ADVERTISEMENT

ವಿಧಾನಸಭೆ ವಿಸರ್ಜನೆ: ಕೇಂದ್ರ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 15:28 IST
Last Updated 7 ಮಾರ್ಚ್ 2014, 15:28 IST

ನವದೆಹಲಿ (ಪಿಟಿಐ): ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ರಾಜೀನಾಮೆಯ ನಂತರ  ಬಿಜೆಪಿ ಸರ್ಕಾರ ರಚಿಸಲು ಹಕ್ಕು ಮಂಡಿ­ಸುವ ಸಾಧ್ಯತೆ ಇದ್ದುದ್ದರಿಂದ ಮತ್ತು ಸಾರ್ವಜ­ನಿಕ ಹಿತಾಸಕ್ತಿ ದೃಷ್ಟಿಯಿಂದ ದೆಹಲಿ ವಿಧಾನಸಭೆಯನ್ನು ವಿಸರ್ಜಿ­ಸದೇ ಅಮಾ­ನತಿನಲ್ಲಿ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ­ಕೋರ್ಟ್‌ಗೆ ತಿಳಿಸಿದೆ.

ಅಲ್ಪಾವಧಿಯಲ್ಲಿ ಮತ್ತೊಂದು ಚುನಾವಣೆ ನಡೆಸುವುದು ಸಾರ್ವಜನಿಕ ಹಿತಾಸಕ್ತಿಯಿಂದ ಸರಿಯಲ್ಲ ಎಂದು ಲೆ. ಗರ್ವನರ್ ಅವರು ಶಿಫಾರಸು ಮಾಡಿದ್ದ­ರಿಂದ ದೆಹಲಿ ವಿಧಾನ­ಸಭೆ ವಿಸರ್ಜಿ­ಸದೇ ಅಮಾನತಿ­ನಲ್ಲಿಡಲಾ­ಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ­ಕೋರ್ಟಿಗೆ ಸಲ್ಲಿಸಿ­ರುವ ಪ್ರಮಾಣ­ಪತ್ರದಲ್ಲಿ  ಹೇಳಿದೆ.

2013ರ ಡಿಸೆಂಬರ್‌ ಮೊದಲ ವಾರದಲ್ಲಿ ಚುನಾವಣೆ ನಡೆಸಿ ಡಿ. 28­ರಂದು ಸರ್ಕಾರ ರಚಿಸಲಾಯಿತು. ಈಗ ಪುನಃ ಚುನಾವಣೆ ನಡೆಸುವುದು ಸಾರ್ವಜನಿಕ ಹಿತಾಸಕ್ತಿಯಿಂದ  ಯುಕ್ತ­ವಲ್ಲ ಎಂದು ಲೆ. ಗವರ್ನರ್‌  ಅವರು ಶಿಫಾ­ರಸು ಮಾಡಿದ್ದರು. ಲೆ. ಗವರ್ನರ್‌ ಮಾಡಿದ್ದ ಶಿಫಾರಸು ಸರಿಯಾ­ಗಿ­ಯೂ ಮತ್ತು ಆ ಸಂದರ್ಭ­ದಲ್ಲಿ ಪ್ರಸ್ತು­ತವೂ ಆಗಿತ್ತು  ಎಂದು ಪ್ರಮಾಣ ಪತ್ರ­ದಲ್ಲಿ ತಿಳಿಸಲಾಗಿದೆ.

  ದೆಹಲಿಯಲ್ಲಿ ರಾಷ್ಟ್ರಪತಿಗಳ ಆಳ್ವಿಕೆ­ಯನ್ನು ಪ್ರಶ್ನಿಸಿ ಎಎಪಿ ಫೆ. 24ರಂದು ನ್ಯಾಯಾಲ­ಯ­ದಲ್ಲಿ ಅರ್ಜಿ ಸಲ್ಲಿಸಿತ್ತು. ದೆಹಲಿ ವಿಧಾನ­ಸಭೆ ವಿಸರ್ಜಿಸಿ, ಚುನಾವಣೆ ನಡೆಸು­ವಂತೆ ದೆಹಲಿ ಲೆ. ಗವರ್ನರ್‌ ನಿರ್ದೇ­ಶನ ನೀಡ­ಬೇಕೆಂದೂ ಎಎಪಿ ಕೋರ್ಟ್‌­ಗೆ ಮನವಿ ಮಾಡಿತ್ತು.
ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ನೋಟಿಸ್‌ ಜಾರಿ ಮಾಡಿದ ಕೋರ್ಟ್‌,  ಸಂವಿ­ಧಾ­­ನಾತ್ಮಕ ದೃಷ್ಟಿಯಿಂದ ಮಾತ್ರ ಕೋರ್ಟ್‌ ಪ್ರಕರಣದ ವಿಚಾರಣೆ ನಡೆ-­ಸು­ತ್ತದೆಯೇ ಹೊರತು ರಾಜಕೀಯ ದೃಷ್ಟಿಕೋನದಿಂದ ಅಲ್ಲ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.