ADVERTISEMENT

ಚಹಾದೊಂದಿಗೆ ಚರ್ಚೆಗೆ ಮತ್ತೆ ತೊಡಕು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಬಿಜೆಪಿಯ ಮೋದಿ ಅವರೊಂದಿಗೆ ‘ಚಹಾ­ದೊಂದಿಗೆ ಚರ್ಚೆ’ ಕಾರ್ಯಕ್ರಮ ಮತ್ತೆ ನೀತಿ ಸಂಹಿತೆಯ ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ.

ಮತದಾನ ಪ್ರಕ್ರಿಯೆ ಆರಂಭ­ವಾಗಿರುವಾಗ ಮತದಾರರಿಗೆ ಇಂತಹ ಆಮಿಷಗಳನ್ನು ಒಡ್ಡುವುದಕ್ಕೆ ಕಾನೂನು ಮತ್ತು ನೀತಿ ಸಂಹಿತೆ ಅನ್ವಯ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಈ ಕಾರ್ಯಕ್ರಮ ಉತ್ತರ ಪ್ರದೇಶದಲ್ಲಿ ಈಗಾಗಲೇ ತೊಂದರೆಗೆ ಸಿಕ್ಕಿಕೊಂಡಿದೆ. ಅಲ್ಲಿ ಚಹಾದೊಂದಿಗೆ ಚರ್ಚೆ ಕಾರ್ಯಕ್ರಮಕ್ಕೆ ಸಂಬಂಧಿಸಿ ಬಿಜೆಪಿಯ ಕೆಲವು ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರಿಗೆ ಉಚಿತವಾಗಿ ಚಹಾ ವಿತರಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಬಿಜೆಪಿಯ ಮೂರನೇ ಹಂತದ ‘ಚಹಾದೊಂದಿಗೆ ಚರ್ಚೆ’ ಕಾರ್ಯ­ಕ್ರಮ ಮಾರ್ಚ್‌ 20ರಂದು ಆರಂಭ­ವಾಗಲಿದೆ. ಅಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರೈತರ ಸಮಸ್ಯೆಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಅಂತರ್ಜಾಲ ಮೂಲಕ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಿದರ್ಭದಿಂದ ರೈತರ ಸಮಸ್ಯೆಗಳಿಗೆ ಉತ್ತರಿಸಲಿದ್ದಾರೆ. ಬೆಳೆ ಹಾನಿ     ಮತ್ತು ಬಡತನದಿಂದಾಗಿ ವಿದರ್ಭದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅತಿ ಹೆಚ್ಚು  ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಸ್ಥಳವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಹಿಂದೆ ಆಯೋಜಿಸಲಾದ ಎರಡು ಚಹಾದೊಂದಿಗೆ ಚರ್ಚೆ ಕಾರ್ಯಕ್ರಮಗಳಲ್ಲಿ ಮೋದಿ ಅವರು ಉತ್ತಮ ಆಡಳಿತ ಮತ್ತು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದ್ದರು.

ತಮಿಳುನಾಡು: ಶೀಘ್ರ ಬಿಜೆಪಿ ಪಟ್ಟಿ
ಕಾಂಚೀಪುರ/ತಮಿಳುನಾಡು(ಪಿಟಿಐ): ತಮಿಳುನಾಡಿನಲ್ಲಿ ಸೀಟು ಹೊಂದಾ­ಣಿಕೆಗೆ ಸಂಬಂಧಿಸಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಮಧ್ಯೆ ಮಾತುಕತೆ ಕೊನೆಗೊಂಡಿದ್ದು, ಎರಡ್ಮೂರು ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್‌ ಸಿಂಗ್‌ ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.

ಸಿಂಗ್‌ ಮತ್ತು ಮಿತ್ರ ಪಕ್ಷಗಳ ಮುಖಂಡರು ಚೆನ್ನೈನಲ್ಲಿ ಮಾರ್ಚ್‌ 18 ಅಥವಾ 19ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಥಾನ ಹೊಂದಾಣಿಕೆ ಮಾತುಕತೆ ಕೊನೆಗೊಂಡಿದೆ ಎಂದು ಶನಿವಾರ ಬಿಜೆಪಿ ಮತ್ತು ಡಿಎಂಡಿಕೆ ಘೋಷಿಸಿದ್ದವು. ಆದರೆ, ವಿವರ ಬಹಿರಂಗಪಡಿಸಲು ನಿರಾಕರಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT