ADVERTISEMENT

ಕೋಲಾರ ಲೋಕಸಭಾ ಕ್ಷೇತ್ರ | ಗೆದ್ದ ಕ್ಷೇತ್ರವನ್ನೇ ತ್ಯಾಗ ಮಾಡಿದ ಬಿಜೆಪಿ!

ಕೋಲಾರ ಕ್ಷೇತ್ರದಿಂದ ಜೆಡಿಎಸ್‌ ಸ್ಪರ್ಧೆ–ಕೊನೆಗೂ ಪ್ರಯತ್ನ ಕೈಚೆಲ್ಲಿದ ಹಾಲಿ ಸಂಸದ ಮುನಿಸ್ವಾಮಿ

ಕೆ.ಓಂಕಾರ ಮೂರ್ತಿ
Published 24 ಮಾರ್ಚ್ 2024, 7:23 IST
Last Updated 24 ಮಾರ್ಚ್ 2024, 7:23 IST
ಎಸ್‌.ಮುನಿಸ್ವಾಮಿ
ಎಸ್‌.ಮುನಿಸ್ವಾಮಿ   

ಕೋಲಾರ: ಕೋಲಾರ ಮೀಸಲು ಕ್ಷೇತ್ರವನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದ ಬಿಜೆಪಿಯು ಕೊನೆಗೂ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟಿದೆ. 

ಆ ಮೂಲಕ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬಹಿರಂಗ ಅಸಮಾಧಾನದ ನಂತರ ಮೈತ್ರಿ ಧರ್ಮಪಾಲನೆ ಮಾಡಲು ಮುಂದಾಗಿದೆ. ಬೆಜೆಪಿ ಹಾಲಿ ಸಂಸದರಿದ್ದ ಕ್ಷೇತ್ರವನ್ನು ಜೆಡಿಎಸ್‌ಗೆ ತ್ಯಾಗ ಮಾಡಿದೆ. 2019ರ ಚುನಾವಣೆಯಲ್ಲಿ ಗೆದ್ದು ಸಂಸದರಾಗಿರುವ ಸಂಸದ ಮುನಿಸ್ವಾಮಿ ಕೂಡ ತಮ್ಮ ಪ್ರಯತ್ನ ಕೈಚೆಲ್ಲಿದ್ದಾರೆ.

ಬಿಜೆಪಿಯು ರಾಜ್ಯದಲ್ಲಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಳೆದ ಬಾರಿ ಬಿಜೆಪಿ ಗೆದ್ದಿದ್ದ ಏಕೈಕ ಕ್ಷೇತ್ರ ಇದಾಗಿದೆ. ಜೆಡಿಎಸ್‌ಗೆ ಟಿಕೆಟ್‌ ಲಭಿಸಿರುವ ಇನ್ನೆರಡು ಕ್ಷೇತ್ರಗಳಾದ ಮಂಡ್ಯದಲ್ಲಿ ಪಕ್ಷೇತರ ಸಂಸದೆ ಇದ್ದರೆ, ಹಾಸನದಲ್ಲಿ ಜೆಡಿಎಸ್‌ ಸಂಸದ ಇದ್ದಾರೆ.

ADVERTISEMENT

ಮುನಿಸ್ವಾಮಿ ಎರಡು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸೇರಿದಂತೆ ಹಲವು ಮುಖಂಡರನ್ನು ಭೇಟಿಯಾಗಿದ್ದಾರೆ. 

ಗೃಹ ಸಚಿವ ಅಮಿತ್‌ ಶಾ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅಷ್ಟರಲ್ಲಿ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರವಾಲ್‌ ಕೋಲಾರ ಕ್ಷೇತ್ರ ಜೆಡಿಎಸ್‌ಗೆ ಎಂದು ಪ್ರಕಟಿಸಿದ್ದಾರೆ.

