ADVERTISEMENT

ಹೆಬ್ಬಾಗಿಲ ಕಣದಲ್ಲಿ ಹೊರಗಿನವರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2014, 20:38 IST
Last Updated 5 ಏಪ್ರಿಲ್ 2014, 20:38 IST

ಗಾಜಿಯಾಬಾದ್: ಉತ್ತರ ಪ್ರದೇಶದಲ್ಲಿ ಮತದಾನ ಆರಂಭಕ್ಕೆ ಇನ್ನೊಂದು ವಾರ ಉಳಿದಿದೆ. ಒಟ್ಟು 80 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ನಡೆಯುವ ಈ ಚುನಾವಣೆ­ಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ರಾಜಕೀಯ ಪಕ್ಷಗಳು ಪೈಪೋಟಿಗಿಳಿದಿವೆ. ನರೇಂದ್ರ ಮೋದಿ, ರಾಹುಲ್‌ ಗಾಂಧಿ, ಸೋನಿಯಾ ಮತ್ತು ರಾಜನಾಥ್‌ ಸಿಂಗ್‌ ಸೇರಿದಂತೆ ಬಹಳಷ್ಟು ಘಟಾನುಘಟಿಗಳು ಇಲ್ಲಿಂದಲೇ ಅಖಾಡಕ್ಕಿಳಿ­ದಿರುವುದರಿಂದ ಸಹಜವಾಗಿಯೇ ಈ ಚುನಾವಣೆಯತ್ತ ಎಲ್ಲರ ಚಿತ್ತವಿದೆ. ಏ. 10ರಂದು ಗಾಜಿಯಾಬಾದ್‌, ಮೀರಠ್‌, ಮುಜಫ್ಫರ್‌ನಗರ, ಸಹಾರನಪುರ ಸೇರಿದಂತೆ ಹತ್ತು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಗಾಜಿಯಾಬಾದ್‌ ಉತ್ತರ ಪ್ರದೇಶದ ‘ಹೆಬ್ಬಾಗಿಲು’. ದೆಹಲಿಗೆ ಹೊಂದಿಕೊಂಡಿರುವ ಈ ನಗರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಹಾಗೆಂದಾಕ್ಷಣ  ಸಮಸ್ಯೆಗಳೇ ಇಲ್ಲವೆಂದಲ್ಲ. ವಿಶಾಲ ರಸ್ತೆಗಳು, ಮೆಟ್ರೊ ರೈಲು, ಮುಗಿಲೆತ್ತರಕ್ಕೆ ನಿಂತ ಕಟ್ಟಡಗಳ ನಡುವೆ ಬದುಕು ಕಟ್ಟಿಕೊಳ್ಳಲು ಪರದಾಡುವ ಗರೀಬರ ಜೋಪಡಿಗಳೂ ಇವೆ. ಕಿತ್ತು ತಿನ್ನುವ ಬಡತನವಿದೆ. ಹಸಿದವರ ಆಕ್ರಂದನವಿದೆ. ಮಾಸಿದ ಬಟ್ಟೆಯ, ಎಣ್ಣೆ ಕಾಣದ ತಲೆಗೂದಲಿನ ನಿರ್ಗತಿಕ ಮಕ್ಕಳಿದ್ದಾರೆ. ಕಾಯಿಲೆ­ಯಿಂದ ನರಳುವ ವೃದ್ಧರಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನೇ ‘ಅಸ್ತ್ರ’ವಾಗಿ ಬಳಸಿಕೊಂಡು ರಾಜಕೀಯ ಪಕ್ಷಗಳು ಗಾಜಿಯಾಬಾದಿಗೆ ಲಗ್ಗೆ ಹಾಕಿವೆ. ಅಂಗೈಯಲ್ಲಿ ಆಕಾಶ ತೋರುವ ‘ಜಾಣ ತಂತ್ರ’ ಅನುಸರಿಸುತ್ತಿವೆ.
2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಗಾಜಿಯಾಬಾದನ್ನು ಹದಿನೈದನೇ ಲೋಕಸಭೆಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಪ್ರತಿನಿಧಿಸಿದ್ದರು. ಈ ಸಲ ಜಾಗ ಖಾಲಿ ಮಾಡಿದ್ದಾರೆ. ಐದು ವರ್ಷ ಏನೂ ಕೆಲಸ ಮಾಡದ ಹಿರಿಯ ನಾಯಕ ಸೋಲಿನ ಭಯದಿಂದ ಲಖನೌಗೆ ಪಲಾಯನ ಮಾಡಿದ್ದಾರೆಂಬ ಸತ್ಯ ಗುಟ್ಟಾಗಿ ಉಳಿದಿಲ್ಲ. ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ರಾಜನಾಥ್‌ಸಿಂಗ್‌ ಬಗ್ಗೆ ಮತದಾರರು ಅಸಹನೆ– ಅಸಮಾಧಾನದಿಂದ ಆಡುವ ಮಾತುಗಳು ಕಿವಿ ಮೇಲೆ ಬೀಳುತ್ತವೆ.

