ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಸಿನಿಮಾ, ಕ್ರೀಡಾ ತಾರೆಯರು ಈ ಸಲದ ಲೋಕಸಭಾ ಚುನಾವಣೆಯ ರಂಗನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಂಬತ್ತು ತಾರೆಯರನ್ನು ಚುನಾವಣಾ ಅಖಾಡಕ್ಕಿಳಿಸಲು ನಿರ್ಧರಿಸಿದ್ದರೆ, ಬಿಜೆಪಿ ಇಬ್ಬರಿಗೆ ಟಿಕೆಟ್ ನೀಡಿದೆ. ಇವರೆಲ್ಲರೂ ಇದೇ ಮೊದಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಸಿನಿಮಾ ದಂತಕತೆ ಸುಚಿತ್ರಾ ಸೆನ್ ಅವರ ಪುತ್ರಿ, ಹಿರಿಯ ನಟಿ ಮೂನ್ ಮೂನ್ ಸೆನ್ ಅವರು ಟಿಎಂಸಿಯಿಂದ ಬಂಕುರಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.
ಜನರ ಸೇವೆ ಮಾಡುವ ಭರವಸೆ ನೀಡಿರುವ ಸೆನ್, ರಾಜಕೀಯದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಲಹೆ ಪಡೆಯುವುದಾಗಿ ಹೇಳಿದ್ದಾರೆ.
ಬಾಲಿವುಡ್ ನಟಿಯರು ಹಾಗೂ ಮೂನ್ ಮೂನ್ ಸೆನ್ ಪುತ್ರಿಯರಾದ ರಿಯಾ ಸೆನ್ ಮತ್ತು ರೈಮಾ ಸೆನ್ ಅವರು ತಮ್ಮ ತಾಯಿಯ ಪರ ಪ್ರಚಾರ ನಡೆಸಲಿದ್ದಾರೆ.
ಬಂಗಾಳದ ಖ್ಯಾತ ನಟ ದೇವ್ ಅವರು ತಮ್ಮ ತವರು ಪಟ್ಟಣ ಪಶ್ಚಿಮ ಮಿಡ್ನಾಪುರ ಜಿಲ್ಲೆಯಿಂದ ಟಿಎಂಸಿ ಟಿಕೆಟ್‌ನಿಂದ ಕಣಕ್ಕೆ ಇಳಿಯಲಿದ್ದಾರೆ. ಮತ್ತೊಬ್ಬ ಹಿರಿಯ ನಟಿ ಸಂಧ್ಯಾ ರಾಯ್ ಮಿಡ್ನಾಪುರ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಪರೀಕ್ಷೆಗೆ ಒಡ್ಡಲಿದ್ದಾರೆ.
ಬೋಸ್ ಮರಿಮೊಮ್ಮಗ ಕಣಕ್ಕೆ: ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ನೇತಾಜಿ ಸುಭಾಷ್‌ಚಂದ್ರ ಬೋಸ್ ಮರಿ ಮೊಮ್ಮಗ 57 ವರ್ಷದ ಸುಗತ ಬೋಸ್ ಅವರು ಕೋಲ್ಕತ್ತದ ಜಾದವ್ಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ದೇಶದಲ್ಲಿ ನಡೆಯಲಿರುವ ರಾಜಕೀಯ ಬದಲಾವಣೆಯ ಭಾಗವಾಗುವುದಕ್ಕಾಗಿ ರಾಜಕೀಯಕ್ಕೆ ಪ್ರವೇಶಿಸಿರುವುದಾಗಿ ಅವರು ಹೇಳಿದ್ದಾರೆ.
ಟಿಎಂಸಿಯ ಇತರ ತಾರಾ ಅಭ್ಯರ್ಥಿಗಳು: ಮಾಜಿ ಫುಟ್‌ಬಾಲ್ ಆಟಗಾರ ಪ್ರಸೂನ್ ಬ್ಯಾನರ್ಜಿ, ಗಾಯಕಿ ಇಂದ್ರನೀಲ್ ಸೆನ್, ಜನಪದ ಗಾಯಕಿ ಸೌಮಿತ್ರಾ ರಾಯ್, ರಂಗಭೂಮಿ ಕಲಾವಿದೆ ಅರ್ಪಿತಾ ಘೋಷ್.
ಬಿಜೆಪಿಯಿಂದ ಇಬ್ಬರು: ಜಾದೂಗಾರ ಪಿ.ಸಿ. ಸರ್ಕಾರ್ (ಜ್ಯೂನಿಯರ್) ಹಾಗೂ ನಟ ಜಾರ್ಜ್ ಬಾಕರ್ ಅವರನ್ನು ಬಿಜೆಪಿಯು ಬರಸಾತ್ ಮತ್ತು ಹೌರಾದಿಂದ ಕಣಕ್ಕಿಳಿಸಿದೆ.
ಬಾಲಿವುಡ್ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಅವರಿಗೆ ಪಶ್ಚಿಮ ಬಂಗಾಳದಿಂದ ಸ್ಪರ್ಧಿಸಲು ಬಿಜೆಪಿಯು ಟಿಕೆಟ್ ನೀಡುವ ಸಾಧ್ಯತೆ ಇದೆ.
ಮಮತಾ ಸಮರ್ಥನೆ: ಸಿನಿಮಾ, ಕ್ರೀಡಾ ಕ್ಷೇತ್ರದ ಗಣ್ಯರಿಗೆ ಟಿಕೆಟ್ ನೀಡಿರುವುದನ್ನು ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮರ್ಥಿಸಿಕೊಂಡಿದ್ದಾರೆ.
‘ಜನಪ್ರಿಯತೆ ಮತ್ತು ಜನರೊಂದಿಗೆ ಅವರು ಹೊಂದಿರುವ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಟೀಕೆ: ಆದರೆ, ಟಿಎಂಸಿಯ ಅಭ್ಯರ್ಥಿಗಳ ಆಯ್ಕೆಯನ್ನು ಕಾಂಗ್ರೆಸ್ ಟೀಕಿಸಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಇನ್ನಷ್ಟೇ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಬೇಕಾಗಿದೆ.
ಮಾಜಿ ಫುಟ್‌ಬಾಲ್ ತಾರೆ, ಭೈಚುಂಗ್ ಭುಟಿಯಾ ಡಾರ್ಜಿಲಿಂಗ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಕ್ರೀಡಾ ಜೀವನ ಕೊನೆಗೊಂಡ ಬಳಿಕ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ತಾವು ಬಯಸಿದ್ದು, ಅದಕ್ಕಾಗಿ ರಾಜಕೀಯ ಸೇರಿರುವುದಾಗಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.