ADVERTISEMENT

ಇಂದು ಭವಿಷ್ಯ ಬಯಲು

ಲೋಕಸಭೆ ಚುನಾವಣೆ ಮತ ಎಣಿಕೆ: ಸಂಜೆಯೊಳಗೆ ಸಂಪೂರ್ಣ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 15 ಮೇ 2014, 19:30 IST
Last Updated 15 ಮೇ 2014, 19:30 IST

ನವದೆಹಲಿ (ಪಿಟಿಐ): ಹದಿನಾರನೇ ಲೋಕಸಭಾ ಚುನಾವಣೆಗೆ ಒಂಬತ್ತು ಹಂತಗಳಲ್ಲಿ ನಡೆದ ಮತ­ದಾನದ ಫಲಿತಾಂಶವು ಶುಕ್ರವಾರ (ಮೇ 16) ಪ್ರಕಟ­ವಾಗಲಿದ್ದು, ದೇಶದ ಅಧಿ­ಕಾರದ ಚುಕ್ಕಾಣಿ ಹಿಡಿ­ಯುವವರು ಯಾರು ಎಂಬುದು ಸ್ಪಷ್ಟಗೊಳ್ಳಲಿದೆ.

ದೇಶದಾದ್ಯಂತ 989 ಕೇಂದ್ರಗಳಲ್ಲಿ ಬೆಳಿಗ್ಗೆ 8ಕ್ಕೆ ಮತ ಎಣಿಕೆ ಆರಂಭವಾ­ಗಲಿದ್ದು, ಬಹುತೇಕ ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ. ಸಂಜೆ 5ರ ಹೊತ್ತಿಗೆ ಸಂಪೂರ್ಣ ಚಿತ್ರಣ ಲಭಿಸಲಿದೆ.

543 ಕ್ಷೇತ್ರಗಳಲ್ಲಿ  8251 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಹುತೇಕ ಮತಗಟ್ಟೆ ಸಮೀಪ ಸಮೀಕ್ಷೆಗಳು ಬಿಜೆಪಿ ಅತ್ಯಧಿಕ ಸ್ಥಾನಗಳನ್ನು

ಗಳಿಸಲಿದೆ ಎಂದು ಅಂದಾಜಿಸಿವೆ.

ಮೊದಲಿಗೆ ಅಂಚೆ ಪತ್ರದ ಎಣಿಕೆ: ಚುನಾವಣಾ ಆಯೋಗದ ನಿರ್ದೇಶ­ನದಂತೆ ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ನಂತರ ವಿದ್ಯು­ನ್ಮಾನ ಮತಯಂತ್ರಗಳಲ್ಲಿ ದಾಖಲಾಗಿ­ರುವ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ.

ಮತಯಂತ್ರದ ದತ್ತಾಂಶ ಸಂಗ್ರಹ ಕೋಶವನ್ನು ಎಣಿಕೆ ಕೇಂದ್ರದ ಹಿರಿಯ ಅಧಿಕಾರಿಗಳು, ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ತೆರೆದು ಎಣಿಕೆ ಮಾಡಲಾಗುತ್ತದೆ.

ನೋಟಾ’ ಆಯ್ಕೆ: ಸುಪ್ರೀಂ ಕೋರ್ಟ್‌ ಸೂಚನೆಯಂತೆ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ತಿರಸ್ಕರಿಸುವಂತಹ ‘ಮೇಲಿನವರು ಯಾರು ಅಲ್ಲ’ (ನೋಟಾ) ಎಂಬ  ಆಯ್ಕೆಯನ್ನು ಮತಯಂತ್ರದಲ್ಲೇ ಅಳವಡಿಸಲಾಗಿತ್ತು.

ಈ ಹಿಂದೆ ಇಂತಹ ಆಯ್ಕೆ ಬಯಸುವ ಮತದಾರ ಮತಗಟ್ಟೆ ಅಧಿಕಾರಿಗೆ ನಮೂನೆ 49 ‘ಒ’ ಸಲ್ಲಿಸಬೇಕಿತ್ತು. ಇದರಿಂದ ಮತದಾರನ ಗುರುತು ಬಹಿರಂಗವಾಗುತ್ತಿತ್ತು. ಆದರೆ, ಸುಪ್ರೀಂ ಕೋರ್ಟ್‌ ಇಂತಹ ಆಯ್ಕೆ ಬಯಸಿದ ಮತದಾರನ ಗೋಪ್ಯತೆ ಕಾಪಾಡುವಂತೆ ಸೂಚಿಸಿದ್ದರಿಂದ ಚುನಾವಣಾ ಆಯೋಗ ಕಡ್ಡಾಯವಾಗಿ ‘ನೋಟಾ’ ಆಯ್ಕೆ­ಯನ್ನು ಮತಯಂತ್ರದಲ್ಲೇ  ನೀಡಿತ್ತು.

