ADVERTISEMENT

LS Polls 2024 | ಕ್ಷೇತ್ರ ಮಹಾತ್ಮೆ– ಉತ್ತರ ಕನ್ನಡ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 23:42 IST
Last Updated 28 ಮಾರ್ಚ್ 2024, 23:42 IST
<div class="paragraphs"><p>ಉತ್ತರ ಕನ್ನಡ</p></div>

ಉತ್ತರ ಕನ್ನಡ

   

ಹಿಂದುತ್ವದ ಉಗ್ರ ಪ್ರತಿಪಾದಕ ಅನಂತಕುಮಾರ ಹೆಗಡೆಯವರನ್ನು ಸುದೀರ್ಘ ಅವಧಿ ಸಾಕಿ ಸಲಹಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ, ಒಂದು ಕಾಲಕ್ಕೆ ಕಾಂಗ್ರೆಸ್‌ನ ಭದ್ರ ನೆಲೆ. ಹೆಗಡೆಯವರ ಹಿಂದುತ್ವವಾದಿ ರಾಜಕಾರಣ ಶುರುವಾದ ಮೇಲೆ, ಹಸ್ತ ಮುದುಡಿ ಹೋಗಿತ್ತು. ಈ ಬಾರಿ ಬೆಂಕಿಚೆಂಡಿಗೆ ಟಿಕೆಟ್ ತಪ್ಪಿಸಿದ ಬಿಜೆಪಿ ವರಿಷ್ಠರು, ಸೌಮ್ಯವಾದಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಕಣಕ್ಕೆ ಇಳಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಶಿರಸಿಯಲ್ಲಿ ಸೋತ ಕಾಗೇರಿ ಎದುರು ಖಾನಾಪುರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕೆ ದೂಡಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ–ಕಿತ್ತೂರು ಉತ್ತರ ಕನ್ನಡಕ್ಕೆ ಸೇರಿದೆ ಎಂಬುದನ್ನು ಬಿಟ್ಟರೆ, ಅಂಜಲಿಯವರಿಗೆ ಕ್ಷೇತ್ರವೇ ಹೊಸದು. ಟಿಕೆಟ್ ಸಿಗುವ ನಿರೀಕ್ಷೆಯಲ್ಲಿಯೇ, ಸಂವಿಧಾನ ಬದಲಾವಣೆಯ ಮಾತನಾಡುತ್ತ ಬಂದಿದ್ದ ಅನಂತಕುಮಾರ ಹೆಗಡೆಯವರನ್ನು ಕೇಸರಿ ಪಡೆ ಕೈಬಿಟ್ಟಿದ್ದು, ಅವರು ಮರೆಗೆ ಸರಿದಿದ್ದಾರೆ. ಹೆಗಡೆಯವರ ಪ್ರಭಾವವೇ ತನ್ನನ್ನೂ ಕ್ಷೇತ್ರಕ್ಕೆ ‘ಹೆಗಡೆ’ಯಾಗಿಸಲಿದೆ ಎಂಬ ಭರವಸೆಯಲ್ಲಿದ್ದ ಕಾಗೇರಿಗೆ, ಈಗ ‘ಅನಂತ’ ದೂರವಾಗಿದ್ದಾರೆ. ಬಿಜೆಪಿಯ ಸಾಂಪ್ರದಾಯಿಕ ಮತ, ಹವ್ಯಕ ಸಮುದಾಯ ಮತಗಳೇ ಕಾಗೇರಿಗೆ ಆಧಾರ.

ADVERTISEMENT

ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದು, ಬಿಜೆಪಿಯಿಂದ ಗೆದ್ದಿದ್ದ ಶಿವರಾಮ ಹೆಬ್ಬಾರ್‌, ಕಮಲ ಬಿಟ್ಟು ‘ಕೈ’ ಚಾಚಿದ್ದಾರೆ. ಅದೇ ಧೈರ್ಯದ ಮೇಲೆ ‘ನಾನೇ ಅಂಜಲಿ, ನಾನ್ಯಾರಿಗೆ ಅಂಜಲಿ’ ಎಂದು ನಿಂಬಾಳ್ಕರ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಶಾಸಕರು, ಗ್ಯಾರಂಟಿಗಳು ಕೈಹಿಡಿದರೆ ಅಂಜಲಿಗೆ ದೆಹಲಿ. ಹಿಂದುತ್ವವೇ ನಿರ್ಣಾಯಕವಾದರೆ ಲೋಕಸಭೆಗೆ ಕಾಗೇರಿ ಸವಾರಿ... ಉತ್ತರ ಕನ್ನಡ ಯಾರಿಗೆ ಹತ್ತಿರ ಎಂಬುದು ಮತರಹಸ್ಯವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.