ಬಿಜೆಪಿ ಇಲ್ಲಿ ಈ ಸಲ ನಿವೃತ್ತ ಸೇನಾ ಮುಖ್ಯಸ್ಥ ಜ. ವಿ.ಕೆ. ಸಿಂಗ್‌ ಅವರನ್ನು ಕಣಕ್ಕಿಳಿಸಿದೆ. ಹರಿಯಾಣ ಮೂಲದ ಸಿಂಗ್‌, ಠಾಕೂರ್‌ ಸಮಾಜಕ್ಕೆ ಸೇರಿದವರು. ಮೊನ್ನೆವರೆಗೂ ಅಣ್ಣಾ ಹಜಾರೆ ಅವರ ಸಹವಾಸದಲ್ಲಿದ್ದವರು. ಭ್ರಷ್ಟಾಚಾರ ನಿರ್ಮೂಲನೆ ಕುರಿತು ಭಾಷಣ ಬಿಗಿದವರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಂಡ ಬಳಿಕವೂ ರಾಳೆಗಣಸಿದ್ಧಿಯಲ್ಲಿ ಹಜಾರೆ ಚಳವಳಿಯಲ್ಲಿ ಭಾಗವಹಿಸಿದವರು. ಅದೇ ಸಂದರ್ಭದಲ್ಲಿ ಸಿಂಗ್‌ ಅವರ ದ್ವಂದ್ವ ನಿಲುವನ್ನು ಎಎಪಿ ನಾಯಕ ಗೋಪಾಲ್‌ ರೈ ಪ್ರಶ್ನಿಸಿದ್ದು. ಇದರಿಂದ ಸಿಟ್ಟಿಗೆದ್ದ ಅಣ್ಣಾ ಹಳ್ಳಿ ತೊರೆಯುವಂತೆ ರೈ ಅವರಿಗೆ ತಾಕೀತು ಮಾಡಿದ್ದು. ಈಗದು ಮುಗಿದ ಅಧ್ಯಾಯ.
ಗಾಜಿಯಾಬಾದ್‌ ಮತದಾರರಿಗೆ ಜ. ಸಿಂಗ್‌ (ನಿವೃತ್ತ) ಪರಿಚಯವಿಲ್ಲ. ಬಿಜೆಪಿ ಕಾರ್ಯಕರ್ತರಿಗೂ ಅವರು ಹೊಸಬರು. ಈ ಕಾರಣಕ್ಕೆ ಸಿಂಗ್‌ ಅವರನ್ನು ಸ್ಥಳೀಯರು ಬಲವಾಗಿ ವಿರೋಧಿಸು­ತ್ತಿದ್ದಾರೆ. ಅವರು ಪಾಲ್ಗೊಂಡಿದ್ದ ಪಕ್ಷದ ಮೊದಲ ಸಭೆಯಲ್ಲೇ ಧಿಕ್ಕಾರದ ಘೋಷಣೆಗಳು ಪ್ರತಿಧ್ವನಿಸಿದ್ದವು. ‘ಸಿಂಗ್‌ ವಾಪಸ್‌ ಹೋಗಿ. ನಮಗೆ ಸ್ಥಳೀಯ ನಾಯಕರು ಬೇಕು’ ಎಂದು ಕೆಲವು ಕಾರ್ಯಕರ್ತರು ಕೂಗಿದ್ದರು. ತಾವು ಹೊರಗಿನವರೆಂಬ ವಾದವನ್ನು ಸಿಂಗ್‌ ತಳ್ಳಿಹಾಕುತ್ತಿದ್ದಾರೆ. ‘ದೇಶ ಕಾಯುವ ಯೋಧರಿಗೆ ಗಡಿಯ ಕಟ್ಟುಪಾಡುಗಳೆಲ್ಲಿ?’ ಎಂದು ಕೇಳುತ್ತಿದ್ದಾರೆ. ಮತದಾರರಿಗೆ ಬಿಜೆಪಿ ಅಭ್ಯರ್ಥಿ ಹೊಸಬರಾದರೇನಂತೆ. ಅವರ ಬೆಂಬಲಕ್ಕೆ ಮೋದಿ ಇದ್ದೇ ಇದ್ದಾರಲ್ಲ.

