ADVERTISEMENT

ಅಮೆರಿಕ ಬಿಟ್ಟರೆ ನಮ್ಮ ರಾಜಕಾರಣಿಗಳೇ ಧಾರಾಳ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ನವದೆಹಲಿ (ರಾಯಿಟರ್ಸ್‌): ಮುಂದಿನ ತಿಂಗಳು ನಡೆಯಲಿರುವ ಲೋಕಸಭಾ ಚುನಾವಣೆಗಾಗಿ  ರಾಜ­ಕಾರಣಿಗಳು ಮತ್ತು ಪಕ್ಷಗಳು ಖರ್ಚು ಮಾಡುವ ಹಣದ ಮೊತ್ತ ರೂ. 30 ಸಾವಿರ ಕೋಟಿಗೂ ಹೆಚ್ಚು.

  ಇಡೀ ಜಗತ್ತಿನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹೊರತುಪಡಿಸಿದರೆ ಬೇರೆಲ್ಲೂ ಈ ಪ್ರಮಾಣದ ಹಣ ಚುನಾವಣಾ ಪ್ರಚಾರಕ್ಕಾಗಿ ವೆಚ್ಚವಾಗುವುದಿಲ್ಲ. ಬಿಕ್ಕಟ್ಟು ಎದುರಿಸುತ್ತಿರುವ ಭಾರತದ ಅರ್ಥ ವ್ಯವಸ್ಥೆಗೂ ಈ ಪ್ರಮಾಣದ ಹಣ ಹರಿದು ಬಂದಾಗ ತಾತ್ಕಾಲಿಕ ಹುರುಪು ದೊರೆಯಬಹುದು ಎಂದು ವಿಶ್ಲೇಷಿಸಲಾಗಿದೆ.

ಲಕೋಟೆಯಲ್ಲಿ ಹಣ ತುಂಬಿಸಿ ಮತದಾರರ ಕೈಗಿರಿಸುವುದರಿಂದ ತೊಡಗಿ ಬಹುಕೋಟಿ ಜಾಹೀ­ರಾತು ಪ್ರಚಾರ ಸೇರಿ ಒಟ್ಟು ಪ್ರಚಾರದ ವೆಚ್ಚ ರೂ. 30 ಸಾವಿರ ಕೋಟಿ ಮೀರಬಹುದು ಎಂದು  ಖರ್ಚಿನ ಮೇಲೆ ನಿಗಾ ಇರಿಸುವ ಸೆಂಟರ್‌ ಫಾರ್ ಮೀಡಿಯ ಸ್ಟಡೀಸ್‌ ಅಂದಾಜಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ವೆಚ್ಚ­ವಾಗಿದೆ ಎಂದು ಸೆಂಟರ್‌ ಫಾರ್‌ ಮೀಡಿಯ ಸ್ಟಡೀಸ್‌ ಅಂದಾಜಿಸಿರುವ ಮೊತ್ತಕ್ಕಿಂತ ಇದು  ಮೂರು ಪಟ್ಟು ಅಧಿಕ. ಇದಕ್ಕೆ ಮುಖ್ಯ ಕಾರಣ ಕಳೆದ ವರ್ಷದಿಂದಲೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಆರಂಭಿಸಿರುವ ಬಿರುಸಿನ ಪ್ರಚಾರ.

‘ಅವರು ಬಹಳ ಮೊದಲೇ ಪ್ರಚಾರ ಆರಂಭಿ­ಸಿದ್ದಾರೆ. ಸಾಂಪ್ರದಾಯಿಕವಾಗಿ ಬಿಜೆಪಿ ಹೆಚ್ಚು ಪ್ರಬಲ­ವಾಗಿ ಇಲ್ಲದ ಪ್ರದೇಶಗಳ ಮೇಲೆಯೇ ಗಮನ ಕೇಂದ್ರೀಕರಿಸಿದ್ದಾರೆ. ಎಲ್ಲ ಸಾಧ್ಯತೆ­ಗಳನ್ನೂ ಅವರು ಪರಿಶೀಲಿಸುತ್ತಿದ್ದಾರೆ’ ಎಂದು ಸೆಂಟರ್‌ನ ಅಧ್ಯಕ್ಷ ಎನ್‌. ಭಾಸ್ಕರರಾವ್‌ ಹೇಳಿದ್ದಾರೆ.

