
ನವದೆಹಲಿ (ಪಿಟಿಐ) : ನರೇಂದ್ರ ಮೋದಿ ದೇಶದ ಪ್ರಧಾನಿ ಆದಲ್ಲಿ 22 ಸಾವಿರ ಜನರು ಹತ್ಯೆಯಾಗಲಿದ್ದಾರೆ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ಶನಿವಾರ ದೂರು ಸಲ್ಲಿಸಿದೆ.
‘ಒಂದೊಮ್ಮೆ ಮೋದಿ ಪ್ರಧಾನಿ ಆದರೆ 22 ಸಾವಿರ ಮಂದಿಯ ಸಾಮೂಹಿಕ ಹತ್ಯಾಕಾಂಡ ನಡೆಯುವ ಸಾಧ್ಯತೆ ಇದೆ ಎಂದು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಶುಕ್ರವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಅನಂತ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ಮುಖ್ಯ ಚುನಾವಣಾ ಅಧಿಕಾರಿ ವಿ. ಎಸ್. ಸಂಪತ್ ಅವರನ್ನು ಭೇಟಿ ಮಾಡಿ ರಾಹುಲ್ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 30ರಂದು ಮತದಾನದ ವೇಳೆ ಅಹಿತಕರ ಘಟನೆ ಸಂಭವಿಸಲು ಹಲವು ಮತಗಟ್ಟೆಗಳಲ್ಲಿ ಸಿಸಿಟಿವಿ ಮತ್ತು ಕೇಂದ್ರ ಭದ್ರತಾ ಪಡೆ ಇಲ್ಲದಿರುವುದೇ ಕಾರಣ. ಹೀಗಾಗಿ ಮುಂದಿನ 7 ಮತ್ತು 8ನೇ ಹಂತದ ಮತದಾನಕ್ಕೆ ಸಿಸಿಟಿವಿ ಮತ್ತು ಕೇಂದ್ರ ಭದ್ರತಾ ಪಡೆ ನಿಯೋಜಿಸುವಂತೆ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.