ADVERTISEMENT

ದೇವೇಗೌಡರ ಗೆಲುವಿನ ಗುಟ್ಟು ಈ 48 ಗಂಟೆ!

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2014, 6:23 IST
Last Updated 14 ಏಪ್ರಿಲ್ 2014, 6:23 IST
ಚನ್ನರಾಯಪಟ್ಟಣ ತಾಲ್ಲೂಕು ಗನ್ನಿಕಡದ ರಸ್ತೆಬದಿಯಲ್ಲಿ ಸೇರಿದ್ದ ಜನರೊಂದಿಗೆ ಎಚ್‌.ಡಿ. ದೇವೇಗೌಡ ಸಂವಾದ ನಡೆಸಿ ಮತ ಯಾಚಿಸಿದರು.
ಚನ್ನರಾಯಪಟ್ಟಣ ತಾಲ್ಲೂಕು ಗನ್ನಿಕಡದ ರಸ್ತೆಬದಿಯಲ್ಲಿ ಸೇರಿದ್ದ ಜನರೊಂದಿಗೆ ಎಚ್‌.ಡಿ. ದೇವೇಗೌಡ ಸಂವಾದ ನಡೆಸಿ ಮತ ಯಾಚಿಸಿದರು.   

ಹಾಸನ: ಇನ್ನೂ ಬೆಳಕು ಹರಿಯುವ ಮೊದಲೇ (ರಾತ್ರಿ 2.30ಕ್ಕೆ) ಹಾಸನಕ್ಕೆ ಬಂದು ವಿಶ್ರಾಂತಿ ಪಡೆದ ದೇವೇಗೌಡರು,  ಭಾನುವಾರ ಸೂರ್ಯ ಹುಟ್ಟುವ ಮುಂಚೆ ಎದ್ದು ಹೊಳೆನರಸೀಪುರಕ್ಕೆ ಪ್ರಯಾಣ ಬೆಳೆಸಿದರು.

ಊರಿನಲ್ಲಿರುವ ತಮ್ಮ ಮನೆಯಲ್ಲೇ ಸ್ನಾನ, ಪೂಜೆ, ಉಪಾಹಾರ ಮುಗಿಸಿ, ನಂತರ ಊರಿನ ಈಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕ ಪ್ರಚಾರ ಕಣಕ್ಕೆ ಇಳಿದರು.

ಪ್ರತಿ ಬಾರಿಯ ಚುನಾವಣೆಯಲ್ಲೂ ಪ್ರಚಾರದ ಕೊನೆಯ ಎರಡು ದಿನಗಳು ದೇವೇಗೌಡರಿಗೆ ಅತ್ಯಂತ ಮಹತ್ವದ ಮತ್ತು ಬಿಡುವಿಲ್ಲದ ದಿನಗಳು. ನಾಮಪತ್ರ ಸಲ್ಲಿಸಿ ಹೋಗಿದ್ದ ದೇವೇಗೌಡರು ಭಾನುವಾರ ಜಿಲ್ಲೆಗೆ ಬಂದು ಪ್ರಚಾರ ನಡೆಸಿದರು.

ದೇವೇಗೌಡರ ಚುನಾವಣಾ ಪ್ರಚಾರ ವ್ಯವಸ್ಥಿತವಾಗಿರುತ್ತದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಪಕ್ಷದ ಧ್ವಜದ ಚಿತ್ರ ಹೊಂದಿರುವ, ಮೈಕ್‌ ವ್ಯವಸ್ಥೆ ಇರುವ ಇನ್ನೋವಾ ಕಾರಿನ ಮುಂದಿನ ಸೀಟಿನಲ್ಲಿ ಕುಳಿತು ಹೊರಟರೆೇ ದಾರಿಯಲ್ಲಿ ಎದುರಾಗುವ ಜನರಿಗೆ ಕೈಮುಗಿಯುತ್ತ ಮುಂದೆ ಸಾಗುವುದು ಚುನಾವಣಾ ಪ್ರಚಾರದ ಒಂದು ಭಾಗ.