ಇವರಿಗೂ ಅದೇ ಸಮಸ್ಯೆ: ಕಾಂಗ್ರೆಸ್‌ ಅಭ್ಯರ್ಥಿ– ಬಾಲಿವುಡ್ ನಟ ರಾಜ್‌ ಬಬ್ಬರ್‌ ಮತ್ತು ಎಎಪಿ ಅಭ್ಯರ್ಥಿ ಶಾಜಿಯಾ ಇಲ್ಮಿ ಅವರಿಗೂ ಇದೇ ಸಮಸ್ಯೆ. ಎರಡು ದಶಕದ ಹಿಂದೆಯೇ ಲೋಕಸಭೆಗೆ ಆಯ್ಕೆಯಾಗಿದ್ದ ರಾಜ್‌ ಬಬ್ಬರ್‌ ಅವರಿಗೆ ಕ್ಷೇತ್ರ ಬದಲಾವಣೆ ಸಾಮಾನ್ಯ ಸಂಗತಿ. ರಾಜ್‌ ಬಬ್ಬರ್‌ ಮೊದಲಿಗೆ ಆಗ್ರಾ, ಬಳಿಕ ಫತೇಪುರ್‌ ಸಿಕ್ರಿ ಪ್ರತಿನಿಧಿಸಿದ್ದರು. ಫಿರೋಜಾಬಾದ್‌ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ ಯಾದವ್‌ ಎದುರು ಸೋತಿದ್ದರು. ಗಾಜಿಯಾಬಾದ್‌ ಅವರಿಗೆ ನಾಲ್ಕನೇ ಕ್ಷೇತ್ರ. ಮೂಲತಃ ಆಗ್ರಾದವರಾದ ರಾಜ್‌ ಬಬ್ಬರ್‌ ಅವರಿಗೂ ಕಾಂಗ್ರೆಸ್‌ನೊಳಗೆ ವಿರೋಧವಿದೆ. 2009ರಲ್ಲಿ ರಾಜನಾಥ್‌ಸಿಂಗ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದ ಎಸ್‌.ಪಿ. ಗೋಯಲ್‌ ಈಗ  ಟಿಕೆಟ್‌ ವಂಚಿತರಾಗಿದ್ದಾರೆ. ಅಸಮಾಧಾನಗೊಂಡಿರುವ ಗೋಯಲ್‌ ಪಕ್ಷದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ದೂರುಗಳಿವೆ.