ಪರಿಶಿಷ್ಟರ ಬಳಿಕ ಒಕ್ಕಲಿಗ ಸಮುದಾಯದವರು ಈ ಕ್ಷೇತ್ರದಲ್ಲಿ ಹೆಚ್ಚಿರುವ ಕಾರಣ ಜೆಡಿಎಸ್‌ ಹಕ್ಕೊತ್ತಾಯ ಮಂಡಿಸಿತ್ತು. ಅಲ್ಲದೇ, 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್‌ ಒಟ್ಟು 4.71 ಲಕ್ಷ ಮತ ಪಡೆದು, ಮೂರು ಕ್ಷೇತ್ರ ಗೆದ್ದುಕೊಂಡಿತ್ತು. ಇತ್ತ ಬಿಜೆಪಿ, ಐದು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಶೂನ್ಯ ಸಾಧನೆ ಮಾಡಿ ಕೇವಲ 1.94 ಲಕ್ಷ ಮತ ಪಡೆದಿತ್ತು. ಐದು ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಒಟ್ಟು 5.80 ಲಕ್ಷ ಮತ ಗಳಿಸಿತ್ತು.

ಆದರೆ, ಈ ಭಾಗದಲ್ಲಿ ಟಿಕೆಟ್‌ ಕೈತಪ್ಪಿದರೆ ಬಿಜೆಪಿ ಸಂಘಟನೆಗೆ ಹೊಡೆತ ಬೀಳಲಿದೆ ಎಂದು ಸ್ಥಳೀಯ ಮುಖಂಡರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಾ ಜೆಡಿಎಸ್‌ ಟಿಕೆಟ್‌ ಯತ್ನಕ್ಕೆ ಅಡ್ಡಿಪಡಿಸುತ್ತಿದ್ದರು.

ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್‌, ಬಂಗಾರಪೇಟೆ, ಕೋಲಾರ, ಮಾಲೂರು ಅಲ್ಲದೇ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು (ಒಟ್ಟು 8) ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಸೇರಿವೆ.

ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಈಗಾಗಲೇ ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಶಾಸಕ ಸಮೃದ್ಧಿ ಮಂಜುನಾಥ್‌, ಬಂಗಾರಪೇಟೆ ಪರಾಜಿತ ಅಭ್ಯರ್ಥಿ ಮಲ್ಲೇಶಬಾಬು ಹಾಗೂ ದೇವನಹಳ್ಳಿ ಪರಾಜಿತ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಸಮೀಕ್ಷೆ ಕೂಡ ನಡೆಸಿದೆ. ಆದರೆ, ಹೆಸರನ್ನೂ ಅಂತಿಮಗೊಳಿಸಿಲ್ಲ. ಕುಮಾರಸ್ವಾಮಿ ಚೆನ್ನೈನ ಆಸ್ಪತ್ರೆಯಿಂದ ಬೆಂಗಳೂರಿಗೆ ಬಂದ ಮೇಲಷ್ಟೇ ಜೆಡಿಎಸ್‌ ಅಭ್ಯರ್ಥಿ ಯಾರೆಂದು ಘೋಷಣೆ ಆಗಲಿದೆ.

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ಅವರ ಸತತ ಏಳು ಬಾರಿಯ ಗೆಲುವಿನ ನಾಗಾಲೋಟವನ್ನು ಮುನಿಸ್ವಾಮಿ ಮೊದಲ ಯತ್ನದಲ್ಲೇ ತಡೆದಿದ್ದರು. ಅವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಮುನಿಯಪ್ಪ ವಿರುದ್ಧ ಭರ್ಜರಿ ಜಯ ಗಳಿಸಿದ್ದರು. ಅವರು 7.08 ಲಕ್ಷ ಮತ ಪಡೆದಿದ್ದರೆ, ಮುನಿಯಪ್ಪ 4.98 ಲಕ್ಷ ಮತ ಗಳಿಸಿದ್ದರು.

ಮುನಿಯಪ್ಪ ಪರಿಶಿಷ್ಟ ಜಾತಿಯ ಎಲಗೈ ಸಮುದಾಯದವರಾದರೆ, ಮುನಿಸ್ವಾಮಿ ಬಲಗೈ ಸಮುದಾಯದವರು.

ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಮುನಿಸ್ವಾಮಿ ಅಮಿತ್‌ ಶಾ, ನಡ್ಡಾ, ದೇವೇಗೌಡರನ್ನು ಭೇಟಿ ಮಾಡಿದ ಸಂಸದ ಕ್ಷೇತ್ರದಲ್ಲಿ 2019ರಲ್ಲಿ ಮೊದಲ ಬಾರಿ ಗೆದ್ದಿದ್ದ ಬಿಜೆಪಿ

ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಯಾರೇ ಅಭ್ಯರ್ಥಿ ಆದರೂ ಅವರಿಗಿಂತ ಹೆಚ್ಚು ಕೆಲಸ ಮಾಡಿ ಗೆಲ್ಲಿಸಿಕೊಡುತ್ತೇನೆ. ನನಗೆ ಬೇರೆ ಸ್ಥಾನಮಾನ ನೀಡುವುದು
ಪಕ್ಷಕ್ಕೆ ಬಿಟ್ಟ ವಿಚಾರ ಎಸ್‌.ಮುನಿಸ್ವಾಮಿ ಬಿಜೆಪಿ ಸಂಸದ ಕೋಲಾರ ಕ್ಷೇತ್ರ

‘ಸ್ವತಂತ್ರ ಸ್ಪರ್ಧೆ ಇಲ್ಲವೇ ಇಲ್ಲ’ ‘ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಬೆಂಬಲಿಗರು ಪಕ್ಷದ ಕಾರ್ಯಕರ್ತರು ನಾನಾ ರೀತಿಯಲ್ಲಿ ನನ್ನ ಮೇಲೆ ಒತ್ತಡ ಹೇರಿದ್ದಾರೆ. ಅವರನ್ನು ಸಮಾಧಾನಪಡಿಸುವ ಕೆಲಸ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಸ್ವತಂತ್ರವಾಗಿ ಸ್ಪರ್ಧೆ ಮಾಡಲ್ಲ ಮೈತ್ರಿ ಧರ್ಮ ಪಾಲಿಸುತ್ತೇನೆ’ ಎಂದು ಮುನಿಸ್ವಾಮಿ ತಿಳಿಸಿದರು. ‘ಪಕ್ಷದ ಹಿತದೃಷ್ಟಿ ಮುಖ್ಯ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು. ದೇಶದ ಒಳಿತಿಗಾಗಿ ಮೋದಿ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತಿದ್ದೇನೆ. ಈಗಾಗಲೇ ಅಮಿತ್‌ ಶಾ ಹಾಗೂ ಜೆ.ಪಿ.ನಡ್ಡಾ ಜೊತೆ ಮಾತನಾಡಿದ್ದೇನೆ ಕೋಲಾರ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ನನ್ನಂಥ ನಿಷ್ಠಾವಂತ ಕಾರ್ಯಕರ್ತನನ್ನು ಪಕ್ಷ ಕೈಬಿಡಲ್ಲ’ ಎಂದರು.

ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧೆಗೆ ಪ್ರಯತ್ನ? ಕೋಲಾರ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟಿದ್ದರೂ ಆ ಪಕ್ಷದಲ್ಲಿ ಅಭ್ಯರ್ಥಿ ಯಾರು ಎಂಬುದನ್ನು ಜೆಡಿಎಸ್‌ ಇನ್ನೂ ತೀರ್ಮಾನಿಸಿಲ್ಲ. ಹೀಗಾಗಿ ಕೊನೆಯ ಪ್ರಯತ್ನ ಎಂಬಂತೆ ಮುನಿಸ್ವಾಮಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕ್ಷೇತ್ರ ಕೈತಪ್ಪಿದ್ದರಿಂದ ಜೆಡಿಎಸ್‌ ಚಿಹ್ನೆಯಡಿಯಾದರೂ ಸ್ಪರ್ಧೆ ಮಾಡುವ ಪ್ರಯತ್ನ ಮುಂದುವರಿಸಿರುವುದು ಗೊತ್ತಾಗಿದೆ. ‘ಆ ರೀತಿ ಆಲೋಚನೆ ನನಗಿಲ್ಲ. ನಾನೀಗ ಬಿಜೆಪಿ ಸಂಸದ. ಹೀಗಾಗಿ ಪಕ್ಷದ ತೀರ್ಮಾನಕ್ಕೆ ಬದ್ಧ’ ಎಂದಷ್ಟೇ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.