ದೇವೇಗೌಡರು ಹೊಳೆನರಸೀಪುರ ಬಿಡುತ್ತಿದ್ದಂತೆಯೇ ಎಲ್ಲ ಕೇಂದ್ರಗಳಿಗೂ ಸುದ್ದಿ ಮುಟ್ಟಿರುತ್ತದೆ. ಪ್ರತಿ ಹಳ್ಳಿಯಲ್ಲೂ ಹತ್ತಾರು ಜನರು ಸೇರಿ ಹೂ ಮಾಲೆ ಹಾಕಿ ಅವರ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸುತ್ತಿದ್ದರು. ಕಾರಿನಿಂದ ಇಳಿದು ಬಿಸಿಲಿನಲ್ಲಿ ನಡೆಯುತ್ತ ಮತ ಕೇಳುವ ಪ್ರಮೇಯ ದೇವೇಗೌಡರಿಗೆ ಬರಲಿಲ್ಲ. ಆದರೆ, ಅಲ್ಲಲ್ಲಿ ಅಭಿಮಾನಿಗಳು ಕೈಚಾಚಿದಾಗ ಗಾಡಿ ನಿಲ್ಲಿಸದೆ ಮುಂದೆ ಹೋಗಲು ಅವರಿಂದ ಸಾಧ್ಯವಾಗಲಿಲ್ಲ. ಹತ್ತಿಪ್ಪತ್ತು ಜನರಿರುವ ಕಡೆ ಎಲ್ಲರಿಗೂ ಕೈಮುಗಿದು ‘ವೋಟ್‌ ಕೊಟ್ಟು ಗೆಲ್ಲಿಸಿ, ನಿಮಗಾಗಿ ಕೆಲಸ ಮಾಡುತ್ತೇನೆ’ ಎನ್ನುತ್ತಿದ್ದರು.

ಗೌಡರು ಬರುವ ವಿಚಾರ ತಿಳಿದು ಗನ್ನಿಕಡದಲ್ಲಿ 50ಕ್ಕೂ ಹೆಚ್ಚು ಜನರು ಸೇರಿದ್ದರು. ಕಾರು ಬರುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಮಾಲೆ ಹಾಕಿದರು. ದೇವೇಗೌಡರು ಕಾರಿನಿಂದ ಇಳಿದು ಎರಡು ನಿಮಿಷ ಮಾತನಾಡಿದರು. ‘ರಾಜ್ಯದಲ್ಲಿ 15 ಸ್ಥಾನ ಗೆಲ್ಲಲೇಬೇಕು ಎಂದು ಇನ್ನಿಲ್ಲದ ಶ್ರಮ ಹಾಕುತ್ತಿದ್ದೇವೆ. ಅದಕ್ಕಾಗಿ ತಡವಾಗಿ ಬಂದಿದ್ದೇನೆ. ಎಲ್ಲರನ್ನೂ ಮಾತನಾಡಿಸಲು ಸಾಧ್ಯವಾಗಿಲ್ಲ. ಅದಕ್ಕೆ ಸಮಯಾವಕಾಶವೂ ಇಲ್ಲ. ನೀವೇ ದೇವೇಗೌಡರೆಂದು ಭಾವಿಸಿ ಮತ ನೀಡಿ’ ಎಂದು ಮನವಿ ಮಾಡಿದರು.

ಅಭಿಮಾನಿಗಳು ಜೈಕಾರ ಕೂಗಿದರು. ದೇವೇಗೌಡರು ಕೈಮುಗಿಯುತ್ತ ಕುಳಿತರು. ಗಾಡಿ ಅಲ್ಫಾನ್ಸೊ ನಗರದ ಚರ್ಚ್‌ ಕಡೆಗೆ ಸಾಗಿತು. ಚರ್ಚ್‌ಗೆ ಬರುವಷ್ಟರಲ್ಲಿ ಸಮಯ 11.30 ಆಗುತ್ತಾ ಬಂದಿತ್ತು. ಭಾನುವಾರದ ಪ್ರಾರ್ಥನೆಗೆ ಬಂದಿದ್ದವರು ಮನೆಗೆ ಮರಳಿದ್ದರು. ಫಾದರ್‌ ಹಾಗೂ ಇನ್ನೂ ಕೆಲವರು ಕಾಯುತ್ತ ಕುಳಿತಿದ್ದರು. ದೇವೇಗೌಡರ ಕಾರು ಬರುವಷ್ಟರಲ್ಲಿ ಇನ್ನೂ ಒಂದಷ್ಟು ಜನರು ಬಂದರು. ಧರ್ಮಗುರುಗಳು ಅವರಿಗೆ ಹೂಮಾಲೆ ಹಾಕಿ ಶುಭ ಹಾರೈಸಿದರು. ಅಲ್ಲಿಂದ ಸಕ್ಕರೆ ಕಾರ್ಖಾನೆ, ಹಿರೀಸಾವೆ. ಮಟ್ಟನವಿಲೆ... ಹೀಗೆ ಓಡಾಡಿ ಮಧ್ಯಾಹ್ನದ ವೇಳೆಗೆ ಚನ್ನರಾಯಪಟ್ಟಣ ತಲುಪಿದರು.

