ADVERTISEMENT

ಮತ್ತೆ ವಿವಾದದಲ್ಲಿ ಮೋದಿ

ಮತ ಕೋರಿ ವಿಡಿಯೊ ಸಂದೇಶ

​ಪ್ರಜಾವಾಣಿ ವಾರ್ತೆ
Published 12 ಮೇ 2014, 19:30 IST
Last Updated 12 ಮೇ 2014, 19:30 IST

ನವದೆಹಲಿ (ಪಿಟಿಐ): ಚುನಾವಣೆಯ ಕಡೆಯ ದಿನವಾದ ಸೋಮವಾರ, ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪಕ್ಷಕ್ಕೆ ಮತ ಹಾಕುವಂತೆ ಕೋರಿ ವಿಡಿಯೊ ಸಂದೇಶ ಬಿಡುಗಡೆ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮೋದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಆಗ್ರಹಿಸಿದೆ.

ವಿಡಿಯೊ ಸಂದೇಶದಲ್ಲಿ ಏನಿತ್ತು..?: ‘ಗಂಗಾ ಜಮುನಿ ತೆಹ್‌ಜೀಬ್‌’ ಸಂಸ್ಕೃತಿಯ (ಸಹಬಾಳ್ವೆ ಸಂಸ್ಕೃತಿ) ವಾರಾಣಸಿ ಬಗ್ಗೆ ಮಾತನಾಡಿದ ಮೋದಿ, ‘ಈ ನಗರದ ಒಗ್ಗಟ್ಟು ಹಾಗೂ ಸಾಮರಸ್ಯದ ಸಂಸ್ಕೃತಿಯನ್ನು ಮತಗಳ ಮೂಲಕ ತೋರಿಸಿ­ಕೊಡಿ’ ಎಂದು ಮನವಿ ಮಾಡಿಕೊಂಡಿದ್ದರು.

‘ಇಲ್ಲಿಯ ವರೆಗೆ ಎಷ್ಟು ಉತ್ಸಾಹದಲ್ಲಿ ಪಾಲ್ಗೊಂಡಿ­ದ್ದೀರೋ ಅದೇ ಉತ್ಸಾಹದಲ್ಲಿ ಕೊನೆಯ ಹಂತದ ಮತ­ದಾನ­ದಲ್ಲಿಯೂ ಮತ ಹಾಕಿ.  ಕಾಶಿಯಲ್ಲಿರುವ ನನ್ನ ಸಹೋ­ದರ ಸಹೋದರಿಯೇ,  ಶಾಂತಿ, ಒಗ್ಗಟ್ಟು ಹಾಗೂ ಸಾಮ­ರಸ್ಯದ ಮೇಲೆ ಕಾಶಿಯ ಘನತೆ ನಿಂತಿದೆ.
ಇದೇ   ಗಂಗಾ ಜಮುನಿ ತೆಹ್‌ಜೀಬ್‌. ಇದು ಮತದಾನದಲ್ಲಿಯೂ ಬಿಂಬಿತ­ವಾ­­ಗ­ಬೇಕು. ನಾವೆಲ್ಲ ಒಂದೇ. ನಾವು ಪರಸ್ಪರ ಪ್ರೀತಿಸಬೇಕು ಹಾಗೂ ಸಹಬಾಳ್ವೆ ಮಾಡಬೇಕು’ ಎಂಬ ಸಂದೇಶ ನೀಡಿದ್ದರು.

ಕಾಂಗ್ರೆಸ್‌ ದೂರು:  ‘ಮತದಾರರಲ್ಲಿ ಮನವಿ ಮಾಡಿಕೊ­ಳ್ಳುವ ಮೂಲಕ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಚುನಾವಣಾ ಆಯೋಗವನ್ನು ಕಾಂಗ್ರೆಸ್‌ ಒತ್ತಾಯಿಸಿದೆ.

ಈ ಹಿಂದಿನ ವಿವಾದ: ಏಪ್ರಿಲ್‌ 7ರಂದು ಮೊದಲ ಹಂತದ ಮತದಾನ ನಡೆದಾಗ ಮೋದಿ, ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಏಪ್ರಿಲ್‌ 24ರಂದು ನಡೆದ  ಆರನೇ ಹಂತದ ಮತದಾನದ ವೇಳೆ ಅವರು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸುವುದಕ್ಕೆ ಮುನ್ನ ಭಾರಿ ರೋಡ್ ಷೋ ನಡೆಸಿದ್ದರು. ಅನೇಕ ಸುದ್ದಿ­ವಾಹಿನಿ­ಗಳು ಇದನ್ನು ನೇರ ಪ್ರಸಾರ ಮಾಡಿದ್ದವು. ಆದರೆ ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಏಪ್ರಿಲ್‌ 30ರಂದು ನಡೆದ ಏಳನೇ ಹಂತದ ಮತದಾನದ ವೇಳೆ ಗಾಂಧಿನಗರದ ಮತಗಟ್ಟೆ ಬಳಿ ಮೋದಿ ಪಕ್ಷದ ಚಿನ್ಹೆ ಪ್ರದರ್ಶಿಸಿದ್ದಲ್ಲದೇ ಸುದ್ದಿಗೋಷ್ಠಿ ಕೂಡ ನಡೆಸಿದ್ದರು. ಆಯೋಗದ ಆಣತಿ ಮೇಲೆ  ಮೋದಿ ವಿರುದ್ಧ ಗುಜರಾತ್‌ ಪೊಲೀಸರು ಎರಡು ಎಫ್‌ಐಆರ್‌ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.