ADVERTISEMENT

ಗುಸುಗುಸು | ಮದ್ಯಮಾಲೀಕರ ಸಭೆಯಲ್ಲಿ ‘ಸಂಧಾನ’ ಭಗ್ನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 22:57 IST
Last Updated 21 ಮಾರ್ಚ್ 2024, 22:57 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಮುನಿಸಿಕೊಂಡ ಬಿಜೆಪಿಯ ಮಾಜಿ ಶಾಸಕ ನೆಹರು ಓಲೇಕಾರ ಅವರೊಂದಿಗೆ ಮದ್ಯ ಮಾಲೀಕರ ಸಭೆಯಲ್ಲಿ ‘ಚಿಯರ್ಸ್‌’ ಹೇಳಲು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದರು. ಕೆಲ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ‘ಸಂಧಾನದ’ ಕನಸು ಭಗ್ನಗೊಂಡಿತು ಎಂಬುದು ಹಾವೇರಿಯಲ್ಲಿ ಹರಿದಾಡುತ್ತಿರುವ ಗುಸುಗುಸು. 

ಹಾವೇರಿಯಲ್ಲಿರುವ ನೆಹರು ಓಲೇಕಾರ ಅವರ ಮನೆಯ ಕೂಗಳತೆ ದೂರದಲ್ಲೇ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳ ಜೊತೆ ಬಸವರಾಜ ಬೊಮ್ಮಾಯಿ ಗುರುವಾರ ಸಭೆ ನಡೆಸಿದರು. ಇದೆ ಸಭೆಯಲ್ಲೇ ಬೊಮ್ಮಾಯಿ ಮತ್ತು ಓಲೇಕಾರ ಅವರನ್ನು ಒಂದಾಗಿಸಲು ಸ್ಥಳೀಯ ಮುಖಂಡರೊಬ್ಬರು ಭಾರಿ ಯೋಜನೆ ರೂಪಿಸಿದ್ದರು. ‘ಇದಕ್ಕೆ ಸುತಾರಾಂ ನಮ್ಮ ಒಪ್ಪಿಗೆ ಇಲ್ಲ’ ಎಂದು ಖಡಕ್ ಆಗಿ ಹೇಳಿದ ಮಾಜಿ ಶಾಸಕರಿಬ್ಬರು ಮತ್ತು ಇತರ ಮುಖಂಡರು, ‘ಬೊಮ್ಮಾಯಿಯವರನ್ನು ಓಲೇಕಾರ ಅವರು ಬಾಯಿಗೆ ಬಂದಂತೆ ಬಯ್ದಾಗ ನಾವೆಲ್ಲರೂ ಉಗ್ರ ಹೋರಾಟ ಮಾಡಿದ್ದೆವು. ಈಗ ನೀವು ‘ಭಾಯಿ ಭಾಯಿ’ ಎಂದು ಹೊರಟರೆ ನಮ್ಮ ಗತಿಯೇನು? ನೀವು ಸಂಧಾನ ಮಾಡಿಕೊಂಡರೆ, ನಮ್ಮನ್ನು ಚುನಾವಣಾ ಪ್ರಚಾರಕ್ಕೆ ಕರೆಯಬೇಡಿ. ಇದು ಹೊರತುಪಡಿಸಿ ದೂಸ್ರಾ ಮಾತೇ ಇಲ್ಲ’ ಎಂದರಂತೆ.

ಇದರಿಂದ ಬೊಮ್ಮಾಯಿ ಮದ್ಯ ಮಾಲೀಕರೊಂದಿಗೆ ಮಾತನಾಡಿ, ‘ಬಂದ ದಾರಿಗೆ ಸುಂಕವಿಲ್ಲ’ ಎಂದು ಹೊರಟುಬಿಟ್ಟರಂತೆ.

ADVERTISEMENT

2023ರ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ನೆಹರು ಓಲೇಕಾರ, ‘ನನ್ನ ಬೆಳವಣಿಗೆ ಸಹಿಸದೇ ಬೊಮ್ಮಾಯಿ ಟಿಕೆಟ್ ತಪ್ಪಿಸಿದ್ದಾರೆ. ಬೊಮ್ಮಾಯಿ ಸಿ.ಎಂ ಆದ ನಂತರ ರಾಜ್ಯದಲ್ಲಿ ಪಕ್ಷ ಕುಸಿಯಿತು’ ಎಂದು ಆರೋಪಿಸಿದ್ದರು. ಅಂದಿನಿಂದ ಪಕ್ಷದ ಚಟುವಟಿಕೆಯತ್ತ ಅವರು ಮುಖ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.