಿ. ಆದರೆ ಇದು ಸತ್ಯ. ಯಾದವ ಸಮುದಾಯ ಪ್ರಬಲವಾಗಿರುವ ಈ ಪ್ರದೇಶದಲ್ಲಿ ಆರ್‌ಜೆಡಿ ಮತಗಳು ಕಾಂಗ್ರೆಸ್‌ಗೆ ವರ್ಗವಾಗುವ ಸಾಧ್ಯತೆಗಳು ಬಹಳ ಕಡಿಮೆ. ಅದರಲ್ಲೂ ಲಾಲು ಸ್ಪರ್ಧಿಸದಂತೆ ಮಾಡಿರುವ ಕಾಂಗ್ರೆಸ್‌ ಬಗ್ಗೆ ಹೆಚ್ಚಿನ ಅತೃಪ್ತಿಯೇ ಇದೆ’ ಎಂದು ರಾಯ್‌ ಹೇಳುತ್ತಾರೆ.

ಕಾಂಗ್ರೆಸ್‌ಗೂ ಆರ್‌ಜೆಡಿ  ಬೆಂಬಲಿಗರ ಒಳಮನಸ್ಸು ಅರ್ಥವಾಗಿದೆ. ಆದರೆ ಪಕ್ಷ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ ಅಷ್ಟೇ. ಹಾಗಾಗಿ ಹಾಜಿಪುರದಲ್ಲಿ ಕಾಂಗ್ರೆಸ್‌ ಈಗಾಗಲೇ ಅರ್ಧ ಸೋತಂತಾಗಿದೆ. ಪಾಸ್ವಾನ್‌ ಅವರ ದೂರದ ಸಂಬಂಧಿ ಸಂಜೀವ್‌ ಪ್ರಸಾದ್‌ ಅವರನ್ನು ಕಣ­ಕ್ಕಿಳಿಸುವ ಮೂಲಕ ಹಾಜಿಪುರದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗುವಂತೆ ಕಾಂಗ್ರೆಸ್‌ ಮಾಡಿದೆ.

ಜೆಡಿಯು ಅಭ್ಯರ್ಥಿ ರಾಮ್‌ ಸುಂದರ್‌ ದಾಸ್‌ ಅವರಿಗೆ 90 ವರ್ಷ ದಾಟಿದೆ. ಆರೋಗ್ಯವೂ ಸರಿ ಇಲ್ಲ. ಹಾಲಿ ಸಂಸದರಾಗಿರುವ ಅವರು ಕ್ಷೇತ್ರಕ್ಕಾಗಿ ಏನೂ ಮಾಡಿಲ್ಲ. ಹೀಗಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಬಗ್ಗೆ ಜನರು ಒಳ್ಳೆಯ ಮಾತಾಡಿದರೂ ರಾಮ್‌ ಸುಂದರ್‌ಗೆ ಮತ ಬೀಳುವ ಸಾಧ್ಯತೆ ಕಡಿಮೆ.

‘1991ರಿಂದ 96 ಮತ್ತು 2009ರಿಂದ 2014ರ ಅವಧಿಯಲ್ಲಿ ರಾಮ್‌ ಸುಂದರ್‌ ಇಲ್ಲಿನ ಸಂಸದರು. ಅಭಿವೃದ್ಧಿ ಕೆಲಸಗಳಲ್ಲಿ ರಾಮ್‌­ಸುಂದರ್‌ ಮತ್ತು ಪಾಸ್ವಾನ್‌ ನಡುವೆ ಹೋಲಿಕೆ ಮಾಡಿದರೆ ಪಾಸ್ವಾನ್‌ ಅವರು ಎಷ್ಟೋ ಪಾಲು  ಉತ್ತಮ. ಇದಲ್ಲದೆ ಈಗ ಪಾಸ್ವಾನ್‌ ಅವರ ನೆರವಿಗೆ ಮೋದಿ ಅಲೆಯೂ ಇದೆ (ಎಲ್‌ಜೆಪಿ ಮತ್ತು ಬಿಜೆಪಿ ಇಲ್ಲಿ ಮೈತ್ರಿ ಮಾಡಿ­ಕೊಂಡಿವೆ)’ ಎಂದು ಲಾಲ್‌ಗಂಜ್‌ನ ವ್ಯಾಪಾರಿ ಪ್ರಶಾಂತ್‌ ವಾದಿಸುತ್ತಾರೆ.

84 ಕಾಂಗ್ರೆಸ್‌ಗೆ ಕೊನೆಯ ಗೆಲುವು: ಹಾಜಿಪುರ­ದಲ್ಲಿ ಕಾಂಗ್ರೆಸ್‌ ಕತೆಯೇನು? ‘50 ಮತ್ತು 60ರ ದಶಕಗಳಲ್ಲಿ ಹಾಜಿಪುರ ಕಾಂಗ್ರೆಸ್‌ ಭದ್ರಕೋಟೆ­ಯಾಗಿತ್ತು. 1971ರ ಚುನಾವಣೆ­ಯಲ್ಲಿ ಹಾಲಿ ಸಂಸದ ವಾಲ್ಮಿಕಿ ಚೌಧರಿ ಅವರನ್ನು ದಿಗ್ವಿಜಯ್‌ ನಾರಾಯಣ್‌ ಸಿಂಗ್‌ ಅಲ್ಪ ಅಂತರ­ದಿಂದ ಸೋಲಿಸಿ­ದರು. ನಂತರ 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ನಂತರದ ಒಂದು ಚುನಾವಣೆ ಹೊರತುಪಡಿಸಿದರೆ ಇಲ್ಲಿ ಕಾಂಗ್ರೆಸ್‌ ಗೆದ್ದೇ ಇಲ್ಲ’ ಎಂದು ನಿವೃತ್ತ ಪ್ರಾಧ್ಯಾಪಕ ದಾಮೋದರ್‌ ಸಿಂಗ್‌ ವಿವರಿಸುತ್ತಾರೆ.

1977ರಲ್ಲಿ ಹಾಜಿಪುರ ಮೀಸಲು ಕ್ಷೇತ್ರ­ವಾಯಿತು. ನಂತರ ಪಾಸ್ವಾನ್‌ ಇಲ್ಲಿಂದ ಏಳು ಬಾರಿ ಗೆದ್ದಿದ್ದಾರೆ. ಎರಡು ಬಾರಿ ಸೋತಿದ್ದಾರೆ. 2014ರ ಚುನಾವಣೆಯಲ್ಲಿ ಜನರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ರಾಜಕೀಯ ಶಾಸ್ತ್ರ ಬೋಧಿಸುತ್ತಿದ್ದ ಸಿಂಗ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.