ADVERTISEMENT

ರಾಜ್ಯ ಸಭೆ ಮೊದಲ ಉಪಾಧ್ಯಕ್ಷೆ ವಯಲೆಟ್‌ ಆಳ್ವಾ

ಜಿ.ಬಿ.ಹರೀಶ
Published 7 ಏಪ್ರಿಲ್ 2014, 19:30 IST
Last Updated 7 ಏಪ್ರಿಲ್ 2014, 19:30 IST
ರಾಜ್ಯ ಸಭೆ ಮೊದಲ ಉಪಾಧ್ಯಕ್ಷೆ ವಯಲೆಟ್‌ ಆಳ್ವಾ
ರಾಜ್ಯ ಸಭೆ ಮೊದಲ ಉಪಾಧ್ಯಕ್ಷೆ ವಯಲೆಟ್‌ ಆಳ್ವಾ   

ರಾಜ್ಯ ಸಭೆಯ ಮೊದಲ ಉಪಾಧ್ಯಕ್ಷೆಯಾಗಿದ್ದ ವಯಲೆಟ್ ಆಳ್ವಾ, ಸಕ್ರಿಯ ಸಂಸದೆ­ಯಾಗಿ ಮೊದಲ ಲೋಕಸಭೆ­ಯಲ್ಲಿ ಭಾಗವಹಿಸಿ­ದವರು. ಹೈಕೋರ್ಟಿನ ಪೂರ್ಣ ಪೀಠದ ಮುಂದೆ ಕೇಸನ್ನು ವಾದಿಸಿದ ಮೊದಲ ಮಹಿಳಾ ವಕೀಲೆ ಎಂಬ ಹೆಗ್ಗಳಿಕೆ ಇವರದು. 1952ರಲ್ಲಿ ಇವರು ಅಖಿಲ ಭಾರತ ವೃತ್ತ ಪತ್ರಿಕೆಗಳ ಸಂಪಾದಕರ ಸ್ಥಾಯಿ ಸಮಿತಿಗೆ ಆಯ್ಕೆ­ಯಾಗಿದ್ದ ಮೊದಲ ಮಹಿಳೆ. ಕ್ರೈಸ್ತ ಸಮುದಾಯದಿಂದ ಬಂದ ಇವರು ಮಹಿಳೆಯರ ಹಿತಾಸಕ್ತಿ ಕುರಿತು ವಿಶೇಷ ಕಾಳಜಿ ಹೊಂದಿದ್ದರು.

1908ರಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತ ಕುಟುಂಬದಲ್ಲಿ ಜನಿಸಿದ ಆಳ್ವಾ, ಮುಂಬೈನ ಸೈಂಟ್ ಝೇವಿಯರ್ಸ್ ಕಾಲೇಜು ಮತ್ತು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಕಾನೂನು ವ್ಯಾಸಂಗದ ವೇಳೆ ಪರಿಚಯ­ವಾದ ಕ್ಯಾಥೋಲಿಕ್‌ರಾದ ಜೋಕಿಂ ಆಳ್ವಾ ಅವ­ರನ್ನು ವರಿಸಿದರು. ಸಮಾಜ ಕಾರ್ಯ, ಪತ್ರಿಕೋ­­ದ್ಯಮ, ಸ್ವಾತಂತ್ರ್ಯ ಸಮರ­ದಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಭಾಗ­ವಹಿಸಿದರು. 1942ರ ಚಳವಳಿ­ಯಲ್ಲಿ ವಯಲೆಟ್ ಅವರು ಪುಟಾಣಿ ಮಗುವಿನ ಸಮೇತ ಜೈಲಿನಲ್ಲಿದ್ದರು. 1944ರಲ್ಲಿ ‘ದಿ ಬೇಗಂ’ ಎಂಬ ಮಹಿಳಾ ಪತ್ರಿಕೆ ಆರಂಭಿಸಿ ಬಳಿಕ ಅದನ್ನು ‘ಇಂಡಿಯನ್ ವುಮೆನ್’ ಎಂದು ಬದ­ಲಾಯಿಸಿ­ದರು. 1952ರಲ್ಲಿ ವಯಲೆಟ್ ರಾಜ್ಯ ಸಭೆಗೆ, ಜೋಕಿಂ ಅವರು ಲೋಕಸಭೆಗೆ ಅಂದಿನ ಮುಂಬೈ ಪ್ರಾಂತ­ದಿಂದ ಚುನಾಯಿತ­ರಾದರು. ಪತಿ–ಪತ್ನಿ ಇಬ್ಬರು ಸಂಸತ್ತಿಗೆ ಆಯ್ಕೆಯಾದ ಮೊದಲ ಅಪೂರ್ವ ಘಟನೆ ಇದು.

ಕೇಂದ್ರ ಗೃಹಖಾತೆಯ ಉಪ­ಮಂತ್ರಿ­ಯಾಗಿ ನೆಹರೂ ಅವರ ಸಂಪುಟದಲ್ಲಿ ಕೆಲಸ ಮಾಡಿ­ದ ವಯಲೆಟ್, ಎರಡು ಸಲ ರಾಜ್ಯ ಸಭೆಯ ಉಪ­ಸಭಾಧ್ಯಕ್ಷೆ 1962–66, 1966–69ರಲ್ಲಿ ಸೇವೆ ಸಲ್ಲಿಸಿದರು. ಮಾರ್ಗರೇಟ್ ಆಳ್ವಾ ಇವರ ಮಗಳು.

ಸಂಸತ್ತಿನಲ್ಲಿದ್ದ ಮೊದಲ ಜೋಡಿ ಇವರಾದ್ದರಿಂದ ವಯಲೆಟ್ ಮತ್ತು ಜೋಕಿಂ ಅವರ ಭಾವಚಿತ್ರವನ್ನು 2007ರಲ್ಲಿ ಸಂಸತ್ತಿನಲ್ಲಿ ಅನಾವರಣ ಮಾಡಿ ಈ ದಂಪತಿ ಜೋಡಿಗೆ ಗೌರವ ತೋರಿಸಲಾಯಿತು. ಅವರಿಬ್ಬರ ನೆನಪಿನಲ್ಲಿ 2008ರಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು. ಅದು ವಯಲೆಟ್ ಅವರ ಜನ್ಮಶತಮಾ­ನೋತ್ಸವದ ವರ್ಷವೂ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.