ಲಖನೌ: ಕೆಲವು ದಿನಗಳ ಹಿಂದೆ ಚುನಾವಣಾ ರ್‍್ಯಾಲಿಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ಸನ್ನಿಧಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಅಭಿಮಾನಿಗಳು ‘ಸೋಮನಾಥನಿಂದ ವಿಶ್ವನಾಥನವರೆಗೆ’ (ಸೋಮನಾಥ ಗುಜರಾತ್‌ನಲ್ಲಿರುವ ಖ್ಯಾತ ಶಿವ ದೇವಸ್ಥಾನ) ಎಂದು ಘೋಷಣೆಗಳನ್ನು ಕೂಗುತ್ತಿದ್ದರು.
ಪವಿತ್ರ ನಗರ ವಾರಾಣಸಿಯ ಪಕ್ಷದ ಕಾರ್ಯಕರ್ತರಲ್ಲಿ ಮೋದಿ ಪರ ‘ಅಲೆ’ ಇರುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತಿತ್ತು.
ಆದರೆ, ವಾರಾಣಸಿಯಿಂದ ಮೋದಿ ಅವರನ್ನು ಕಣಕ್ಕಿಳಿಸಲು ಈ ‘ಅಲೆ’ ಮಾತ್ರ ಕಾರಣವಲ್ಲ. ಈ ಕ್ಷೇತ್ರ ಉತ್ತರಪ್ರದೇಶದ ಪೂರ್ವಭಾಗದಲ್ಲಿದ್ದರೂ, ಈ ಭಾಗಗಳಲ್ಲಿ ಬಿಜೆಪಿ ದುರ್ಬಲವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ಕ್ಷೇತ್ರದ ಆಸುಪಾಸಿನಲ್ಲಿ ಬಿಹಾರದ ಹಲವು ಲೋಕಸಭಾ ಕ್ಷೇತ್ರಗಳಿವೆ.
ಭೋಜಪುರ, ಆಗ್ರಾ, ಗಯಾ ಮತ್ತು ಸಸಾರಾಂ ಜಿಲ್ಲೆಗಳು ವಾರಾಣಸಿಯಿಂದ ತುಂಬಾ ದೂರದಲ್ಲೇನು ಇಲ್ಲ. ಈ ಜಿಲ್ಲೆಗಳ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
‘ಮೋದಿ ಅವರ ಉಪಸ್ಥಿತಿ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಿಸಲಿದೆ. ಪೂರ್ವ ಭಾಗದ ಹಲವು ಕ್ಷೇತ್ರಗಳ ಫಲಿತಾಂಶಗಳ ಮೇಲೆ ಇದು ಪರಿಣಾಮ ಬೀರಲಿದೆ’ ಎಂದು ಬಿಜೆಪಿ ಮುಖಂಡ ವಿಜಯ್ ಬಹದ್ದೂರ್ ಪಾಠಕ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಬಲಿಯಾ, ಗಾಜಿಪುರ, ದಿಯೋರಿಯಾ, ಮಾವು, ಜೌನ್‌ಪುರ, ಸುಲ್ತಾನಪುರ, ಅಲಹಾಬಾದ್, ಖುಷಿನಗರ ಹಾಗೂ ಈ ಪ್ರಾಂತ್ಯದ ಇತರ ಕ್ಷೇತ್ರಗಳಲ್ಲಿ ಮೋದಿ ಪ್ರಭಾವ ವ್ಯಾಪಿಸಲಿದೆ’ ಎಂದು ಪಾಠಕ್ ಹೇಳಿದ್ದಾರೆ.
ಉತ್ತರಪ್ರದೇಶದ ಪೂರ್ವಭಾಗದಲ್ಲಿ 2009ರ ಚುನಾವಣೆಯಲ್ಲಿ ಬಿಜೆಪಿಗೆ ದಕ್ಕಿದ್ದು ಕೇವಲ ಎರಡೇ ಸ್ಥಾನಗಳು. ಮೋದಿ ಅವರ ಸ್ಪರ್ಧೆಯಿಂದಾಗಿ ಹಿಂದುಳಿದ ವರ್ಗದ ಮತಗಳು ಪಕ್ಷಕ್ಕೆ ಬೀಳಲಿವೆ ಎಂಬ ವಿಶ್ವಾಸವನ್ನು ಉತ್ತರ ಪ್ರದೇಶ ಬಿಜೆಪಿ ಮುಖಂಡರು ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಮೋದಿ ಅವರು ವಾರಾಣಸಿಯಿಂದ ಸ್ಪರ್ಧಿಸುವುದಾದರೆ, ತಾವು ಕೂಡ ಇಲ್ಲಿಂದಲೇ ಕಣಕ್ಕಿಳಿಯುವುದಾಗಿ ವಿವಾದಾತ್ಮಕ ರಾಜಕಾರಣಿ ಹಾಗೂ ಮಾಫಿಯಾ ದೊರೆ ಮುಖ್ತಾರ್ ಅನ್ಸಾರಿ ಈಗಾಗಲೇ ಘೋಷಿಸಿರುವುದರಿಂದ ಇಲ್ಲಿ ಮತಗಳ ಧ್ರುವೀಕರಣ ನಡೆಯುವ ಸಾಧ್ಯತೆಯೂ ಇದೆ.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಮುರಳಿ ಮನೋಹರ ಜೋಶಿ ಅವರಿಗೆ ಅನ್ಸಾರಿ ಭಾರಿ ಪೈಪೋಟಿ ನೀಡಿದ್ದರು.
