ADVERTISEMENT

ಮತ್ತೆ ಬಹಿರಂಗವಾದ ಕಾಂಗ್ರೆಸ್‌ ಒಳಜಗಳ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST

ಬೆಂಗಳೂರು: ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ ಒಳಗಿನ ಭಿನ್ನಮತ ಮತ್ತೊಮ್ಮೆ ಬಹಿರಂಗವಾಗಿದೆ.

ಸರ್ಕಾರ ಮತ್ತು ಪಕ್ಷದ ಮಧ್ಯೆ ಸಮನ್ವಯ ಕೊರತೆ ಇದೆ. ಸಚಿವರುಗಳು ಕೆಪಿಸಿಸಿ ಕಚೇರಿ ಕಡೆಗೆ ಮುಖ ಮಾಡುತ್ತಿಲ್ಲ ಎಂದು ಪರಮೇಶ್ವರ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಎದುರಿನಲ್ಲೇ ಪರಮೇಶ್ವರ ಅತೃಪ್ತಿ ಹೊರಹಾಕಿದ್ದಾರೆ.

ADVERTISEMENT

‘ಸರ್ಕಾರದ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಪಕ್ಷ ಮಾಡುತ್ತದೆ. ಆದರೆ, ಪರಸ್ಪರ ಸಮನ್ವಯ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಯಾವುದೇ ಯೋಜನೆಗಳನ್ನು ಹಾಕಿಕೊಳ್ಳುವಾಗ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಪರಮೇಶ್ವರ ಹೇಳಿದ್ದಾರೆ.

ಸಚಿವರ ಗೈರು: ಸಭೆಯಲ್ಲಿ ಭಾಗವಹಿಸುವಂತೆ 30 ಸಚಿವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ರೋಷನ್‌ ಬೇಗ್‌, ಆರ್‌.ವಿ. ದೇಶಪಾಂಡೆ, ಎಚ್‌. ಆಂಜನೇಯ, ಎಚ್‌.ಎಂ. ರೇವಣ್ಣ, ಎಚ್‌.ಕೆ. ಪಾಟೀಲ ಈ ಐವರು ಮಾತ್ರ ಹಾಜರಾಗಿದ್ದರು. ಸಚಿವರ ಅನುಪಸ್ಥಿತಿಗೆ ವೇಣುಗೋಪಾಲ ಮತ್ತು ಪರಮೇಶ್ವರ ಇಬ್ಬರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ಮುಖಂಡರ ಕೈಗೆ ಮಂತ್ರಿಗಳು ಸಿಗುವುದಿಲ್ಲ. ಪಕ್ಷ ಸಂಘಟನೆಗೆ ಅವರ ಕೊಡುಗೆ ಏನೇನೂ ಇಲ್ಲ. ಜಿಲ್ಲಾ ಅಧ್ಯಕ್ಷರ ಜೊತೆಗೂ ಸಂಪರ್ಕ ಇಲ್ಲ. ಸಚಿವರಿಗೆ ಕರೆ ಮಾಡಿದರೆ ಆಪ್ತ ಸಹಾಯಕರು ಎತ್ತಿಕೊಂಡು ಉತ್ತರ ಕೊಡುತ್ತಾರೆ. ಸಚಿವರು ಪಕ್ಷ ಸಂಘಟನೆಗೆ ಆಪ್ತ ಸಹಾಯಕರನ್ನೇ ನೇಮಿಸಲಿ ಎಂದು ಪರಮೇಶ್ವರ ಅಸಮಾಧಾನ ಹೊರಹಾಕಿದ್ದಾರೆ.

‘ಪಕ್ಷದ ಕೆಲಸ ಮಾಡದವರು ಮತ್ತು ಗೈರಾದವರು ಪದಾಧಿಕಾರಿಗಳಾಗಲು ನಾಲಾಯಕ್. ಅಂಥವರನ್ನು ಪದಾಧಿಕಾರಿ ಸ್ಥಾನದಿಂದ ಕಿತ್ತು ಹಾಕಲಾಗುವುದು’ ಎಂದೂ ಪರಮೇಶ್ವರ ಎಚ್ಚರಿಸಿದ್ದಾರೆ.