ಎಎಪಿ ಬಗ್ಗೆ ಕೆಲ ಸ್ಥಳೀಯರು ಉತ್ಸಾಹದಿಂದ ಮಾತನಾಡುತ್ತಾರೆ. ‘ಜಡ್ಡು ಹಿಡಿದಿರುವ ರಾಜಕೀಯ ವ್ಯವಸ್ಥೆಗೆ ಸಾಣೆ ಹಿಡಿಯಲು ಅರವಿಂದ ಕೇಜ್ರಿವಾಲ್‌ ಅವರಂಥ ನಾಯಕರ ಅಗತ್ಯವಿದೆ’ ಎಂದು ಹೇಳುತ್ತಿದ್ದಾರೆ. ಅವರ ಮಾತುಗಳು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆ ಆಗಲಿವೆ ಎನ್ನುವುದು ಪ್ರಶ್ನೆ. ಗಾಜಿಯಾಬಾದಿನಿಂದ ಪತ್ರಕರ್ತೆ ಶಾಜಿಯಾ ಇಲ್ಮಿ ಅವರನ್ನು ಎಎಪಿ ಕಣಕ್ಕಿಳಿಸಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆರ್‌.ಕೆ. ಪುರಂ ಕ್ಷೇತ್ರದಿಂದ ಶಾಜಿಯಾ ಸೋತಿದ್ದರು.

ಸಮಾಜವಾದಿ ಪಕ್ಷ ಜಾಟ್‌ ಸಮುದಾಯದ ಸುಧನ್‌ ರಾವತ್‌, ಬಹುಜನ ಸಮಾಜ ಪಕ್ಷ ಬ್ರಾಹ್ಮಣ ಸಮಾಜದ ಮುಕುಲ್‌ ಉಪಾಧ್ಯಾಯ ಅವರಿಗೆ ಟಿಕೆಟ್‌ ನೀಡಿವೆ. ಉತ್ತರ ಪ್ರದೇಶದ ಚುನಾವಣೆ ನಡೆಯುವುದೇ ಜಾತಿ– ಧರ್ಮದ ಆಧಾರದ ಮೇಲೆ. ಅದೂ ಕಳೆದ ವರ್ಷದ ಮುಜಫ್ಫರ್‌ ನಗರದ ಕೋಮು ಗಲಭೆ ಬಳಿಕವಂತೂ ಹಿಂದೂ, ಮುಸ್ಲಿಮರು ಎರಡು ಗುಂಪುಗಳಾಗಿ ಒಡೆದು ಹೋಗಿದ್ದಾರೆ. ಹಿಂದೂ ಮತಗಳನ್ನು ಒಗ್ಗೂಡಿಸಲು ಬಿಜೆಪಿ ಹರಸಾಹಸ ಮಾಡುತ್ತಿದೆ. ಮುಸ್ಲಿಮರು, ದಲಿತರು ಹಾಗೂ ಬ್ರಾಹ್ಮಣ ಸಮುದಾಯಗಳ ಸಮೀಕರಣಕ್ಕೆ ಮಾಯಾವತಿ ತಂತ್ರ ರೂಪಿಸಿದ್ದಾರೆ. ಮುಸ್ಲಿಮರು, ಹಿಂದುಳಿದ ವರ್ಗಗಳ ಬೆಂಬಲಕ್ಕೆ ಎಸ್‌ಪಿ ಹವಣಿಸುತ್ತಿದೆ. ಬಿಜೆಪಿಯನ್ನು ಸೋಲಿಸುವ ಪಕ್ಷವನ್ನು ಬೆಂಬಲಿಸುವ ಆಲೋಚನೆ ಅಲ್ಪಸಂಖ್ಯಾತ ಸಮುದಾಯಕ್ಕಿದೆ.

‘ನಾನು ನನ್ನ ಮತವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯವಿರುವ ಪಕ್ಷ ಅಥವಾ ಅಭ್ಯರ್ಥಿಗೆ ಬೆಂಬಲ ಕೊಡುತ್ತೇನೆ’ ಎಂಬ ಗಾಜಿಯಾಬಾದಿನ ಮುರಾದ್‌ ನಗರದ ವಾಹನ ಚಾಲಕ ಮಹಮದ್‌ ಆಸೀಫ್‌ ಅವರ ಮಾತು ಅಲ್ಪಸಂಖ್ಯಾತ ಸಮಾಜ ಯಾವ ದಿಕ್ಕಿನಲ್ಲಿ ಚಿಂತಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿ.