ಬಿಜೆಪಿಯಲ್ಲಿ ಸಂಭ್ರಮ (ನವದೆಹಲಿ ವರದಿ): ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕಣಕ್ಕಿಳಿಸಿರುವುದು ಬಿಜೆಪಿಯಲ್ಲಿ ವಿಜಯೋತ್ಸಾಹಕ್ಕೆ ಕಾರಣವಾಗಿದೆ.
ಮೋದಿ ಅವರ ಸ್ಪರ್ಧೆಯು ಉತ್ತರ ಪ್ರದೇಶದ ಬಹುಪಾಲು ಕ್ಷೇತ್ರಗಳನ್ನು ಗೆಲ್ಲಲು ಪಕ್ಷಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರಿದ್ದಾರೆ.
ವಾರಾಣಸಿಯಿಂದ ಮೋದಿ ಅವರನ್ನು ಕಣಕ್ಕಿಳಿಸುವ ಸಂಬಂಧ ಶನಿವಾರ ಕೈಗೊಂಡಿರುವ ನಿರ್ಧಾರವು ದೇಶದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿರುವ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 50 ಸ್ಥಾನಗಳನ್ನು ಬಿಜೆಪಿ ತೆಕ್ಕೆಗೆ ತರಲಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಮೋದಿ ವಿರುದ್ಧ ಯಾರೇ ನಿಂತರೂ, ಸುಲಭವಾಗಿ ಗೆಲ್ಲಲಿದ್ದಾರೆ ಎಂದು ರಾಷ್ಟ್ರ, ರಾಜ್ಯ ಮಟ್ಟದ ಬಿಜೆಪಿ ಮುಖಂಡರು ಪ್ರತಿಪಾದಿಸಿದ್ದಾರೆ.
ಮೋದಿ ಅಭ್ಯರ್ಥಿಯಾಗಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಇಮ್ಮಡಿಗೊಳಿಸಲಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
‘ಪಕ್ಷದ ಕಾರ್ಯಕರ್ತರ ನೈತಿಕಸ್ಥೈರ್ಯ ಈಗ ತುಂಬಾ ಉತ್ತಮವಾಗಿದೆ’ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ‘ಸಂಸತ್ತಿನಲ್ಲಿ 272 ಸ್ಥಾನಗಳನ್ನು ಗಳಿಸುವ ಗುರಿಯನ್ನು ನಾವು ತಲುಪಲಿದ್ದೇವೆ ಎಂಬ ವಿಶ್ವಾಸ ನಮಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಪಕ್ಷದ ಮತ್ತೊಬ್ಬ ಮುಖಂಡ ಮುಖ್ತಾರ್ ಅಬ್ಬಾಸ್ ನಕ್ವಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಇದು ಹೋಳಿ ಹಬ್ಬದ ಮುಂಚಿನ ಹೋಳಿ. ಪಕ್ಷದ ನಿರ್ಧಾರವನ್ನು ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
‘ಮೋದಿ ಅವರು ಗುಜರಾತ್ನವರಾದರೂ ನಮ್ಮ ರಾಜ್ಯದಿಂದ ಸ್ಪರ್ಧಿಸುತ್ತಿದ್ದಾರೆ. ಇದು ನಮ್ಮ ಅದೃಷ್ಟ’ ಎಂದು ಉತ್ತರ ಪ್ರದೇಶ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ್ ವಾಜಪೇಯಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಉತ್ತರ ಪ್ರದೇಶದಿಂದ ಆಯ್ಕೆಯಾಗಿ ಅವರು ಪ್ರಧಾನಿಯಾಗಲಿದ್ದಾರೆ’ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಪಕ್ಷದ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಅವರು ಪ್ರತಿನಿಧಿಸುತ್ತಿದ್ದ ವಾರಾಣಸಿಯಿಂದ ಈ ಬಾರಿ ಮೋದಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಶನಿವಾರ ನಿರ್ಧರಿಸಿತ್ತು. ಜೋಶಿ ಅವರು ಕಾನ್ಪುರದಿಂದ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ ಪ್ರಬಲ ಸ್ಪರ್ಧೆ
ನವದೆಹಲಿ (ಪಿಟಿಐ): ವಾರಾಣಸಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೋದಿ ವಿರುದ್ಧ ಪಕ್ಷವು ‘ಪ್ರಬಲ ಸ್ಪರ್ಧೆ’ ನೀಡಲಿದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ.
ಜೊತೆಗೆ ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ಅದು ತಳ್ಳಿಹಾಕಿಲ್ಲ. ‘ನಾವು ಅಲ್ಲಿ ಪ್ರಬಲ ಪೈಪೋಟಿ ನೀಡಲಿದ್ದೇವೆ. ಆದರೆ ಸ್ಥಳೀಯ ಅಥವಾ ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಎಂಬುದನ್ನು ನಿರ್ಧರಿಸಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.