ADVERTISEMENT

ಮತದಾರರ ಅರಿವಿಗೆ ಕಾರ್ಪೊರೇಟ್‌ ಶೈಲಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
(ಚುನಾವಣಾ ಆಯೋಗದ ವೆಬ್‌ಸೈಟ್‌ ಚಿತ್ರ)
(ಚುನಾವಣಾ ಆಯೋಗದ ವೆಬ್‌ಸೈಟ್‌ ಚಿತ್ರ)   

ಬೆಂಗಳೂರು: ವಿಧಾನಸಭೆ ಚುನಾವಣೆ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಕ್ರಿಯಾಶೀಲ ಪ್ರಚಾರ ವಿಧಾನ ಅನುಸರಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

ಚಲನಚಿತ್ರ ನಟ– ನಟಿಯರಿಗಿಂತ ಪ್ರಭಾವ ಬೀರುವ ಸಾಮರ್ಥ್ಯವಿರುವ ಇತರ ಕ್ಷೇತ್ರಗಳ ಗಣ್ಯರನ್ನು ಬಳಸಿಕೊಳ್ಳಲು ಆಯೋಗ ನಿರ್ಧರಿಸಿದೆ ಎಂದು ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

‘ಈ ಹಿಂದೆ ಮತದಾರರಲ್ಲಿ ಅರಿವು ಮೂಡಿಸಲು ಚಲನಚಿತ್ರ ನಟರೊಬ್ಬರನ್ನು ಪ್ರಚಾರ ರಾಯಭಾರಿಯನ್ನಾಗಿ ಬಳಸಿಕೊಳ್ಳಲಾಗಿತ್ತು. ಆದರೆ, ಮತದಾನದ ಸಂದರ್ಭದಲ್ಲಿ ಮತ ಚಲಾಯಿಸಲು ಅವರು ಬರಲಿಲ್ಲ. ಇದರಿಂದ ನಮ್ಮ ಉದ್ದೇಶ ವಿಫಲವಾಯಿತು. ಈ ಕಾರಣಕ್ಕೆ ನಾವು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದೇವೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಬಾಲಿವುಡ್‌, ಸ್ಯಾಂಡಲ್‌ವುಡ್‌ ನಟ– ನಟಿಯರಿಗಿಂತ ಕ್ರೀಡೆಗಳು ಮತ್ತು ಪ್ಯಾರಾ ಒಲಿಂಪಿಕ್‌ ಸ್ಪರ್ಧೆಯಲ್ಲಿ ಗೆದ್ದ ಕ್ರೀಡಾ ಪಟುಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಸಲ ದೃಶ್ಯ– ಮುದ್ರಣ ಮಾಧ್ಯಮಗಳಿಗೆ ನೀಡುವ ಜಾಹೀರಾತುಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಹಿಂದೆ ಜಾಹೀರಾತುಗಳು ಸರ್ಕಾರಿ ಶೈಲಿಯಲ್ಲಿ ಇರುತ್ತಿದ್ದವು. ಆಕರ್ಷಕ ಶೈಲಿ ಮತ್ತು ವಿನ್ಯಾಸವನ್ನು ಜಾಹೀರಾತು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.

ರಸೀದಿಗಳಲ್ಲಿ ಸಂದೇಶ

ಮತದಾನದ ಅರಿವು ಮೂಡಿಸುವುದಕ್ಕೆ ಸಂಬಂಧಿಸಿದ ಸಂದೇಶಗಳನ್ನು ‘ಬೆಂಗಳೂರು ಒನ್’ ಮತ್ತು ‘ಕರ್ನಾಟಕ ಒನ್’ ಕೇಂದ್ರಗಳಲ್ಲಿ ನೀಡುವ ರಸೀದಿಗಳಲ್ಲಿ ಮುದ್ರಿಸಲು ಚುನಾವಣಾ ಆಯೋಗ ಉದ್ದೇಶಿಸಿದೆ. ನಗರದಲ್ಲಿ 140 ‘ಬೆಂಗಳೂರು ಒನ್‌’ ಕೇಂದ್ರಗಳಿವೆ. ರಾಜ್ಯದಲ್ಲಿ 45 ‘ಕರ್ನಾಟಕ ಒನ್‌’ ಕೇಂದ್ರಗಳಿವೆ. ಇವೆರಡೂ ಕೇಂದ್ರಗಳಿಂದ ಪ್ರತಿ ದಿನ ಸುಮಾರು ಒಂದು ಲಕ್ಷ ರಸೀದಿಗಳು ಸೃಷ್ಟಿಯಾಗುತ್ತವೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದ್ದಾರೆ.

‘ಸರ್ಕಾರದ ರಸೀದಿಗಳ ಹಿಂಭಾಗದ ಸ್ಥಳ ಬಳಸಿಕೊಳ್ಳಬಹುದು. ಈ ಮೂಲಕ ಸಾರ್ವಜನಿಕರಿಗೆ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಬಹುದಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.