ADVERTISEMENT

ಕಣಕ್ಕಿಳಿಯಲು ನಾಯಕರು ಹಿಂದೇಟು

ವಾಸನ್‌, ಚಿದಂಬರಂ, ತಿವಾರಿ, ಜಯಂತಿ, ಪೈಲಟ್‌ ಸ್ಪರ್ಧೆ ಅನುಮಾನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST
ಕಣಕ್ಕಿಳಿಯಲು ನಾಯಕರು ಹಿಂದೇಟು
ಕಣಕ್ಕಿಳಿಯಲು ನಾಯಕರು ಹಿಂದೇಟು   

ಚೆನ್ನೈ/ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರತಿಕೂಲ ಫಲಿತಾಂಶ ಬರಬಹುದು ಎಂಬ ಭೀತಿಯಿಂದಾಗಿ ಕೇಂದ್ರದ ಹಲವು ಕಾಂಗ್ರೆಸ್‌ ಸಚಿವರು ಚುನಾವಣಾ ಕಣದಿಂದ ದೂರವೇ ಇರಲು ಉತ್ಸುಕರಾಗಿದ್ದಾರೆ. ಸ್ಪರ್ಧಿಸುವ ಬದಲಿಗೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ನಡೆಸುವುದಾಗಿ ಈ ಅಭ್ಯರ್ಥಿಗಳು ಹೇಳುತ್ತಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದೇ ಇರುವುದರಿಂದ ಅತೃಪ್ತರಾಗಿರುವ ಕೇಂದ್ರ ಬಂದರು ಸಚಿವ ಜಿ.ಕೆ. ವಾಸನ್‌ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ವಾಸನ್‌ ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಗುಲಾಂ ನಬಿ ಆಜಾದ್ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ಡಿಎಂಕೆ ಜೊತೆ ಮೈತ್ರಿಗೆ ಕೊನೆ ಕ್ಷಣದವರೆಗೆ ಶ್ರಮಿಸಿದರೂ ಪ್ರಯೋಜನವಾಗಲಿಲ್ಲ.
ವಾಸನ್‌ ಅವರು ರಾಜ್ಯ ಮಟ್ಟದಲ್ಲಿ ಗಣನೀಯ ಪ್ರಮಾಣದ ಬೆಂಬಲಿಗರ ನೆಲೆ ಹೊಂದಿರುವ ನಾಯಕರಲ್ಲಿ ಒಬ್ಬರು. ಅಂತಹ ನಾಯಕರೇ ಚುನಾವಣಾ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿರು­ವಾಗ ಇತರ ಹಲವು ನಾಯಕರು ಕೂಡ ಅದೇ ಹಾದಿ ಹಿಡಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಚಿದಂಬರಂ ಸ್ಪರ್ಧೆ ಅನುಮಾನ: ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಕೂಡ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ‘ರಾಜ್ಯಸಭೆಯಲ್ಲಿ ತಮಗೊಂದು ಸ್ಥಾನ ಭದ್ರಪಡಿಸಿಕೊಂಡು, ತಾವು ಪ್ರತಿನಿಧಿಸುತ್ತಿರುವ ಶಿವಗಂಗೆ ಕ್ಷೇತ್ರವನ್ನು ಮಗ ಕಾರ್ತಿ ಚಿದಂಬರಂಗೆ ನೀಡಲು ಚಿದಂಬರಂ ಒಲವು ಹೊಂದಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರೊಬ್ಬರು ಹೇಳಿದ್ದಾರೆ.

ಕೇಂದ್ರದ ಮಾಜಿ ಸಚಿವರಾದ ಜಯಂತಿ ನಟರಾಜನ್‌, ಇಳಂಗೋವನ್‌ ಮತ್ತು ತಮಿಳು­ನಾಡು ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಕೆ.ವಿ. ತಂಗಬಾಲು ಆರಂಭದಲ್ಲಿ ಟಿಕೆಟ್‌ ಬಯಸಿದ್ದರೂ ಈಗ ಸ್ಪರ್ಧಿಸಲು ಸಿದ್ಧವಿಲ್ಲ ಎಂದು ಹೇಳುತ್ತಿದ್ದಾರೆ.

ಮತ್ತಷ್ಟು ನಾಯಕರಿಗೆ ಸ್ಪರ್ಧೆ ಬೇಡ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್‌ ತಿವಾರಿ, ಕಾರ್ಪೊರೇಟ್‌ ವ್ಯವಹಾರಗಳ ಸಚಿವ ಸಚಿನ್‌ ಪೈಲಟ್‌, ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ಪ್ರತಾಪ್‌ ಸಿಂಗ್ ಭಾಜ್ವಾ ಕೂಡ ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವುದು ಬೇಡ ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗಿದೆ.

ಪಕ್ಷ ವಹಿಸಿರುವ ಹೊಣೆಗಾರಿಕೆ ನಿಭಾಯಿ­ಸುವು­ದರ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಎರಡೆ­ರಡು ಕೆಲಸ ನಿಭಾಯಿಸಲು ಸಾಧ್ಯವೇ ಎಂದು ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಪ್ರಶ್ನಿಸಿ­ದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಪೈಲಟ್‌ ಮತ್ತು ಭಾಜ್ವಾ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿ­ದ್ದಾರೆ. ಆದರೆ ಪಕ್ಷದ ಪ್ರಧಾನ ಕಾರ್ಯ­ದರ್ಶಿ ಗುರುದಾಸ್‌ ಕಾಮತ್‌, ಕೇಂದ್ರ ಸಚಿವ ಗುಲಾಂ ನಬಿ ಆಜಾದ್‌ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.