ADVERTISEMENT

ಮೋದಿ ಆಹ್ವಾನ; ಗೊಂದಲದಲ್ಲಿ ಷರೀಫ್

​ಪ್ರಜಾವಾಣಿ ವಾರ್ತೆ
Published 22 ಮೇ 2014, 10:36 IST
Last Updated 22 ಮೇ 2014, 10:36 IST

ಇಸ್ಲಾಮಾಬಾದ್ (ಪಿಟಿಐ): ಭಾರತದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಂದಿರುವ ಪ್ರಮಾಣ ವಚನ ಸಮಾರಂಭದ ಆಹ್ವಾನ ಕುರಿತಂತೆ ಅಂತಿಮ ನಿರ್ಧಾರಕ್ಕೆ ಬರಲಾಗದೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಗೊಂದಲದಲ್ಲಿದ್ದಾರೆ. ಆಡಳಿತ ಮತ್ತು ಸೇನೆಯ ಮುಖಂಡರೊಂದಿಗೆ ಸಮಾಲೋಚಿಸಿ ಗುರುವಾರ ಸಂಜೆಯ ವೇಳೆಗೆ ತಮ್ಮ ನಿರ್ಧಾರ ತಿಳಿಸುವುದಾಗಿ ಅವರು ಹೇಳಿದ್ದಾರೆ.

'ನವದೆಹಲಿಯಲ್ಲಿ ಮೇ 26 ರಂದು ನಡೆಯುವ ಪ್ರಧಾನಮಂತ್ರಿಗಳ ಪದಗ್ರಹಣ ಸಮಾರಂಭದ ಆಹ್ವಾನವನ್ನು ಸ್ವೀಕರಿಸಲಾಗಿದೆ. ಆದರೆ,  ಸಮಾರಂಭಕ್ಕೆ ಹಾಜರಾಗುವ ಕುರಿತಂತೆ ಇವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ' ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಷರೀಫ್‍ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್-ಎನ್) ಪಕ್ಷವು ಭಾರತದೊಂದಿಗಿನ ವಾಣಿಜ್ಯ ಮತ್ತು ಉದ್ಯಮ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನಿಗಳು ಉಭಯ ದೇಶಗಳ ಸಂಬಂಧ ಸುಧಾರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ ಎನ್ನಲಾಗಿದೆ.

`ಅವರು ಸಂಬಂಧಗಳನ್ನು ಸುಧಾರಿಸಬೇಕೆನ್ನುವುದು ಪಕ್ಷದ ಅಧಿಕೃತ ನೀತಿಯಾಗಿದೆ. ಆದರೆ,  ಅವರು ನಿರ್ಧಾರ ತೆಗೆದುಕೊಳ್ಳುವ ಮುನ್ನ ಉಭಯತ್ರರ ಮಧ್ಯದ ಬಾಂಧವ್ಯದ ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ' ಎಂದು ಪಿಎಂಎಲ್‌ಎನ್‌ನ ಹಿರಿಯ ಮುಖಂಡರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

'ಭಾರತದ ನಿಯೋಜಿತ ಪ್ರಧಾನಿಗಳಿಂದ ಅನಿರೀಕ್ಷಿತವಾಗಿ ಬಂದಿರುವ ಆಹ್ವಾನ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವುದು ಷರೀಫ್ ಅವರಿಗೆ ಉಭಯ ಸಂಕಟ ತಂದೊಡ್ಡಿದೆ' ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.