ಧರ್ಮಶಾಲಾ (ಪಿಟಿಐ): ಆರ್‌ಎಸ್‌ಎಸ್ ‘ವಿಷಪೂರಿತ ಸಂಘಟನೆ’ಯಾಗಿದ್ದು, ಅದು ದೇಶವನ್ನು ‘ಮುಗಿಸಿ’ ಬಿಡಬಲ್ಲುದು ಎಂಬ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೇಳಿಕೆಯನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆರ್‌ಸ್‌ಎಸ್ ಮತ್ತು ನರೇಂದ್ರ ಮೋದಿ ಅವರ ವಿರುದ್ಧದ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದರು.
ಈ ಚುನಾವಣೆಯು ಚಿಂತನೆಗಳ ನಡುವಣ ಯುದ್ಧ ಎಂದು ರಾಹುಲ್ ಬಣ್ಣಿಸಿದರು. ಕಾಂಗ್ರೆಸ್ ಜನರನ್ನು ಸಶಕ್ತಗೊಳಿಸುವುದರ ಪರವಾಗಿದೆ. ಆದರೆ ಪ್ರತಿಪಕ್ಷ ಶ್ರೀಮಂತರನ್ನು ಮಾತ್ರ ಪ್ರತಿನಿಧಿಸುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರನ್ನು ಟೀಕಿಸಿದ ರಾಹುಲ್, ‘ಆರ್‌ಎಸ್‌ಎಸ್ ಸಿದ್ಧಾಂತದೊಂದಿಗೆ ಇಡೀ ಜೀವನ ಕಳೆದಿರುವ ವ್ಯಕ್ತಿ ಈಗ ಸರ್ದಾರ್ ಪಟೇಲ್ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದಾರೆ. ಅವರು ಇತಿಹಾಸವನ್ನು ಓದಿಯೂ ಇಲ್ಲ, ಪಟೇಲ್ ಅವರ ನಿಲುವುಗಳನ್ನು ಅರ್ಥ ಮಾಡಿಕೊಂಡೂ ಇಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ’ ಎಂದು ರಾಹುಲ್ ಹೇಳಿದರು.
ಬಿಜೆಪಿಯು ಧರ್ಮ, ಜಾತಿ, ಜನಾಂಗ ಮತ್ತು ಪ್ರಾದೇಶಿಕ ನೆಲೆಯಲ್ಲಿ ಜನರನ್ನು ವಿಭಜಿಸುವ ರಾಜಕಾರಣ ಮಾಡುತ್ತಿದೆ ಎಂದು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ರಾಹುಲ್ ಹೇಳಿದರು. ಬಿಜೆಪಿಯು ಹಿಂದುತ್ವದ ಬಗ್ಗೆ ಮಾತನಾಡುತ್ತಿದೆ. ಆದರೆ ಪ್ರೀತಿ ಮತ್ತು ಸಹೋದರತ್ವವನ್ನು ಬೋಧಿಸಿದ ಭಗವದ್ಗೀತೆಯ ತತ್ವಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.