‘ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌– ಆರ್‌ಎಲ್‌ಡಿ ನಡುವೆ ಮೈತ್ರಿ ಏರ್ಪಟ್ಟಿದೆ. ಆರ್‌ಎಲ್‌ಡಿ ಗಾಜಿಯಾಬಾದ್‌ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಮುಜಫ್ಫರ್‌ ನಗರದ ಕೋಮು ಗಲಭೆ ಈ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಮುಸ್ಲಿಮರು, ಜಾಟರು ಒಟ್ಟಾಗಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ’ ಎಂದು ಮತ್ತೊಬ್ಬ ವಾಹನ ಚಾಲಕ ಅಬ್ದುಲ್‌ ರಹೀಂ ಅಭಿಪ್ರಾಯಪಡುತ್ತಾರೆ.

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯ ಕಂಡು ರೋಸಿದ್ದೇವೆ. ಭ್ರಷ್ಟಾಚಾರ ಹಗರಣಗಳು– ಬೆಲೆ ಏರಿಕೆಯ ಸಮಸ್ಯೆಯಿಂದ ನಾವು ತತ್ತರಿಸಿದ್ದೇವೆ. ರಾಜಕೀಯ ವ್ಯವಸ್ಥೆ ಬದಲಾವಣೆ ಆಗಬೇಕಿದೆ. ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಲು ಮನಸಿಲ್ಲ. ಮೋದಿ ಸಮರ್ಥ ನಾಯಕತ್ವ ಕೊಡಬಹುದೆಂಬ ನಂಬಿಕೆ ಇದೆ’ ಎಂದು ಗಾಜಿಯಾಬಾದ್‌ ಹೊಟೇಲ್‌ ಮಾಲೀಕ ಉಪೇಂದರ್‌ ಹೇಳುತ್ತಾರೆ.

‘ಗಾಜಿಯಾಬಾದಿನಲ್ಲಿ ಇನ್ನೂ ಬೇಕಾದಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ನನ್ನ ಅಂಗಡಿ ಮುಂದೆಯೇ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮೇಲೆ ನಿತ್ಯವೂ ಸಂಚಾರ ಅಸ್ತವ್ಯಸ್ತವಾಗುತ್ತದೆ. ಅಖಿಲೇಶ್‌ ಯಾದವ್‌ ಸರ್ಕಾರದ ಬಗ್ಗೆ ಬೇಕಾದಷ್ಟು ನಿರೀಕ್ಷೆಗಳಿತ್ತು. ಇದುವರೆಗಿನ ಆಡಳಿತ ಬೇಸರ ತಂದಿದೆ’ ಎಂದು ಫೋಟೋ ಸ್ಟಾಟ್‌ ಅಂಗಡಿ ಮಾಲೀಕ ಹರಿ ಓಂ ತ್ಯಾಗಿ ವಿಷಾದದ ದನಿಯಲ್ಲಿ ಹೇಳುತ್ತಾರೆ.

ಎಸ್‌ಪಿ ಮತ್ತು ಬಿಎಸ್‌ಪಿ ಸರ್ಕಾರದ ಆಡಳಿತವನ್ನು ಮತದಾರರು ಹೋಲಿಕೆ ಮಾಡಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಮಾಯಾವತಿ ಆಡಳಿತ ಕುರಿತು ಅಲ್ಲಲ್ಲಿ ಶ್ಲಾಘನೆ ಮಾತುಗಳು ಕೇಳಿಬರುತ್ತವೆ. ಇಡೀ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಕಂಡು ಬರುವುದಿಲ್ಲ. ಅಭ್ಯರ್ಥಿಗಳು ರೋಡ್‌ ಷೋ, ಬಹಿರಂಗ ಸಭೆಗಳನ್ನು ನಡೆಸುತ್ತಿದ್ದಾರೆ. ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ ಪ್ರಚಾರ ಮಾಡಿ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.