ಮತದಾರ ವಿದ್ಯುನ್ಮಾನಯಂತ್ರದ ಗುಂಡಿಯೊತ್ತುವ ಮೂಲಕ ಆಯ್ಕೆ ಮಾಡಿದ ಅಭ್ಯರ್ಥಿಗೇ ಮತ ಚಲಾವಣೆ ಆಗಿದೆ ಎಂಬುದನ್ನು ಖಾತರಿ ಪಡಿಸುವ ವ್ಯವಸ್ಥೆಯನ್ನೂ (ವಿವಿಪಿಎಟಿ) ಕೆಲವು ಆಯ್ದ ಕ್ಷೇತ್ರಗಳಲ್ಲಿ ಅಳವಡಿಸಲಾಗಿತ್ತು. ಮತ ಎಣಿಕೆಯಲ್ಲಿ ಸಂದೇಹಗಳು ಉಂಟಾದರೆ ಅಭ್ಯರ್ಥಿಗಳ ಏಜೆಂಟರು ಈ ವಿವಿಪಿಎಟಿ ರಶೀದಿ­ಗಳನ್ನು ಪರಿಶೀಲಿಸುವ ಮೂಲಕ ತಾಳೆ ನೋಡುವ ಅವಕಾಶ­ವನ್ನೂ ನೀಡಲಾ­ಗಿದೆ. ಇದರಲ್ಲಿ ಏನದಾರೂ ವ್ಯತ್ಯಾಸ ಇದ್ದರೆ, ಈ ಕುರಿತ ಅಂತಿಮ ನಿರ್ಧಾರವನ್ನು ಚುನಾವಣಾಧಿಕಾರಿ ತೆಗೆದುಕೊಳ್ಳುತ್ತಾರೆ.

ಚುನಾವಣಾ ಫಲಿತಾಂಶ ಸಂಪೂರ್ಣ­ವಾಗಿ ಹೊರಬಿದ್ದ ಬಳಿಕ ಚುನಾವಣಾ ಆಯೋಗವು ಜಯಗಳಿಸಿದ ಅಭ್ಯರ್ಥಿಗಳ ಪಟ್ಟಿಯ ಅಧಿಸೂಚನೆ ಹೊರಡಿಸಲಿದೆ. ಇದು ನಂತರ 16ನೇ ಲೋಕಸಭೆ ಅಸ್ತಿತ್ವಗೊಳ್ಳಲು ಚಾಲನೆ ನೀಡಲಿದೆ.

2014ರ ಸಾರ್ವತ್ರಿಕ ಚುನಾವಣೆ­ಯಲ್ಲಿ ಶೇ 66.38­ರಷ್ಟು ಮತದಾನ ನಡೆದಿದ್ದು, ಇದು ಸಾರ್ವ­ಕಾಲಿಕ ದಾಖಲೆ ಆಗಿದೆ. ಈ ಸಾರಿ 80.14 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಎನ್‌ಡಿಎಗೆ ಬೆಂಬಲ: ಟಿಆರ್‌ಎಸ್‌ ಗೊಂದಲ
ಹೈದರಾಬಾದ್‌ (ಪಿಟಿಐ):
ಎನ್‌ಡಿಎಗೆ ಬೆಂಬಲ ನೀಡುವು ದಕ್ಕೆ ಸಂಬಂಧಿಸಿದಂತೆ ತೆಲಂಗಾಣ ರಾಷ್ಟ್ರ -ಸಮಿತಿಯಲ್ಲಿ (ಟಿಆರ್‌ಎಸ್‌) ಗೊಂದಲ ಇದ್ದಂತೆ ಕಾಣಿಸುತ್ತಿದೆ. ಎನ್‌ಡಿಎಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ಅವರ ಮಗಳು ಕೆ. ಕವಿತಾ ಹೇಳಿದ್ದಾರೆ. ಎನ್‌ಡಿಎಗೆ ಟಿಆರ್‌ಎಸ್‌ ಬೆಂಬಲ ನೀಡುವುದಿಲ್ಲವೇ ಎಂಬ ಪ್ರಶ್ನೆಗೆ ‘ನಾಳೆ ಏನಾಗುತ್ತದೊ  ಗೊತ್ತಿಲ್ಲ. ಕಲ್ಪಿತ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ’ ಎಂದು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ ಅವರ ಪುತ್ರ ಕೆ.ಟಿ. ರಾಮರಾವ್‌ ಅವರು ತಿಳಿಸಿದ್ದಾರೆ.

ಮತ ಎಣಿಕೆಗೆ ರಾಜ್ಯ ಸಜ್ಜು: ಮಧ್ಯಾಹ್ನದ ವೇಳೆಗೆ ಫಲಿತಾಂಶ
ಬೆಂಗಳೂರು: 
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ 434 ಅಭ್ಯರ್ಥಿಗಳ ಪೈಕಿ ಸಂಸತ್‌ ಪ್ರವೇಶಿಸುವ 28 ಮಂದಿ ಅದೃಷ್ಟಶಾಲಿಗಳು ಯಾರು ಎಂಬುದು ಶುಕ್ರವಾರ ಮಧ್ಯಾಹ್ನದ

ADVERTISEMENT

ವೇಳೆಗೆ ಗೊತ್ತಾಗಲಿದೆ. ರಾಜ್ಯದಲ್ಲಿ ಏಪ್ರಿಲ್‌ 17ರಂದು ಚುನಾವಣೆ ನಡೆದಿದ್ದು, ಅಭ್ಯರ್ಥಿಗಳು, ಕಾರ್ಯಕರ್ತರು 29 ದಿನಗಳಿಂದ ಫಲಿತಾಂಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಎಲ್ಲ 28 ಕೇಂದ್ರಗಳಲ್ಲಿ ಶುಕ್ರವಾರ ಬೆಳಿಗ್ಗೆ 8ಕ್ಕೆ ಮತಎಣಿಕೆ ಆರಂಭ ವಾಗಲಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಎಣಿಕೆ ಕಾರ್ಯ ಮುಕ್ತಾಯವಾಗುವ ನಿರೀಕ್ಷೆ ಇದೆ.
 

ಮತ್ತಷ್ಟು ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.