ಹಣದ ಮೂಲ ಅಸ್ಪಷ್ಟ: ಭಾರತದಲ್ಲಿ ಚುನಾ­ವಣೆಗೆ ಹಣ ಎಲ್ಲಿಂದ ಬರುತ್ತದೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಪ್ರಮುಖ ಪಕ್ಷಗಳು ಮತ್ತು ನಾಯಕರು ಈಗಾಗಲೇ ತಮಗೆ ಅಗತ್ಯ ಇರುವ ಹಣ ಹೊಂದಿಸಿ ಇರಿಸಿಕೊಂಡಿದ್ದಾರೆ ಎಂದು ಸೆಂಟರ್‌ ಫಾರ್‌ ಮೀಡಿಯ ಸ್ಟಡೀಸ್‌ ಮತ್ತು ಇತರ ಪಾರ­ದರ್ಶಕತೆ ಬಗ್ಗೆ ಕೆಲಸ ಮಾಡುವ ಸಂಸ್ಥೆಗಳು ಹೇಳುತ್ತವೆ.

ನಿಯಮ ಪ್ರಕಾರ ಒಬ್ಬ ಲೋಕಸಭಾ ಅಭ್ಯರ್ಥಿ ರೂ. 70 ಲಕ್ಷ ಖರ್ಚು ಮಾಡಬಹುದು. ಆದರೆ ಚುನಾ­ವಣೆ ಗೆಲ್ಲಲು ಅದರ ಹತ್ತು ಪಟ್ಟಿಗೂ ಅಧಿಕ ಹಣ ವೆಚ್ಚ ಮಾಡಬೇಕಾಗುತ್ತದೆ. ಇದರಲ್ಲಿ ಮಾಧ್ಯಮಗಳಿಗೆ ಸುದ್ದಿ ಪ್ರಕಟಿಸುವುದಕ್ಕೆ ನೀಡುವ ಹಣವೂ ಸೇರುತ್ತದೆ ಎಂದು ಮೀಡಿಯ ಸ್ಟಡೀಸ್‌ ಸೆಂಟರ್‌ ಹೇಳುತ್ತದೆ.

ಪ್ರಚಾರದಲ್ಲಿ ಬಿಜೆಪಿ ಮುಂದೆ
ಬಿಜೆಪಿಯು ಈ  ಬಾರಿ ದಕ್ಷಿಣ ಭಾರತದಲ್ಲಿ ಬಹಳ ಬೇಗನೆ ಚುನಾವಣಾ ಪ್ರಚಾರ ಆರಂಭಿಸಿದೆ. ಹಿಂದೆ ಹೆಚ್ಚು ಹಣ ಖರ್ಚು ಮಾಡದ ದಕ್ಷಿಣದಲ್ಲಿ ಈ ಬಾರಿ ಬಿಜೆಪಿ ಹಣ ಖರ್ಚು ಮಾಡುತ್ತಿದೆ ಎಂದು ಸೆಂಟರ್‌ ಫಾರ್‌ ಮೀಡಿಯ ಸ್ಟಡೀಸ್‌ ಹೇಳುತ್ತಿದೆ.

ಏಳು ಸದಸ್ಯರ ತಂಡವೊಂದು ಮೋದಿ ಚುನಾವಣಾ ವೆಚ್ಚಕ್ಕಾಗಿ ಹಣ ಸಂಗ್ರಹ ಮಾಡುತ್ತಿದೆ. ಲಂಡನ್‌ನ ಸಿಟಿಬ್ಯಾಂಕ್‌ನಲ್ಲಿದ್ದ ಮಾಜಿ ಹೂಡಿಕೆ ಬ್ಯಾಂಕರ್‌ ದೀಪಕ್‌ ಮೆಹ್ತಾ ಕೂಡ ಅದರಲ್ಲಿ ಸೇರಿದ್ದಾರೆ. ಅಂತರ್ಜಾಲ ಮೂಲಕ ಭಾರತದಲ್ಲಿ ಹಣ ಸಂಗ್ರಹ ಅಭಿಯಾನವನ್ನು ಈ ತಂಡ ನಡೆಸಿದೆ. ಹಾಗೆಯೇ ಹಾಂಕಾಂಗ್‌ ಮತ್ತು ಸಿಂಗಪುರದಲ್ಲಿ ನೆಲೆಸಿರುವ ಶ್ರೀಮಂತರಿಂದ ಹಣ ಸಂಗ್ರಹಿಸುವ ಉದ್ದೇಶವನ್ನೂ ಈ ತಂಡ ಹೊಂದಿದೆ.

ಈ ತಂಡ ಸುಮಾರು ರೂ. 25 ಕೋಟಿ ಮಾತ್ರ ಸಂಗ್ರಹಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಹಣ ಸಂಗ್ರಹಿಸಲು ಎಷ್ಟು ವ್ಯಾಪಕವಾಗಿರುವ ಜಾಲ ಹೊಂದಿರಬಹುದು ಎಂಬುದನ್ನು ಇದರಿಂದ ಊಹಿಸಬಹುದು ಎಂಬುದು ಸೆಂಟರ್‌ ಫಾರ್‌ ಮೀಡಿಯ ಸ್ಟಡೀಸ್‌ನ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.