ADVERTISEMENT

ಹರಿ ವಿಷ್ಣು ಕಾಮತ್

ಜಿ.ಬಿ.ಹರೀಶ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ಹಿರಿಯ ಲೋಕಸಭಾ ಸದಸ್ಯ, ಮಧ್ಯ ಪ್ರದೇಶದ ಜನಪ್ರಿಯ ಸಂಸದರು. ಪೂರ್ಣ ಹೆಸರು ಹರಿ ವಿಷ್ಣು ಕಾಮತ್. 1907ರಲ್ಲಿ ಮಂಗಳೂರಿನಲ್ಲಿ ಜನಿಸಿದ ಇವರು ಮಂಗಳೂರಿನ ಕೆನರಾ ಹೈಸ್ಕೂಲ್‌ ಮತ್ತು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಬಳಿಕ ಮದರಾಸಿನ ಪ್ರೆಸಿ­ಡೆನ್ಸಿ ಕಾಲೇಜಿನಲ್ಲಿ ಅಧ್ಯ­­ಯನ ಮಾಡಿ­ದರು.

ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆ­ದರು. 1930ರಲ್ಲಿ  ಇಂಡಿಯನ್ ಸಿವಿಲ್ ಸರ್ವಿಸ್ (ಐ.ಸಿ.ಎಸ್.) ಸೇರಿದ ಕಾಮತ್, 1938ರಲ್ಲಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಸ್ವಾತಂತ್ರ್ಯ ಚಳವಳಿ ಸೇರಿ­­ದರು. ಐಸಿಎಸ್ ಅಧಿಕಾರಿಯಾಗಿದ್ದಾಗ ಅವರು ಜಬ್ಬಲ್‌­ಪುರದ ಜಿಲ್ಲಾ ನ್ಯಾಯಾ­ಧಿಶರಾಗಿದ್ದರು. ಕಾಂಗ್ರೆಸ್, ಫಾರ್ವರ್ಡ್ ಬ್ಲಾಕ್, ಪ್ರಜಾ ಸೋಷಿಯ­ಲಿಸ್ಟ್ ಪಕ್ಷ (ಪಿಎಸ್‌ಪಿ) ಮತ್ತು ಸಮಾಜ­ವಾದಿ ಪಕ್ಷದಲ್ಲಿ ಕೆಲಸ ಮಾಡಿ­ದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಆರಂ­ಭಿಸಿ ಅವರೇ ಅಧ್ಯಕ್ಷರಾಗಿದ್ದ ಫಾರ್ವರ್ಡ್ ಬ್ಲಾಕ್ ಸೇರಿದರು. ಅದರ ಪ್ರಧಾನ ಕಾರ್ಯ­ದರ್ಶಿಯಾದರು. ಕಾಮತ್ ಅವರು ಸಂವಿಧಾನ ಸಭೆಯ ಸದಸ್ಯರಾಗಿ­ದ್ದರು (1946–49). ಮೊದಲನೇ, ಮೂರನೇ ಮತ್ತು ಆರನೇ ಲೋಕಸಭೆಗೆ ಆಯ್ಕೆ­ಯಾದ ಇವರು ಉತ್ತಮ ಸಂಸತ್ ಪಟು ಎಂದು ಪ್ರಶಂಸೆಗೆ ಪಾತ್ರರಾಗಿದ್ದರು.

ಸಂವಿಧಾನ ಸಭೆಯಲ್ಲಿ ಮಾತನಾಡುತ್ತ ಅವರು ಗಾಂಧೀಜಿ ಮತ್ತು ಇತರರ ಭಾರತದ ಕನಸನ್ನು ಸಾಧುನಾಂ ರಾಜ್ಯಂ ಅಥವಾ ದೇವರ ರಾಜ್ಯ ಎಂದು ಹೆಸರಿ­ಸದೆ ‘ಪಂಚಾಯತ್ ರಾಜ್ಯ’ ಎಂದು ಕರೆದದ್ದು ಇವರ ವೈಶಿಷ್ಟ್ಯ. ಕಾನೂನಿಗೆ ಸಂಬಂ­ಧಿ­ಸಿದ ಅನೇಕ ಚರ್ಚೆಗಳಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿದ್ದರು.

ಇಂಗ್ಲಿಷ್ ಸಾಹಿತ್ಯ, ಸಂಸ್ಕೃತ, ಯೋಗದಲ್ಲಿ ವಿಶೇಷ ಆಸಕ್ತಿ ಇದ್ದ ಅವರು ‘Communist China Colonizes Tibet, Invades India’ ಮತ್ತು ‘Principles and Techniques of Administration’ ಎಂಬ ಗ್ರಂಥಗಳನ್ನು ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.