ಅಷ್ಟರಲ್ಲಿ ಪಟ್ಟಣದಲ್ಲಿ ನಾಲ್ಕಾರು ಸಾವಿರ ಜನರು ಬಂದು ಸೇರಿದ್ದರು. ದೇವೇಗೌಡರು ಕಾರಿನಿಂದ ಇಳಿದು ತೆರೆದ ವಾಹನ ಏರಿದರು. ಜೊತೆಗೆ, ಶಾಸಕ ಸಿ.ಎನ್‌. ಬಾಲಕೃಷ್ಣ ಹಾಗೂ ಇತರರೂ ಸೇರಿಕೊಂಡರು. ಬಸ್‌ ನಿಲ್ದಾಣ ಸಮೀಪದಿಂದ ಟ್ಯಾಕ್ಸಿ ಸ್ಟ್ಯಾಂಡ್‌ವರೆಗೆ ಮೆರವಣಿಗೆ ನಡೆಯಿತು.

ಸುಡು ಬಿಸಿಲಿನಲ್ಲಿ, ಶಾಮಿಯಾನದಡಿ ಸಾರ್ವಜನಿಕ ಸಭೆ ವ್ಯವಸ್ಥೆ ಮಾಡಲಾಗಿತ್ತು. ಜನರನ್ನು ಉದ್ದೇಶಿಸಿ ಮಾತನಾಡಿದ ಗೌಡರು, ‘ದೇವೇಗೌಡರಿಗೆ ಅಧಿಕಾರದ ಹುಚ್ಚಿದೆ ಎಂದು ಭಾವಿಸಬೇಡಿ. ಅಂಥ ವ್ಯಕ್ತಿ ನಾನಲ್ಲ. ಎರಡು ಬಾರಿ ನಾನು ಮಂತ್ರಿ ಪದವಿಯನ್ನೇ ತ್ಯಜಿಸಿದ್ದೇನೆ.

ಮಾಜಿ ಪ್ರಧಾನಿ ಎಂಬ ಪಟ್ಟ ನನ್ನ ಹಿಂದೆ ಸದಾಕಾಲ ಇರುತ್ತದೆ. ನಾನು ಇನ್ನೂ ಬೇಕಾದಷ್ಟು ಕೆಲಸ ಮಾಡಬೇಕಾಗಿದೆ. ರಾಜ್ಯದ ಮೂಲೆಮೂಲೆಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರೈತರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಅವರ ಪರ ಕೆಲಸ ಮಾಡಬೇಕು. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತ್ತೆ ಪ್ರಧಾನಿಯಾದರೂ ನಿಮ್ಮನ್ನು ಯಾವ ಕಾರಣಕ್ಕೂ ಮರೆಯುವುದಿಲ್ಲ. ನಿಮ್ಮನ್ನು ಮರೆತರೆ ನನ್ನ ಜನ್ಮ ಸಾರ್ಥಕವಾಗುವುದಿಲ್ಲ’ ಎಂದು ಕೈಮುಗಿದು ಮತ ಯಾಚಿಸಿದರು.

ಅಭಿಮಾನಿಗಳು ಮತ್ತೆ ದೇವೇಗೌಡರಿಗೆ ಜೈಕಾರ ಹಾಕಿದರು. ಅಲ್ಲಿಂದ ದೇವೇಗೌಡರ ಪ್ರಯಾಣ ಹೊಳೆನರಸೀಪುರದತ್ತ ಸಾಗಿತು. ಅಲ್ಲಿಂದ ಅರಕಲಗೂಡು, ರಾಮನಾಥಪುರ... ಹೀಗೆ ಹಲವು ಹಳ್ಳಿಗಳಲ್ಲಿ ಸಾಗಿತು. ಸಂಜೆ ವೇಳೆಗೆ ಅವರು ಮೈಸೂರು ತಲುಪಬೇಕಾಗಿತ್ತು. ಸೋಮವಾರ ಬೆಳಿಗ್ಗೆ ಮತ್ತೆ ಬರುತ್ತೇನೆ. ಚುನಾವಣೆಗೂ ಮುನ್ನ ನಿಮ್ಮನ್ನು ಮತ್ತೆ ಭೇಟಿಯಾಗಲು ಸಾಧ್ಯವಾಗಲಾರದು. ಆದರೆ, ನಿಮ್ಮನ್ನು ಮರೆಯುವುದಿಲ್ಲ ಎಂಬುದು ಸತ್ಯ ಎಂದು ಕೈಮುಗಿದು ಮುಂದೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.