ಕೆಪಿಸಿಸಿಯ 300 ಪದಾಧಿಕಾರಿಗಳ ಪೈಕಿ 80 ಮಂದಿ ಗೈರಾಗಿದ್ದರು. ‘ಯಾಕೆ ಬಂದಿಲ್ಲ’ ಎಂದು ಪ್ರಶ್ನಿಸಿದ ವೇಣುಗೋಪಾಲ್‌, ‘ಕರ್ನಾಟಕದ ಚುನಾವಣೆ ಬಗ್ಗೆ ಎಐಸಿಸಿ ತುಂಬಾ ಭರವಸೆ ಇಟ್ಟಿದೆ. ಬೂತ್‌ಮಟ್ಟದ ಕಾರ್ಯಕರ್ತರು 24X7 ಸಕ್ರಿಯರಾಗಿರಬೇಕು’ ಎಂದು ತಾಕೀತು ಮಾಡಿದ್ದಾರೆ.

ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬಳಕೆ ಕುರಿತಂತೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಮಾತ್ರ ಮಾತಾಡಬೇಕು. ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ವೀಕ್ಷಕರು ಸಮೀಕ್ಷೆ ನಡೆಸಿ ವರದಿ ನೀಡಲಿದ್ದಾರೆ. ಹೈಕಮಾಂಡ್‌ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದೆ ಎಂದೂ ವೇಣುಗೋಪಾಲ್‌ ತಿಳಿಸಿದ್ದಾರೆ.

ಫೆ. 10ರಿಂದ ರಾಹುಲ್‌ ಪ್ರವಾಸ

ಫೆ. 10ರಿಂದ 12ರವರೆಗೆ ಮೂರು ದಿನ ರಾಹುಲ್‌ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ’ ಎಂದು ವೇಣುಗೋಪಾಲ್‌ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆ ಪ್ರಚಾರ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ 10ರಿಂದ 12 ಬಾರಿ ಕರ್ನಾಟಕಕ್ಕೆ ಬರಲಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಅವರಿಗೆ ಹೆಚ್ಚು ಆಸಕ್ತಿ ಇಲ್ಲ. ರೋಡ್‌ ಶೋ, ಸಂವಾದ, ರೈತರು, ಕಾರ್ಮಿಕರು ಸೇರಿದಂತೆ ವಿವಿಧ
ವಲಯಗಳಲ್ಲಿರುವವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಬಿಜೆಪಿಯವರು ಕೌರವರು...!

‘ಚುನಾವಣೆ ಯುದ್ಧ ಇದ್ದಂತೆ. ಬಿಜೆಪಿಯರೆಲ್ಲ ಕೌರವರ ಹಾಗೆ. ಕಾಂಗ್ರೆಸ್‌ನವರು ಪಾಂಡವರು ಇದ್ದಂತೆ. ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಬಿಜೆಪಿಯ ಹಿಂದುತ್ವ ಕಾರ್ಯಸೂಚಿ ವಿರುದ್ಧ ಪರಿಣಾಮಕಾರಿ ಪ್ರತಿತಂತ್ರ ರೂಪಿಸಬೇಕು’ ಎಂದು ಮುಖ್ಯಮಂತ್ರಿ ಪದಾಧಿಕಾರಿಗಳಿಗೆ ಸಲಹೆ
ನೀಡಿದ್ದಾರೆ.

ಚುನಾವಣೆಗೆ ಸಿದ್ಧವಾಗುವ ಉದ್ದೇಶದಿಂದ ಕೆಪಿಸಿಸಿಗೆ 300 ಪದಾಧಿಕಾರಿಗಳನ್ನು ನೇಮಿಸಲಾಗಿದೆ. 173 ಕಾರ್ಯದರ್ಶಿಗಳಿಗೆ ಒಂದೊಂದು ವಿಧಾನಸಭಾ ಕ್ಷೇತ್ರಗಳ ಹೊಣೆ ನೀಡಲಾಗಿದೆ. ಒಟ್ಟು 73 ಪ್ರಧಾನ ಕಾರ್ಯದರ್ಶಿಗಳಿದ್ದು, ಪ್ರತಿಯೊಬ್ಬ ಪ್ರಧಾನ ಕಾರ್ಯದರ್ಶಿಗೆ ನಾಲ್ಕು ಕ್ಷೇತ್ರಗಳು,
ಉಪಾಧ್ಯಕ್ಷರಿಗೆ  ತಲಾ ಎರಡು ಜಿಲ್ಲೆಗಳ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.