
ನವದೆಹಲಿ (ಪಿಟಿಐ): ‘ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಚುನಾವಣೆ ವೇಳೆ ಸ್ವಕ್ಷೇತ್ರ ಅಮೇಠಿಯಲ್ಲಿ ಮತಗಟ್ಟೆಗಳಿಗೆ ತೆರಳಿದ್ದಾಗ ಕಾನೂನು ಉಲ್ಲಂಘಿಸಿದ್ದಾರೆ’ ಎಂಬ ಆರೋಪಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ವರದಿ ಕೇಳಿದೆ.
‘ರಾಹುಲ್ ಅವರು ಮತಗಟ್ಟೆಗಳಿಗೆ ತೆರಳಿದ್ದ ವೇಳೆ ಮತಯಂತ್ರಗಳ ಮುಂದಕ್ಕೆ ಹೋಗುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ’ ಎಂಬ ಆಪಾದನೆ ಕುರಿತು ರಾಜ್ಯ ಚುನಾವಣಾ ಆಯೋಗದಿಂದ ವರದಿ ಕೇಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವರದಿ ಬಂದ ತಕ್ಷಣ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಜನಪ್ರತಿನಿಧಿ ಕಾಯ್ದೆಯ ಕಾನೂನುಗಳಡಿ ಇದನ್ನು ಪರಾಮರ್ಶಿಸಲಾಗುವುದು ಎಂದರು.
‘ಮತ ಚಲಾವಣೆ ಗೋಪ್ಯತೆಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಏನಾದರೂ ಲೋಪಗಳಿದ್ದರೆ ನಿಶ್ಚಿತವಾಗಿಯೂ ಆ ಬಗ್ಗೆ ಚರ್ಚಿಸಬೇಕಾಗುತ್ತದೆ’ ಎಂದೂ ಸಂಪತ್ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.