ADVERTISEMENT

ಬಳ್ಳಾರಿ: ನಗರ, ಗ್ರಾಮೀಣದಲ್ಲಿ ಪ್ರಚಾರದ ಬಿರುಸು

ಕಾಂಗ್ರೆಸ್‌ಗೆ ಡಿ.ಕೆ.ಶಿವಕುಮಾರ್‌, ಬಿಜೆಪಿಗೆ ಜಗದೀಶ್‌ಶೆಟ್ಟರ್ ನೇತೃತ್ವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 11:10 IST
Last Updated 8 ಏಪ್ರಿಲ್ 2019, 11:10 IST
ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಿ.ನಾಗೇಂದ್ರ ಮಾತನಾಡಿದರು.
ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಿ.ನಾಗೇಂದ್ರ ಮಾತನಾಡಿದರು.   

ಬಳ್ಳಾರಿ: ಯುಗಾದಿ ಹಬ್ಬದ ವರ್ಷತೊಡಕು ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಚಾರದ ಬಿರುಸು ತೀವ್ರಗೊಂಡಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ, ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರದ ಕೆಲವು ಪ್ರಮುಖ ಗ್ರಾಮಗಳಲ್ಲಿ ಬೆಳಿಗ್ಗೆಯಿಂದಲೇ ಎರಡೂ ಪಕ್ಷಗಳ ಮುಖಂಡರು ಪ್ರಚಾರ ನಡೆಸಿದರು.

ಬಿಜೆಪಿಯಲ್ಲಿ ಚುನಾವಣಾ ಉಸ್ತುವಾರಿ ಜಗದೀಶ ಶೆಟ್ಟರ್ ಹಾಗೂ ಕಾಂಗ್ರೆಸ್‌ನಲ್ಲಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರಚಾರದ ನೇತೃತ್ವ ವಹಿಸಿ ಗಮನ ಸೆಳೆದರು.

ಜಿಲ್ಲೆಯ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಮರಿಯಮ್ಮನಹಳ್ಳಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ನಡೆಯಿತು. ಸಚಿವರು ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ADVERTISEMENT

ಬಿಜೆಪಿ : ಅಭ್ಯರ್ಥಿ ವೈ.ದೇವೇಂದ್ರಪ್ಪ ಜೊತೆಗೆ ತಾಲ್ಲೂಕಿನ ಸಂಗನಕಲ್ಲು ಗ್ರಾಮದಿಂದ ಪ್ರಚಾರ ಆರಂಭಿಸಿದ ಬಿಜೆಪಿ ಚುನಾವಣಾ ಉಸ್ತುವಾರಿ ಜಗದೀಶ ಶೆಟ್ಟರ್, ನಂತರ ಸಿರಿವಾರ, ವಣೇನೂರಿನಲ್ಲೂ ಸಂಚರಿಸಿ ಮತಯಾಚಿಸಿದರು. ಮಧ್ಯಾಹ್ನ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದರು. ಸಂಜೆ ನಗರದಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಮಾಜಿ ಸಂಸದರೊಂದಿಗೆ ಸಭೆ ನಡೆಸಿದರು.

ನಂತರ, ಪಕ್ಷದಿಂದ ಆಯ್ಕೆಯಾಗಿರುವ ಆಯ್ದ ಜನಪ್ರತಿನಿಧಿಗಳೊಂದಿಗೂ ಅವರು ಚರ್ಚಿಸಿ, ಅವರವರ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಗಮನ ಸೆಳೆದರು.

ಏ.9ರಂದು ಕಾಂಗ್ರೆಸ್‌ ಪ್ರಚಾರ: ಏ.9ರಂದು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ , ಗ್ರಾಮೀಣ ಕ್ಷೇತ್ರದ ರೂಪನಗುಡಿ, ಸಂಗನಕಲ್ಲು, ಮೋಕಾದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ನಗರದ ರಾಯಲ್‌ಫೋರ್ಟ್‌ನಲ್ಲಿ ರಾತ್ರಿ 7.30ಕ್ಕೆ, ರಾತ್ರಿ 9 ಗಂಟೆಗೆ ಕೌಲ್‌ಬಜಾರ್‌ನ ಟಿ.ಎಸ್‌.ಆರ್‌.ಫಂಕ್ಷನ್‌ ಹಾಲ್‌ನಲ್ಲೂ ಸಮಾವೇಶ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.