ADVERTISEMENT

ಎಲ್ಲ ಪಕ್ಷಗಳಲ್ಲೂ ಮಹಿಳೆಯರ ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ನವದೆಹಲಿ(ಪಿಟಿಐ): ಈ ಬಾರಿಯ ಲೋಕಸಭೆ ಚುನಾವಣೆ­ಯಲ್ಲಿ ಹಲವು ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಮತ್ತು ಎಎಪಿ ಸೇರಿ ಇತರ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ನೀಡಿದ್ದರೂ ಒಟ್ಟು ಟಿಕೆಟ್‌ ಹಂಚಿಕೆಯಲ್ಲಿ ಮಹಿಳೆಯರ ಪ್ರಮಾಣ ಶೇ 12 ದಾಟಿಲ್ಲ.

ಕಾಂಗ್ರೆಸ್‌, ಬಿಜೆಪಿ ಮತ್ತು ಎಎಪಿಯಿಂದ ಟಿಕೆಟ್‌ ನೀಡಿರುವ 1,250 ಅಭ್ಯರ್ಥಿಗಳಲ್ಲಿ 133 ಮಹಿಳೆಯರು ಸೇರಿದ್ದಾರೆ.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳಾ ಮತದಾರರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕೆಂಬ ಕನಸು ದೂರವೇ ಉಳಿದಿದೆ ಎಂಬುದನ್ನು ಈ ಅಂಕಿ ಅಂಶಗಳು ದೃಢಪಡಿಸುತ್ತವೆ.

ಇಲ್ಲಿಯವರೆಗೆ ಸುಮಾರು 400 ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ಶೇ 9ಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ  ಮಹಿಳೆಯರಿಗೆ ಟಿಕೆಟ್‌ ನೀಡಿದೆ. ಎಎಪಿ 50 ಮಹಿಳೆಯರನ್ನು ಕಣಕ್ಕಿಳಿಸಿದ್ದು, ಇದರ ಪ್ರಮಾಣ ಶೇ 12ಕ್ಕಿಂತ ಸ್ವಲ್ಪ ಹೆಚ್ಚು. ಕಾಂಗ್ರೆಸ್‌ ಟಿಕೆಟ್‌ ಪಡೆದಿರುವ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ 12ಕ್ಕಿಂತ ಸ್ವಲ್ಪ ಕಡಿಮೆ. ಇಲ್ಲಿಯವರೆಗೆ ಕಾಂಗ್ರೆಸ್‌ 400 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

15ನೇ ಲೋಕಸಭೆಯಲ್ಲಿ ಕೇವಲ 58 ಮಹಿಳೆಯರಿದ್ದರು (ಪ್ರಮಾಣ ಶೇ 10.64). ಸ್ವಾತಂತ್ರ್ಯೋತ್ತರ ಭಾರತದಲ್ಲಿ 2009ರಲ್ಲಿ ಮಾತ್ರ ಸಂಸತ್ತಿಗೆ 50ಕ್ಕಿಂತ ಹೆಚ್ಚು ಮಹಿಳೆಯರು ಆಯ್ಕೆಯಾಗಿದ್ದರು.

13ನೇ ಲೋಕಸಭೆಗೆ 49 ಮಹಿಳೆಯರು ಆಯ್ಕೆಯಾಗುವ ಮೂಲಕ 50ರ ಹತ್ತಿರ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.