ಕಾಸರಗೋಡು (ಪಿಟಿಐ): ಕೇರಳ ಮತ್ತು ಕರ್ನಾಟಕ ಗಡಿಯಲ್ಲಿರುವ ಕಾಸರಗೋಡು ಲೋಕಸಭಾ ಕ್ಷೇತ್ರ ವಿವಿಧ ಭಾಷೆಗಳ ವಿವಿಧ ಉಪಭಾಷೆಗಳನ್ನು ಆಡುವ ಪ್ರದೇಶವಾಗಿರುವುದರಿಂದ ಇಲ್ಲಿನ ಚುನಾವಣಾ ಪ್ರಚಾರವೂ ಬಹುಭಾಷೆಯಿಂದ ವರ್ಣಮಯವಾಗಿದೆ.
ಕನ್ನಡ ಮತ್ತು ಮಲಯಾಳ ಸೇರಿ ಇಲ್ಲಿ ಏಳಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹಾಗಾಗಿ ಉತ್ತರ ಕೇರಳದ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಬಹುಭಾಷಾ ಕೌಶಲವನ್ನೂ ಪಣಕ್ಕೆ ಒಡ್ಡಬೇಕಾಗುತ್ತದೆ.
ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಲ್ಲಿ ಮತ ಯಾಚಿಸಬೇಕಿದ್ದರೆ ಅವರದ್ದೇ ಭಾಷೆಯಲ್ಲಿ ಕೇಳುವುದು ಅನಿವಾರ್ಯ. ಈ ಜಿಲ್ಲೆಯ ಹಲವು ಭಾಗಗಳು ಕರ್ನಾಟಕದ ಗಡಿಯಲ್ಲಿವೆ.
ಇಲ್ಲಿನ ಜನಸಂಖ್ಯೆಯಲ್ಲಿ ಶೇ 35ರಷ್ಟು ಜನರು ಕನ್ನಡಿಗರು. ಕನ್ನಡವಲ್ಲದೆ ತುಳು, ಕೊಂಕಣಿ, ಮರಾಠಿ, ಉರ್ದು ಮತ್ತು ಬ್ಯಾರಿ ಭಾಷೆ ಮಾತನಾಡುವವರೂ ಇದ್ದಾರೆ.
ಹಾಗಾಗಿ ಅಭ್ಯರ್ಥಿಗಳು ತಾವು ಭೇಟಿ ನೀಡುವ ಸ್ಥಳಕ್ಕೆ ಅನುಗುಣವಾಗಿ ಭಾಷೆ ಬದಲಾಯಿಸುತ್ತಾರೆ. ಒಂದು ವೇಳೆ ಅಭ್ಯರ್ಥಿಗೆ ಭಾಷೆಯಲ್ಲಿ ಅಷ್ಟೊಂದು ಹಿಡಿತ ಇಲ್ಲದೇ ಇದ್ದರೆ ಆಯಾ ಪಕ್ಷದ ಕಾರ್ಯಕರ್ತರು ಸಂವಹನ ನಡೆಸಲು ನೆರವಾಗುತ್ತಾರೆ.
ಚುನಾವಣಾ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿರುವ ಗೋಡೆ ಬರಹಗಳಲ್ಲೂ ಬಹು ಭಾಷೆ ಬರವಣಿಗೆಗಳನ್ನು ಕಾಣಬಹುದು. ಪ್ರದೇಶದ ಹೆಚ್ಚಿನ ಭಾಷೆಗಳಲ್ಲಿ ಸುಲಲಿತವಾಗಿ ವ್ಯವಹರಿಸಬಲ್ಲ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಎಳೆದುಕೊಳ್ಳುವ ಪ್ರಯತ್ನಗಳೂ ಇಲ್ಲಿ ನಡೆಯುತ್ತಿವೆ.
ಕ್ಷೇತ್ರದ ಪ್ರಮುಖ ಸ್ಪರ್ಧಿಗಳೆಂದರೆ ಹಾಲಿ ಸಂಸದ, ಸಿಪಿಎಂನ ಪಿ. ಕರುಣಾಕರನ್, ಕಾಂಗ್ರೆಸ್‌ನ ಸಿದ್ದಿಕ್ ಮತ್ತು ಬಿಜೆಪಿಯ ಕೆ. ಸುರೇಂದ್ರನ್.
‘ನಾನು ಮಲಯಾಳದಷ್ಟೇ ನಿರರ್ಗಳವಾಗಿ ಕನ್ನಡ ಮತ್ತು ತುಳು ಮಾತನಾಡಬಲ್ಲೆ. ಉಳಿದ ಭಾಷೆ ಮಾತನಾಡುವವರೊಂದಿಗೆ ಸಂವಹನ ನಡೆಸಲು ಪಕ್ಷದ ಕಾರ್ಯಕರ್ತರು ಸಹಕರಿಸುತ್ತಾರೆ’ ಎಂದು ಸುರೇಂದ್ರನ್ ಹೇಳಿದರು.
ಗೋಡೆ ಬರಹ ಮತ್ತು ಭಿತ್ತಿಪತ್ರಗಳಲ್ಲಿಯೂ ವಿವಿಧ ಭಾಷೆ ಬಳಸುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು. ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡ ಚುನಾವಣಾ ಪ್ರಚಾರದಲ್ಲಿ ಮಹತ್ವ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.