ನವದೆಹಲಿ (ಪಿಟಿಐ): ಕೆಲವು ದಿನಗಳ ಹಿಂದೆಯಷ್ಟೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಹೇಳಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಈಗ ತಮ್ಮ ವರಸೆ ಬದಲಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳುವ ಮೂಲಕ ಅಣ್ಣಾ ಹಜಾರೆ ಅವರು ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುವ ಮಮತಾ ಬ್ಯಾನರ್ಜಿ ಅವರ ಮಹತ್ವಾಕಾಂಕ್ಷೆಗೆ ಶುಕ್ರವಾರ ತಣ್ಣೀರೆರಚಿದ್ದಾರೆ.
‘ತಪ್ಪುದಾರಿಗೆ ಎಳೆಯುವ ಕೆಲವು ಜನರು ಮಮತಾ ಅವರೊಂದಿಗೆ ಸೇರಿದ್ದಾರೆ. ಹಾಗಾಗಿ ಅವರಿಗೆ ಬೆಂಬಲ ನೀಡುವುದಕ್ಕೆ ಕಷ್ಟವಾಗುತ್ತಿದೆ’ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ದೆಹಲಿಯಲ್ಲಿ ಬುಧವಾರ ನಡೆದಿದ್ದ ಬಹು ನಿರೀಕ್ಷಿತ ‘ಜಂಟಿ’ ರ್‍್ಯಾಲಿಗೆ ಗೈರು ಹಾಜರಾಗುವ ಮೂಲಕ ಮಮತಾ ಅವರಿಗೆ ಅಣ್ಣಾ ಹಜಾರೆ ಮುಜುಗರ ಉಂಟು ಮಾಡಿದ್ದರು.
ರ್‍್ಯಾಲಿಗೆ ಗೈರು ಹಾಜರಾದ ನಂತರವೂ ಮಮತಾ ಅವರ ಪ್ರಧಾನಿ ಅಭ್ಯರ್ಥಿತನಕ್ಕೆ ಬೆಂಬಲ ನೀಡುತ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅಣ್ಣಾ, ರ್‍್ಯಾಲಿ ವಿಚಾರದಲ್ಲಿ ತಮ್ಮನ್ನು ತಪ್ಪು ದಾರಿಗೆ ಎಳೆಯಲಾಯಿತು ಎಂದು ಹೇಳಿದ್ದಾರೆ.
ಟಿಎಂಸಿಯ ಚುನಾವಣಾ ಜಾಹೀರಾತಿನಲ್ಲಿ ತಮ್ಮ ಹೆಸರು ಬಳಸುವುದನ್ನು ನಿಲ್ಲಿಸುವಂತೆ ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದ್ದಾಗಿ ಅಣ್ಣಾ ಹೇಳಿದ್ದಾರೆ.
ಹಜಾರೆ ಅವರ 17 ಅಂಶಗಳ ಕಾರ್ಯಸೂಚಿಗೆ ಮಮತಾ ಬ್ಯಾನರ್ಜಿ ಸಮ್ಮತಿಸಿದ್ದ ಹಿನ್ನೆಲೆಯಲ್ಲಿ ಟಿಎಂಸಿಗೆ ಬೆಂಬಲ ನೀಡುವುದಾಗಿ ಅಣ್ಣಾ ಫೆ.19ರಂದು ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.