ADVERTISEMENT

ಮತ ಎಣಿಕೆ ಕೇಂದ್ರ ಪರಿಶೀಲನೆ

ಜಿಲ್ಲಾ ಚುನಾವಣಾಧಿಕಾರಿ, ಎಸ್‌ಪಿ, ಪೊಲೀಸ್‌ ವೀಕ್ಷಕರ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 13:20 IST
Last Updated 13 ಏಪ್ರಿಲ್ 2019, 13:20 IST

ಕೊಪ್ಪಳ:ಲೋಕಸಭಾ ಕ್ಷೇತ್ರದ ಚುನಾವಣೆಯು ಏ.23ರಂದು ನಡೆಯಲಿದ್ದು ಮತ ಎಣಿಕೆಯು ಮೇ 23ರಂದು ನಡೆಯಲಿದೆ. ಮತ ಎಣಿಕೆಗೆ ಬೇಕಾದ ಸಿದ್ಧತೆಗೆ ಸಂಬಂಧಿಸಿದಂತೆ (ಏ.13) ಎಣಿಕೆ ಕೇಂದ್ರದ ಪರಿಶೀಲನೆಯನ್ನು ಚುನಾವಣಾ ಸಾಮಾನ್ಯ ವೀಕ್ಷಕರಾದ ರಣ ವಿಜಯ ಯಾದವ್ ಸೇರಿದಂತೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ.ಸುಕುಮಾರ್ ಜಂಟಿಯಾಗಿ ಪರಿಶೀಲನೆ ನಡೆಸಿದರು.

ಮತ ಎಣಿಕೆಯನ್ನು ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಮತ ಎಣಿಕೆಗೆ ಬೇಕಾದ ಕೊಠಡಿಗಳು, ಭದ್ರತಾ ಕೊಠಡಿಗಳು ಅಗತ್ಯವಿದ್ದು ಪರಿಶೀಲನೆ ನಡೆಸಲಾಯಿತು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಕ್ಷೇತ್ರ ಹಾಗೂ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದೆ. ಈ ಎಲ್ಲ ಕ್ಷೇತ್ರಗಳ ಮತ ಎಣಿಕೆಯು ಕೊಪ್ಪಳದಲ್ಲಿಯೇ ನಡೆಯಲಿದೆ.

ಭದ್ರತಾ ದೃಷ್ಟಿಯಿಂದ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಪರಿಶೀಲಿಸಲಾಯಿತು. ಎಣಿಕೆ ಮುಕ್ತಾಯವಾಗುವವರೆಗೂ ಕೇಂದ್ರದ ಹಾಗೂ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ. ಕೇಂದ್ರ ಅರೆ ಸೇನಾಪಡೆ ಇದರ ಸಂಪೂರ್ಣ ಭದ್ರತಾ ವ್ಯವಸ್ಥೆ ನೋಡಿಕೊಳ್ಳಲಿದೆ.

ADVERTISEMENT

ಕ್ಷೇತ್ರ ವ್ಯಾಪ್ತಿಯಲ್ಲಿ 2033 ಮತಗಟ್ಟೆಗಳಿದ್ದು ಇದರಲ್ಲಿ ಸಿಂಧನೂರು 269, ಮಸ್ಕಿ 231, ಕುಷ್ಟಗಿ 272, ಕನಕಗಿರಿ 261, ಗಂಗಾವತಿ 233, ಯಲಬುರ್ಗಾ 253, ಕೊಪ್ಪಳ 288, ಸಿರುಗುಪ್ಪ 226 ಮತಗಟ್ಟೆಗಳನ್ನು ಹೊಂದಿದ್ದು ಅಗತ್ಯವಿರುವ ಕೊಠಡಿಗಳು ಹಾಗೂ ಭದ್ರತಾ ಕೊಠಡಿವೀಕ್ಷಿಸಲಾಯಿತು.ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವಿನ್ಯಾಸದೊಂದಿಗೆ ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಿದರು.

ಹೆಚ್ಚುವರಿಜಿಲ್ಲಾಧಿಕಾರಿ ಬಾಲಚಂದ್ರ, ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್, ಜೆಸ್ಕಾಂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.